ಬೆಂಗಳೂರು: ನೀಟ್ ಪರೀಕ್ಷೆ ಕೇಂದ್ರ ಸರ್ಕಾರದ ನಿಯಮಾವಳಿ ಮೂಲಕ ನಡೆಯುತ್ತಿದೆ. ದೇಶಕ್ಕೆ ಏಕರೂಪ ಪ್ರವೇಶ ಪರೀಕ್ಷೆ ಮಾಡಲು ನೀಟ್ ವ್ಯವಸ್ಥೆ ಮಾಡಿದ್ದು, ಇದರಲ್ಲಿ ಪಾಸ್ ಆದವರಿಗೆ ಸೀಟು ಸಿಗದಿರುವ ಪ್ರಶ್ನೆಯೇ ಇಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಸ್ಪಷ್ಟಪಡಿಸಿದರು.
ವಿಧಾನಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಯು.ಬಿ.ವೆಂಕಟೇಶ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ನೀಟ್ ಪರೀಕ್ಷೆಯಲ್ಲಿ ದೇಶದಲ್ಲಿ ಮೊದಲ ರ‍್ಯಾಂಕ್ ಪಡೆದ ವಿದ್ಯಾರ್ಥಿಗೆ ಅವರ ಆಯ್ಕೆಯ ಕಾಲೇಜಿನಲ್ಲಿ ಆಯ್ಕೆಯ ವಿಷಯದಲ್ಲಿ ಉನ್ನತ ವೈದ್ಯಕೀಯ ವಿದ್ಯಾಭ್ಯಾಸ ಪಡೆಯಲು ಸಾಧ್ಯವಾಗದ ಅಸಹಾಯಕವಾಗಿರುವ ಸ್ಥಿತಿ ಬಂದಿದೆ ಎಂದರು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕೌನ್ಸಿಲಿಂಗ್ ಮೂಲಕ ಸೀಟು ಹಂಚಿಕೆ ಪ್ರಕ್ರಿಯೆಯನ್ನು ಮೆರಿಟ್ ಮತ್ತು ಮೀಸಲು ಅನ್ವಯ ನಡೆಸುತ್ತಿದೆ. ಇಲ್ಲಿಯವರೆಗೂ ನೀಟ್ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಪಡೆದಿರುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಸೀಟು ದೊರಕಿದೆ. ಒಂದೊಮ್ಮೆ ದೊರೆತಿರುವ ಸೀಟು ಇಷ್ಟವಾಗದಿದ್ದಲ್ಲಿ ವಿದ್ಯಾರ್ಥಿ ಆಯ್ಕೆಗೆ ಅನುಸಾರವಾಗಿ ಕೋರ್ಸ್ ಬದಲಾಯಿಸಲು ಅವಕಾಶವಿರುತ್ತದೆ. ಇಲ್ಲಿಯವರೆಗೂ ಈ ರೀತಿಯ ಯಾವುದೇ ಸಮಸ್ಯೆ ರಾಜ್ಯದಲ್ಲಿ ಉಂಟಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ನೀಟ್ನಲ್ಲಿ ಉತೀರ್ಣ ಆಗದವರು ವಿದೇಶಕ್ಕೆ ಹೋಗಿ ಓದುವುದು ತಪ್ಪಲ್ಲ. ಇಡೀ ವಿಶ್ವದಲ್ಲಿ ವೈದ್ಯಕೀಯ ಶಿಕ್ಷಣ ತುಟ್ಟಿಯಾಗಿದೆ. ಇದು ಕೇವಲ ರಾಜ್ಯದಲ್ಲಿ ಅಲ್ಲ. ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಇನ್ನು ಅವಕಾಶ ಮಾಡಿ ಕೊಡಲಾಗಿಲ್ಲ. ಶೇ.10ರಷ್ಟು ಮೀಸಲಾತಿ ನೀಡುವ ಬಗ್ಗೆ ಈ ವರ್ಷದಿಂದ ಅನ್ವಯವಾಗುವಂತೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಆಹಾರ ಪದಾರ್ಥ ಕಲಬೆರಕೆ ವಿರುದ್ಧ ಕ್ರಮ: ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಆಹಾರ ಕಲಬೆರಕೆ ವಿಚಾರ ಕುರಿತು ಕಾಂಗ್ರೆಸ್‌ನ ತಿಮ್ಮಯ್ಯ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಆಹಾರ ಪದಾರ್ಥಗಳ ಕಲಬೆರಕೆ ಸರ್ಕಾರದ ಗಮನಕ್ಕೆ ಬಂದಿದೆ. ಕಳೆದೊಂದು ವರ್ಷದ ಅವಧಿಯಲ್ಲಿ ಸುಮಾರು 597 ಪ್ರಕರಣ ದಾಖಲಿಸಿ 23.88 ಲಕ್ಷ ದಂಡ ವಸೂಲು ಮಾಡಲಾಗಿದೆ. ಕಲಬೆರಕೆ ತಡೆಯಲು ಮತ್ತಷ್ಟು ಬಿಗಿ ಕ್ರಮ ಕೈಗೊಳ್ಳಲಾಗುತ್ತದೆ. ಆಹಾರ ಕಲಬೆರಕೆಯ ಪತ್ತೆ ಕಾರ್ಯಕ್ಕೆ 424 ಸಿಬ್ಬಂದಿ ಇರಬೇಕಿತ್ತು.
