ಬೆಂಗಳೂರು: ಮೊದಲ ಬಾರಿಗೆ ರೋಗ ಲಕ್ಷಣ ಇಲ್ಲದೆ ಕೊರೊನಾ ಬಂದವರಿಗೆ ಮತ್ತೊಮ್ಮೆ ಕೊರೊನಾ ಬಂದರೆ ಅದರ ತೀವ್ರತೆ ಹೆಚ್ಚಿರುತ್ತದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ವಿಧಾನಸೌಧಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಅಧ್ಯಯನ ಪ್ರಕಾರ ಮೊದಲ ಬಾರಿಗೆ ರೋಗಲಕ್ಷಣ ವಿಲ್ಲದೇ ಕೊರೊನಾ ತಗುಲಿ ಗುಣಮುಖರಾಗಿರುವವರಿಗೆ ಮತ್ತೊಂದು ಬಾರಿ ಕೊರೊನಾ ಬಂದರೆ ಅದರ ತೀವ್ರತೆ ಹೆಚ್ಚಿರುತ್ತದೆ. ಏಕೆಂದರೆ ಇವರಲ್ಲಿ ರೋಗ ನಿರೋಧಕ ಶಕ್ತಿ ಉತ್ಪತ್ತಿ ಆಗಿರುವುದಿಲ್ಲ. ಅದೇ ಮೊದಲ ಬಾರಿ ತೀವ್ರ ರೋಗ ಲಕ್ಷಣ ಕಂಡುಬಂದವರಿಗೆ ಎರಡನೇ ಬಾರಿಗೆ ಕೊರೊನ ಸೋಂಕು ತಗುಲಿದರೆ ಅದರ ತೀವ್ರತೆ ಹೆಚ್ಚು ಇರುವುದಿಲ್ಲ. ಇದು ಅಧ್ಯಯನದಿಂದ ತಿಳಿದು ಬಂದಿದೆ. ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಇಂಥ 5 ಪ್ರಕರಣಗಳು ಪತ್ತೆಯಾಗಿವೆ ಎಂದು ವಿವರಿಸಿದರು.
5-6ಶೇ. ರಷ್ಟು ಕೊರೊನಾ ಮರುಕಳಿಸಿದೆ: ಇನ್ನು ರಾಜ್ಯದಲ್ಲಿ ಶೇ.5-6 ರಷ್ಟು ಮಂದಿಗೆ ಕೊರೊನಾ ಮರುಕಳಿಸಿದೆ ಎಂದು ತಿಳಿಸಿದರು. ರಾಜ್ಯದಲ್ಲಿ 5-6% ರಷ್ಟು ಮಂದಿಗೆ ಕೊರೊನಾ ಮರುಕಳಿಸಿರುವ ಅಂಕಿ- ಅಂಶವೂ ಬೆಳಕಿಗೆ ಬಂದಿದೆ. ಹೀಗಾಗಿ ಒಮ್ಮೆ ಕೊರೊನ ಬಂದರೆ ಮತ್ತೊಮ್ಮೆ ಬರುವುದಿಲ್ಲ ಎಂಬ ತಪ್ಪು ಗ್ರಹಿಕೆ ಬೇಡ. ಲಸಿಕೆ ಬರುವ ತನಕ ಎಲ್ಲರೂ ಮುಂಜಾಗ್ರತೆ ವಹಿಸಲೇಬೇಕು ಎಂದು ಎಚ್ಚರಿಕೆ ನೀಡಿದರು.
ಪಟಾಕಿ ನಿಷೇಧಕ್ಕೆ ತಜ್ಞರ ಸಮಿತಿ ಸಲಹೆ: ದೀಪಾವಳಿ ಹಬ್ಬಕ್ಕೆ ಪಟಾಕಿ ಸಿಡಿಸುವುದನ್ನು ನಿಷೇಧಿಸಲು ತಜ್ಞರ ಸಮಿತಿ ಸಲಹೆ ನೀಡಿದ್ದು, ಸಿಎಂ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಪಟಾಕಿಯಿಂದ ಹೊರ ಹೊಮ್ಮುವ ಹೊಗೆಯಿಂದ ಕೋವಿಡ್ ಸೋಂಕಿತರಿಗೆ ಸಮಸ್ಯೆಯಾಗುವ ಸಾಧ್ಯತೆ ಇದೆ ಎಂದು ತಜ್ಞರ ಸಮಿತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಪಟಾಕಿಯನ್ನು ನಿಗ್ರಹಿಸಲು, ನಿಷೇಧಿಸುವುದು ಒಳಿತು ಎಂಬ ಸಲಹೆ ನೀಡಿದ್ದಾರೆ. ಇದನ್ನು ಸಿಎಂ ಜೊತೆ ಚರ್ಚಿಸಿ ಎರಡು ದಿನಗಳಲ್ಲಿ ತೀರ್ಮಾನ ಕೈಗೊಳ್ಳುತ್ತಾರೆ ಎಂದು ತಿಳಿಸಿದರು.
ಸರಳವಾಗಿ ದೀಪಾವಳಿ ಆಚರಣೆ ಮಾಡಬೇಕು. ಪಟಾಕಿ ಸಿಡಿಸುವುದರಿಂದ ಶಾಸಕೋಶಕ್ಕೆ ತೀವ್ರವಾಗಿ ಸಮಸ್ಯೆ ಆಗುತ್ತದೆ. ಪಟಾಕಿ ಗಾಳಿ ಚಳಿಗಾಲದಲ್ಲಿ ಹೆಚ್ಚು ಇರುತ್ತದೆ ಅದಕ್ಕೆ ಇದನ್ನು ಕೂಡ ಚರ್ಚೆ ಮಾಡಿದ್ದೇವೆ. ಸಿಎಂ ಬೆಂಗಳೂರಿಗೆ ಬಂದ ನಂತರ ಅವರ ಜೊತೆಗೆ ಚರ್ಚೆ ಮಾಡಿ ಅಂತಿಮ ತೀರ್ಮಾನ ಮಾಡುತ್ತೇವೆ ಎಂದರು.
