ಬೆಂಗಳೂರು: ಕೊರೊನಾ ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹೊಂದಿದ್ದ ನಾಲ್ವರು ಸಚಿವರು ಹಾಗೂ ಓರ್ವ ಶಾಸಕ ಕ್ವಾರಂಟೈನ್ಗೆ ಒಳಗಾಗದೇ ಇರುವ ವಿಷಯ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಸಚಿವರಿಗೋಸ್ಕರ ಕೇಂದ್ರದ ಮಾರ್ಗಸೂಚಿಯನ್ನೇ ಆರೋಗ್ಯ ಇಲಾಖೆ ಗಾಳಿಗೆ ತೂರಿತ್ತಿದೆಯೇ ಎನ್ನುವ ಅನುಮಾನ ಹುಟ್ಟುಹಾಕಿದೆ.
ಕೊರೊನಾ ಸೋಂಕಿತ ರೋಗಿ ಸಂಖ್ಯೆ 475ರ ವ್ಯಕ್ತಿಯ ಟ್ರಾವೆಲ್ ಹಿಸ್ಟರಿ ಬಿಡುಗಡೆ ಮಾಡಿರುವ ಆರೋಗ್ಯ ಇಲಾಖೆಗೆ ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕದ ಮಾಹಿತಿ ನೀಡಿದೆ. ಅದರಲ್ಲಿ ಸ್ಪಷ್ಟವಾಗಿ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಉಪ ಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ್, ಪ್ರವಾಸೋದ್ಯಮ ಸಚಿವ ಸಿ.ಟಿ ರವಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಆರ್.ಟಿ ನಗರದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿರುವುದಾಗಿ ತಿಳಿಸಿದ್ದಾನೆ.
ಈ ಹಿನ್ನೆಲೆ ಐವರೂ ಪ್ರಾಥಮಿಕ ಸಂಪರ್ಕಿತರಾಗುತ್ತಾರೆ. ಕೇಂದ್ರದ ಮಾರ್ಗಸೂಚಿ ಪ್ರಕಾರ ಪ್ರಾಥಮಿಕ ಸಂಪರ್ಕಿತರು ಕಡ್ಡಾಯವಾಗಿ ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ಮಾಡಬೇಕಿದೆ. ಅವರ ಕೊರೊನಾ ವರದಿ ನೆಗೆಟಿವ್ ಬಂದರೂ 14 ದಿನ ಕ್ವಾರಂಟೈನ್ ಕಡ್ಡಾಯ, 12ನೇ ದಿನ ಮತ್ತೆ ಕೊರೊನಾ ಪರೀಕ್ಷೆ ನಡೆಸಬೇಕು ಆಗ ನೆಗಟಿವ್ ಬಂದರೆ 14 ನೇ ದಿನದಂದು ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ನಿಂದ ಬಿಡುಗಡೆ ಮಾಡಿ ಹೋಂ ಕ್ವಾರಂಟೈನ್ಗೆ ಕಳುಹಿಸಬೇಕು, ಅವರ ಕೈಗೆ ಇಂಕ್ ಬಳಸಿ ಕ್ವಾರಂಟೈನ್ ಸೀಲ್ ಹಾಕಬೇಕು. ಅವರ ಮನೆಗೆ ಕ್ವಾರಂಟೈನ್ ನೋಟಿಸ್ ಹಾಕಬೇಕು. ಯಾವ ಕಾರಣಕ್ಕೂ ಪ್ರಾಥಮಿಕ ಸಂಪರ್ಕಿತ ವ್ಯಕ್ತಿಗಳನ್ನು ನೇರವಾಗಿ ಹೋಂ ಕ್ವಾರಂಟೈನ್ಗೆ ಕಳಿಸುವಂತಿಲ್ಲ, ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ಗೆ ಕಳುಹಿಸಬೇಕು.