ಆದರೆ, 130 ಜನ ಸಿಬ್ಬಂದಿ ಇದ್ದಾರೆ. ಇಲಾಖೆಗೆ ಹೊಸ ರೂಪ ನೀಡಬೇಕಿದೆ. ಬೆಂಗಳೂರು, ಮೈಸೂರು, ಬೆಳಗಾವಿ, ಕಲಬುರಗಿಯಲ್ಲಿನ ನಾಲ್ಕು ಪ್ರಯೋಗಾಲಯಗಳನ್ನು ಎನ್ಎಬಿಎಲ್ ಅಕ್ರೆಡೇಷನ್ ಪಡೆದುಕೊಳ್ಳದ ಹಿನ್ನೆಲೆಯಲ್ಲಿ ಮಾನ್ಯತೆ ರದ್ದುಗೊಳಿಸಿದೆ ಎಂದು ಮಾಹಿತಿ ನೀಡಿದರು.
ಸದ್ಯ 11 ಖಾಸಗಿ ಲ್ಯಾಬ್ಗಳಿಂದ ಪರೀಕ್ಷೆ ಮಾಡಿಸುತ್ತಿದ್ದೇವೆ. ಬೆಂಗಳೂರು,ಮೈಸೂರು, ಬೆಳಗಾವಿಯಲ್ಲಿ ಇನ್ನು 3 ತಿಂಗಳಲ್ಲಿ ಮಾನ್ಯತೆ ಸಿಗುತ್ತದೆ. ಬಳಿಕ ಅಲ್ಲೆ ಪರೀಕ್ಷೆ ಆರಂಭ ಮಾಡುತ್ತೇವೆ. ಮತ್ತಷ್ಟು ಬಿಗಿಯಾದ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ಕುರಿ ಕಾಯೋ ಹುಡುಗರು ಬೀಡಿ ಸೇದೋದರಿಂದ ಕಪ್ಪತ್ತುಗುಡ್ಡಕ್ಕೆ ಬೆಂಕಿ: ಬಳಿಕ ಬಿಜೆಪಿ ಸದಸ್ಯ ಎಸ್.ವಿ.ಸಂಕನೂರು ಮಾತನಾಡಿ, ಕಪ್ಪತ್ತಗುಡ್ಡ ಅರಣ್ಯ ಪ್ರದೇಶಕ್ಕೆ ಪದೇ ಪದೆ ಏಕೆ ಬೆಂಕಿ ಬೀಳುತ್ತಿದೆ ಎಂಬುದರ ಬಗ್ಗೆ ಅಧ್ಯಯನ ಮಾಡಬೇಕು ಎಂದರು.
ಇದಕ್ಕೆ ಉತ್ತರಿಸಿದ ಅರಣ್ಯ ಸಚಿವ ಉಮೇಶ್ ಕತ್ತಿ, ಕಳೆದ ಮೂರು ವರ್ಷಗಳ ಅವಧಿಯಲ್ಲಿ ಕಪ್ಪತ್ತಗುಡ್ಡ ಅರಣ್ಯ ಪ್ರದೇಶಕ್ಕೆ 14 ಬಾರಿ ಬೆಂಕಿ ತಗುಲಿದ್ದು, 1.86 ಹೆಕ್ಟೇರ್ ವಿಸ್ತೀರ್ಣದ ಅರಣ್ಯ ಪ್ರದೇಶಕ್ಕೆ ಹಾನಿ ಸಂಭವಿಸಿದೆ. ಗುಡ್ಡದಲ್ಲಿ ಹುಲ್ಲು ಬೆಳೆಯುತ್ತದೆ. ಕುರಿ ಮೇಯಿಸುವವರು ಹೋಗುತ್ತಾರೆ. ಅದರಲ್ಲಿ ಕೆಲವರು ಸೇದಿದ ಬೀಡಿಯನ್ನು ಹಾಗೆ ಎಸೆದು ಹೋಗುತ್ತಾರೆ. ಇದರಿಂದ ಗುಡ್ಡದಲ್ಲಿ ಬೆಂಕಿ ಬೀಳುತ್ತಿದೆ. ಇದು ಬಿಟ್ಟು ಬೇರೆ ಕಾರಣ ಏನಿಲ್ಲ. ಈ ಕುರಿತಂತೆ ಪ್ರತ್ಯೇಕವಾಗಿ ಯಾವುದೇ ರೀತಿಯ ಅಧ್ಯಯನ ನಡೆಸಿಲ್ಲ. ಈ ಸಂಬಂಧ ಸಭೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು.