ಬೆಂಗಳೂರು: ಶಿವಾಜಿನಗರದ ಹೆಡ್ ಕಾನ್ಸ್ಟೇಬಲ್ವೊಬ್ಬರು ಸುಲಿಗೆಕೋರರ ಗ್ಯಾಂಗ್ ಜೊತೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ಆರೋಪದ ಹಿನ್ನೆಲೆ ಅಮಾನತು ಮಾಡಿ ನಗರ ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ಆದೇಶಿಸಿದ್ದಾರೆ.
ಇತ್ತೀಚೆಗೆ ಬೀಟ್ ವೇಳೆ ವೈಟ್ ಫೀಲ್ಡ್ ಪೊಲೀಸರಿಗೆ ಡಕಾಯಿತರ ಗ್ಯಾಂಗ್ ಪತ್ತೆಯಾಗಿತ್ತು. ಆರು ಜನರ ನಟೋರಿಯಸ್ ಗ್ಯಾಂಗ್ ಪೈಕಿ ಅಲಿ ಹಾಗೂ ವಾಸಿಮ್ ವೈಟ್ ಫೀಲ್ಡ್ ಪೊಲೀಸರ ಖೆಡ್ಡಾಗೆ ಬಿದ್ದಿದ್ದರು. ಈ ಇಬ್ಬರು ಕಿರಾತಕರನ್ನು ವಿಚಾರಣೆಗೆ ಒಳಪಡಿಸಿದಾಗ ಇಡೀ ಪೊಲೀಸ್ ಇಲಾಖೆಯನ್ನೇ ಬೆಚ್ಚಿ ಬೀಳಿಸುವ ಸ್ಫೋಟಕ ಸತ್ಯವನ್ನು ಬಾಯ್ಬಿಟ್ಟಿದ್ದರು. ಅಲ್ಲದೆ ವಿಚಾರಣೆ ವೇಳೆ ಶಿವಾಜಿನಗರದ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಸಯ್ಯದ್ ಸಮಿಉಲ್ಲಾ ಎಂಬುವರು ಈ ಡಕಾಯಿತರ ಗ್ಯಾಂಗ್ಗೆ ಮಾಸ್ಟರ್ ಮೈಂಡ್ ಅನ್ನೋ ಗಂಭೀರ ಆರೋಪ ಕೇಳಿ ಬಂದ ಹಿನ್ನೆಲೆ ಅಮಾನತು ಮಾಡಲಾಗಿದೆ.
ಇದನ್ನೂ ಓದಿ: ವಿಧಾನಸಭೆಯಲ್ಲಿ 3,320.40 ಕೋಟಿ ರೂ. ಮೊತ್ತದ ಪೂರಕ ಅಂದಾಜು ಮಂಡನೆ
ಅಕ್ಟೋಬರ್ 29ರ ರಾತ್ರಿ ವೈಟ್ ಫೀಲ್ಡ್ ಬಳಿಯ ಸಿದ್ದಾಪುರದಲ್ಲಿ ಕಾರ್ಮಿಕರು ವಾಸಿಸುವ ಶೆಡ್ಗಳಲ್ಲಿಯೂ ಸುಲಿಗೆ ನಡೆದಿತ್ತು. ಅಲ್ಲಿ ರಾತ್ರೋರಾತ್ರಿ ಮೂರ್ನಾಲ್ಕು ಜನ ಅಪರಿಚಿತರು ಬಂದು, ನಾವೆಲ್ಲಾ ಪೊಲೀಸರು. ನೀವು ಹಣ ಕೊಡಲೇಬೇಕು ಅಂತ ವಾರ್ನ್ ಮಾಡಿದ್ದಾರೆ. ಬಳಿಕ ಕಾರ್ಮಿಕರ ಬಳಿಯಿಂದ ಬಲವಂತವಾಗಿ ನಗದು ಹಾಗೂ ಐದಾರು ಫೋನ್ಗಳನ್ನು ಸುಲಿಗೆ ಮಾಡಿಕೊಂಡು ಎಸ್ಕೇಪ್ ಆಗಿದ್ದಾರೆ. ಈ ಸುಲಿಗೆ ಕೇಸ್ ಹಿಂದೆಯೂ ಇದೇ ಹೆಡ್ ಕಾನ್ಸ್ಟೇಬಲ್ ಸಯ್ಯದ್ ಸಮಿಉಲ್ಲಾ ಕೈವಾಡವಿದೆ ಎಂಬ ಆರೋಪ ಕೇಳಿ ಬಂದಿದೆ.
ಬಂಧಿತ ಸುಲಿಗೆಕೋರರು ನೀಡಿರುವ ಹೇಳಿಕೆ ಆಧರಿಸಿ ವೈಟ್ ಫೀಲ್ಡ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನಿಖಾ ವರದಿಯಲ್ಲಿ ಹೆಡ್ ಕಾನ್ಸ್ಟೇಬಲ್ ಸಯ್ಯದ್ ಸಮಿಉಲ್ಲಾ ಮೇಲ್ನೋಟಕ್ಕೆ ತಪ್ಪಿತಸ್ಥ ಎಂದು ಕಂಡು ಬಂದಿದೆ. ತನಿಖೆ ಮುಗಿಯುವವರೆಗೂ ಸಸ್ಪೆಂಡ್ ಮಾಡಿ ಡಿಸಿಪಿ ಶರಣಪ್ಪ ಆದೇಶ ಹೊರಡಿಸಿದ್ದಾರೆ.