ಕೇಂದ್ರ ಸರ್ಕಾರದ ನಿಯಮಾವಳಿ ಪ್ರಕಾರ ಪ್ರಾಥಮಿಕ ಸಂಪರ್ಕ ಹೊಂದಿದ ವ್ಯಕ್ತಿಗಳಿಗೆ ಕೊರೊನಾ ನೆಗಟಿವ್ ಬಂದರೂ ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ಕಡ್ಡಾಯ. ಆದರೆ, ರೋಗಿ - 475ರ ಪ್ರಾಥಮಿಕ ಸಂಪರ್ಕ ಹೊಂದಿರುವ ನಾಲ್ವರು ಸಚಿವರು ಹಾಗೂ ಓರ್ವ ಎಂಎಲ್ಸಿಗಾಗಿ ಈ ಮಾರ್ಗಸೂಚಿಯನ್ನೇ ರಾಜ್ಯದ ಆರೋಗ್ಯ ಇಲಾಖೆ ಗಾಳಿಗೆ ತೂರಿರುವಂತಿದೆ. ಈ 5 ಗಣ್ಯರನ್ನು ಕ್ವಾರಂಟೈನ್ ಮಾಡದೇ ಜನಸಾಮಾನ್ಯರಿಗೆ ಒಂದು ನಿಯಮ ಸರ್ಕಾರದ ಸಚಿವರಿಗೆ ಮತ್ತೊಂದು ನಿಯಮ ಎನ್ನುವ ಧೋರಣೆ ಅನುಸರಿಸುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಪ್ರಾಥಮಿಕ ಸಂಪರ್ಕಿತ 37 ಪತ್ರಕರ್ತರನ್ನು ಖಾಸಗಿ ಹೋಟೆಲ್ನಲ್ಲಿ ಕ್ವಾರಂಟೈನ್ನಲ್ಲಿ ಇರಿಸಿ ಈಗಾಗಲೇ 3 ದಿನ ಕಳೆದಿದೆ ಆದರೂ ಸಚಿವರನ್ನು ಮಾತ್ರ ಕ್ವಾರಂಟೈನ್ ಮಾಡದಿರುವುದು ಸರ್ಕಾರದ ನಿಲುವನ್ನೇ ಪ್ರಶ್ನಿಸುವಂತೆ ಮಾಡಿದೆ.
ಕಡೆ ಕ್ಷಣದಲ್ಲಿ ಟ್ವೀಟ್ಗಳು: ಇನ್ನು ಸಚಿವರ ಕ್ವಾರಂಟೈನ್ ವಿಷಯದಲ್ಲಿ ವ್ಯಾಪಕ ಚರ್ಚೆ ಆರಂಭಗೊಳ್ಳುತ್ತಿದ್ದಂತೆ ಡಿಸಿಎಂ ಅಶ್ವತ್ಥನಾರಾಯಣ್, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಚಿವ ಸಿ.ಟಿ ರವಿ ಹಾಗೂ ಸುಧಾಕರ್ ಟ್ವೀಟ್ ಮಾಡಿ ಕೊರೊನಾ ಪರೀಕ್ಷೆ ಮಾಡಿಸಿಕೊಂಡಿದ್ದು ನೆಗಟಿವ್ ಎಂದು ವರದಿ ಬಂದಿದೆ. ನಾವು ಸೆಲ್ಫ್ ಕ್ವಾರಂಟೈನ್ಗೆ ಒಳಗಾಗಿದ್ದೇವೆ ಎಂದಿದ್ದಾರೆ. ಆದರೆ, ಮಾರ್ಗಸೂಚಿಯಂತೆ ಅವರೆಲ್ಲಾ ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ಗೆ ಒಳಗಾಗಬೇಕಿದೆ, ಇಷ್ಟಾದರೂ ಆರೋಗ್ಯ ಇಲಾಖೆ ಈ ವಿಷಯದಲ್ಲಿ ಅಧಿಕೃತ ಮಾಹಿತಿ ಪ್ರಕಟಿಸದೇ ಇರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.