ಬೆಂಗಳೂರು: ಅನ್ನ ಭಾಗ್ಯ ಯೋಜನೆ ವಿಚಾರವಾಗಿ, ಸರ್ಕಾರಿ ದುಡ್ಡು ಯಾರಪ್ಪನ ಮನೆ ದುಡ್ಡಲ್ಲ ಅಂದರೆ ಅದು ಬೈದಂಗಾ? ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸಿಎಂ ಯಡಿಯೂರಪ್ಪ ವಿರುದ್ಧದ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ನಗರದಲ್ಲಿಂದು ಹೆಡ್ ಮಾಸ್ಟರ್ ಕೆಂಗರಾಮಯ್ಯ ಪುಸ್ತಕವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು. ಅನ್ನ ಭಾಗ್ಯ ಯೋಜನೆ ವಿಚಾರ ಪ್ರಸ್ತಾಪಿಸಿ, ಸರ್ಕಾರಿ ದುಡ್ಡು ಯಾರಪ್ಪನ ಮನೆ ದುಡ್ಡಲ್ಲ ಅಂದರೆ ಅದು ಬೈದಂಗಾ? ಮೊದಲು ಯಡಿಯೂರಪ್ಪ ಯತ್ನಾಳ್ಗೆ ಬೈದು ಬಾಯಿ ಮುಚ್ಚಿಸಲಿ. ನನಗೆ ಬೈಯೋದಲ್ಲ. ಅದು ಅನ್ ಪಾರ್ಲಿಮೆಂಟರಿ ಪದವಾ? ನನಗೂ 40 ವರ್ಷದ ಅನುಭವ ಇದೆ. ಇದು ಯಡಿಯೂರಪ್ಪರ ಮನೆ ಹಣ ಅಲ್ಲ, ಸರ್ಕಾರದ ಹಣ ಅಂತ ಹೇಳೋದು ಅನ್ ಪಾರ್ಲಿಮೆಂಟರಿ ಪದವಾ ಎಂದು ಪ್ರಶ್ನಿಸಿದರು.
ಚುನಾವಣೆ ಫಲಿತಾಂಶದಲ್ಲಿ ಎಲ್ಲವೂ ತಿಳಿಯಲಿದೆ:
ಸೋಮವಾರ ಬೆಳಗ್ಗೆಯಿಂದ ಸತತವಾಗಿ ಬೇರೆ ಕಡೆಗೆ ಪ್ರಚಾರಕ್ಕೆ ಹೋಗುತ್ತೇನೆ. ನಿರಂತರವಾಗಿ ಪ್ರವಾಸ ಕೈಗೊಂಡು ಉಪಚುನಾವಣೆ ಗೆಲ್ಲಿಸಿಕೊಳ್ಳುವ ಕಾರ್ಯ ಮಾಡುತ್ತೇನೆ. ಸರ್ಕಾರದ ಬಗ್ಗೆ ಜನರಿಗೆ ಬೇಸರವಿದೆ. ಅದು ಚುನಾವಣೆ ಫಲಿತಾಂಶದ ಮೂಲಕ ತಿಳಿದುಬರಲಿದೆ ಎಂದು ಅಭಿಪ್ರಾಯಪಟ್ಟರು.
ಮಾಜಿ ಸಚಿವ ಡಿ. ಸುಧಾಕರ್ ಜೊತೆ ಯುವತಿ ಸಂಪರ್ಕ ಮಾಡಿರುವ ವಿಚಾರವಾಗಿ ಮಾತನಾಡಿ, ಆ ವಿಚಾರ ಯಾವುದು ನನಗೆ ಗೊತ್ತಿಲ್ಲ. ಗೊತ್ತಿಲ್ಲದ ವಿಚಾರವನ್ನು ಮಾತನಾಡಲ್ಲ ಎಂದರು.
ಈವರೆಗೂ ನಮ್ಮನ್ನು ಕರೆದು ಚರ್ಚಿಸಲಿಲ್ಲ:
ಕೊರೊನಾ ನಿಯಮಾವಳಿ ಬದಲಾವಣೆ ಕುರಿತು ಪ್ರತಿಕ್ರಿಯಿಸಿ, ಸರ್ಕಾರ ಈವರೆಗೂ ಪ್ರತಿಪಕ್ಷದವರನ್ನು ಕರೆದು ಮಾತನಾಡಿಲ್ಲ. ನಾನೇ ಅವರಿಗೆ ಪತ್ರ ಬರೆದಿದ್ದೇನೆ ಎಂದು ತಿಳಿಸಿದರು.
ಸಿಡಿ ಪ್ರಕರಣದ ಯುವತಿ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿರುವ ವಿಚಾರವಾಗಿ ಮಾತನಾಡಿ, ಅವರಿಗೆ ಎಸ್.ಐ.ಟಿ ಮೇಲೆ ನಂಬಿಕೆ ಇಲ್ಲ ಅಂದರೆ ಬೇರೆ ತನಿಖೆ ಮಾಡಲಿ. ನಾನು ಈ ಬಗ್ಗೆ ಸದನದಲ್ಲೂ ಪ್ರಸ್ತಾಪ ಮಾಡಿದ್ದೆ. ಎಸ್.ಐ.ಟಿ ಸರ್ಕಾರದ ಮುಷ್ಠಿಯಲ್ಲಿ ಇರಲಿದೆ. ಅದಕ್ಕಾಗಿ ಮುಖ್ಯ ನ್ಯಾಯಮೂರ್ತಿಗಳಿಂದ ತನಿಖೆ ನಡೆಸುವಂತೆ ಸೂಚಿಸಿದ್ದೆ ಎಂದು ಸಿದ್ದರಾಮಯ್ಯ ಹೇಳಿದರು.
ಇದನ್ನೂ ಓದಿ: ಸಿದ್ದರಾಮಯ್ಯಗೆ ಮಾತಿನ ಮೇಲೆ ಹಿಡಿತವಿರಲಿ, ಪರಿಸ್ಥಿತಿ ನೆಟ್ಟಗಿರುವುದಿಲ್ಲ: ಬೈರತಿ ಬಸವರಾಜ್ ಗುಟುರು
ಮಾಜಿ ಸ್ಪೀಕರ್ ರಮೇಶ್ ಕುಮಾರ್ ಒಂದು ಮಾತನ್ನು ನನ್ನ ಮುಂದೆಯೇ ಹೇಳಿದ್ರು. ನಮ್ಮ ಕಡೆ ಒಂದು ಬಾರಿ ಚೇರ್ಮನ್ ಆದವರು, ಸಾಯೋವರೆಗೂ ಚೇರ್ಮನ್ ಅಂತ ಕರೆಸಿಕೊಳ್ಳುತ್ತಾರೆ. ಆದ್ರೆ ನಾನು ಪ್ರತಿಪಕ್ಷ ನಾಯಕ, ನನ್ನ ಹಾಗೆಯೇ ಕರೆಯಲಿ ಎಂದರು.
ಮಾಜಿ ಸಿಎಂ ಎಂದು ಕರೆಯಬೇಡಿ:
ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮಾತನಾಡಿ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ರು. ಅವರು ಮತ್ತೆ ಸಿಎಂ ಆಗಲು ಸಾಧ್ಯವಾಗಲಿಲ್ಲ. ಜನರು ಇಷ್ಟಪಟ್ಟರೆ ಮತ್ತೆ ಮುಖ್ಯಮಂತ್ರಿ ಆಗ್ತಾರೆ. ಸಿದ್ದರಾಮಯ್ಯ ಅವರನ್ನು ಮಾಜಿ ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿ ಅನ್ನಬೇಡಿ. ಇದು ಅವರಿಗೆ ಅಪಮಾನ ಮಾಡಿದಂತೆ ಆಗಲಿದೆ ಎಂದರು.