ಕೋವಿಡ್ ನಿಯಂತ್ರಣ ಮಾಡುವ ಬಗ್ಗೆ ನಮ್ಮ ಪರಿಣಿತರ ಜೊತೆಗೆ ಸಭೆ ಮಾಡಿದ್ದೇವೆ. ದೀಪಾವಳಿ ಇದೇ ತಿಂಗಳು ಬರ್ತಿದೆ. ಭವಿಷ್ಯದಲ್ಲಿ ಚಳಿಗಾಲ, ಹಬ್ಬದ ತಿಂಗಳುಗಳು ಆತಂಕ ಇದೆ. ಆರ್.ಆರ್.ನಗರ, ಶಿರಾದಲ್ಲಿ ಹೆಚ್ಚು ಟೆಸ್ಟ್ ಆಗಬೇಕು ಎಂದು ತಜ್ಞರು ಹೇಳಿದ್ದಾರೆ. ಮತಗಟ್ಟೆಯಲ್ಲಿ ಕೆಲಸ ಮಾಡಿದವರನ್ನು ಟೆಸ್ಟ್ಗೆ ಒಳಪಡಿಸಬೇಕು ಎಂದು ತಿಳಿಸಿದ್ದಾರೆ.
ಗ್ರಾಮ ಪಂಚಾಯತಿ ಚುನಾವಣೆಯಾದರೆ, ಡೋರ್ ಡೆಲಿವರಿ ಕೊರೊನಾ ಆಗುತ್ತೆ ಎಂದು ತಜ್ಞರು ಹೇಳಿದ್ದಾರೆ. ಏಕೆಂದ್ರೆ ಇದು ತಳ ಮಟ್ಟದಲ್ಲಿ ನಡೆಯುವ ಚುನಾವಣೆಯಾಗಿದೆ. ಅಭ್ಯರ್ಥಿಗಳು ಪ್ರತಿ ಮನೆಗೆ ಹೋಗುತ್ತಾರೆ. ಗ್ರಾಮ ಪಂಚಾಯತಿ ಚುನಾವಣೆಯನ್ನು ಫೆಬ್ರವರಿಗೆ ಮುಂದೂಡಿಕೆ ಮಾಡಿದ್ರೆ ಒಳ್ಳೆಯದು ಎಂದು ತಜ್ಞರು ಹೇಳಿದ್ದಾರೆ ಎಂದರು.
ನಾನ್ ಕೋವಿಡ್ ಕಾಯಿಲೆ ಇರುವವರು ಯಾವುದೇ ಭಯ ಪಡುವ ಅವಶ್ಯಕತೆ ಇಲ್ಲ. ಅವರುಗಳು ಬೇಗ ಹೋಗಿ ತೋರಿಸಿಕೊಳ್ಳಿ. ಉದಾಹರಣೆಗೆ ಹಲ್ಲು ನೋವು ಇರುತ್ತೆ ಅದನ್ನು ಹಾಗೆ ಬಿಟ್ಟುಬಿಡುತ್ತಾರೆ. ನಾನು ಕೋವಿಡ್ ನವರು ಹೀಗೆ ಬಿಟ್ಟುಕೊಂಡು ಮುಂದೆ ದೊಡ್ಡ ಸಮಸ್ಯೆ ಆಗುವ ಸಾಧ್ಯತೆ ಇರುತ್ತೆ ಅದಕ್ಕೆ ಅವಕಾಶ ಮಾಡಿಕೊಳ್ಳಬೇಡಿ ಎಂದು ಮನವಿ ಮಾಡಿದರು.
ಪೋಸ್ಟ್ ಕೋವಿಡ್ ಸೆಂಟರ್ ತೆರೆಯಲು ಚಿಂತನೆ: ಪೋಸ್ಟ್ ಕೋವಿಡ್ ಸೆಂಟರ್ ತೆರೆಯುವ ಬಗ್ಗೆ ಚಿಂತನೆ ನಡೆಯುತ್ತಿದೆ. ದೀರ್ಘ ಕಾಲದ ವರೆಗೆ ಕೋವಿಡ್ ಇರುವವರಿಗೆ ಟ್ರೀಟ್ಮೆಂಟ್ ಕೊಡುವ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಇದಕ್ಕೆ ರಾಜೀವ್ ಗಾಂಧಿ, ವಿಕ್ಟೋರಿಯಾ, ಬೌರಿಂಗ್, ಕೆ.ಜಿ.ಜನರಲ್ ಆಸ್ಪತ್ರೆ ಸೇರಿದಂತೆ ಸುಮಾರು ಆಸ್ಪತ್ರೆಗಳಲ್ಲಿ ವ್ಯವಸ್ಥೆ ಮಾಡುತ್ತಿದ್ದೇವೆ. ಜೊತೆಗೆ ಜಿಲ್ಲಾ ಆಸ್ಪತ್ರೆಗಳಲ್ಲಿ ಕೂಡ ವ್ಯವಸ್ಥೆ ಮಾಡುತ್ತೇವೆ ಎಂದರು.