ಬೆಂಗಳೂರು: ಉದ್ಯಾನನಗರಿಯಲ್ಲಿ ಮಳೆರಾಯ ಅಬ್ಬರಿದ್ದು, ಹಲವೆಡೆ ಗಾಳಿ ಸಹಿತ ಭಾರಿ ಮಳೆಯಾಗಿದೆ.
ಮೆಜೆಸ್ಟಿಕ್, ಕೆ ಆರ್ ಮಾರುಕಟ್ಟೆ, ಶಿವಾಜಿನಗರ, ಎಂ ಜಿ ರಸ್ತೆ ಸೇರಿದಂತೆ ನಗರದ ವಿವಿಧೆಡೆ ಮಳೆಯಾಗುತ್ತಿದೆ. ಮಧ್ಯಾಹ್ನದ ವೇಳೆಗೆ ಮೋಡ ಕವಿದ ವಾತಾವರಣವಿದ್ದು, ದಿಢೀರ್ ಗಾಳಿ ಸಹಿತ ಸುರಿದಿದೆ. ಮಳೆಯಿಂದಾಗಿ ರಸ್ತೆಯಲ್ಲಿದ್ದ ಜನತೆ ಬಸ್ ನಿಲ್ದಾಣಗಳ ಮೊರೆ ಹೋಗುತ್ತಿದ್ದ ದೃಶ್ಯಗಳು ಕಂಡುಬಂದವು. ಕೊರೊನಾ ಆತಂಕ, ಕರ್ಫ್ಯೂ ನಡುವೆ ರಾಜಧಾನಿ ಕೊಂಚ ಕೂಲ್ ಕೂಲ್ ಆಗಿದೆ.
ಗಾಳಿ ಸಹಿತ ಮಳೆಗೆ ಧರೆಗುರುಳಿದ 60 ಮರಗಳು:
ನಗರದಲ್ಲಿ ಸುರಿದ ಒಂದು ಗಂಟೆಯ ಗುಡುಗು ಗಾಳಿ ಸಹಿತ ಮಳೆಗೆ ಬರೋಬ್ಬರಿ 60ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ. ಬೆಂಗಳೂರಿನ ದಕ್ಷಿಣ ಭಾಗದ ಜಯನಗರ, ಯಶವಂತಪುರ ಭಾಗದಲ್ಲಿ ಮರಗಳು ಮುರಿದುಬಿದ್ದಿವೆ.
ಈ ಕುರಿತಂತೆ ಪ್ರತಿಕ್ರಿಯಿಸಿರುವ ಬಿಬಿಎಂಪಿ ಕಮಿಷನರ್ ಅನಿಲ್ ಕುಮಾರ್, ಅದಷ್ಟು ಬೇಗ ಮರಗಳ ತೆರವು ಕಾರ್ಯ ಮಾಡಲಾಗುವುದು. ಅಗ್ನಿಶಾಮಕದವರ ಜೊತೆಗೂಡಿ ತೆರವು ಕಾರ್ಯಾಚರಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಇತ್ತ ಕರ್ಫ್ಯೂ ಜಾರಿಯಾಗಿರುವ ಹಿನ್ನೆಲೆ ರಸ್ತೆಯಲ್ಲಿ ವಾಹನಗಳ ಸಂಚಾರ ಕಡಿಮೆ ಇದ್ದುದರಿಂದ ಯಾವುದೇ ಪ್ರಾಣಹಾನಿ, ಅನಾಹುತಗಳು ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಎಲ್ಲೆಲ್ಲಿ ಅನಾಹುತ:
- ಜಯನಗರದಲ್ಲಿ ಎರಡು ಕಾರುಗಳ ಮೇಲೆ ಮರಗಳು ಬಿದ್ದಿದ್ದು, ವಿದ್ಯುತ್ ಕಂಬ ತುಂಡಾಗಿದೆ
- ಯಶವಂತಪುರದಲ್ಲಿ ಧರೆಗುರುಳಿದ ಮರ
- ಡಿಸಿಪಿ ಕಚೇರಿಯ ಪಕ್ಕದಲ್ಲೇ ಬಿದ್ದಿರುವ ಮರ
- ಮರ ಬಿದ್ದ ರಭಸಕ್ಕೆ ಫುಟ್ಪಾತ್ ಬ್ಯಾರಿಕೇಡ್ ನೆಲಸಮ
- ಮಲ್ಲೇಶ್ವರಂ ಫಸ್ಟ್ ಕ್ರಾಸ್ನಲ್ಲಿ ರಸ್ತೆ ಮೇಲೆ ಬಿದ್ದ ಮರದ ಕೊಂಬೆ
- ಮಂತ್ರಿಮಾಲ್ ಮುಂಭಾಗ ಒಂದು ಅಡಿಗೂ ಹೆಚ್ಚು ನೀರು ನಿಂತಿದೆ
- ಮತ್ತಿಕೆರೆ ಬಳಿ ಮುತ್ಯಾಲ ನಗರದಲ್ಲಿ ಮರಗಳು ಧರೆಗುರುಳಿವೆ
ಅರಬ್ಬೀ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಎಫೆಕ್ಟ್:
ಇನ್ನು, ರಾಜಧಾನಿಯಲ್ಲಿ ಗಾಳಿ ಸಹಿತ ಮಳೆಯ ಅಬ್ಬರಕ್ಕೆ ಕಾರಣ ಅರಬ್ಬೀ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿಯಿಂದಾಗಿ ರಾಜ್ಯದ ಕೆಲವು ಭಾಗಗಳಲ್ಲಿ ಮಳೆಯಾಗಲಿದೆ. 27 ರಿಂದ ರಾಜ್ಯದಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ನೈಸರ್ಗಿಕ ಪ್ರಕೃತಿ ವಿಕೋಪ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.