ಬೆಂಗಳೂರು: ರಾಜ್ಯದಲ್ಲಿ 2023ಕ್ಕೆ ಜೆಡಿಎಸ್ ಪರ್ವ ಪ್ರಾರಂಭವಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ನಡೆದ ಯುವ ಘಟಕ ಹಾಗೂ ವಿದ್ಯಾರ್ಥಿ ಘಟಕಗಳ ಸಂಘಟನಾ ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದೆ ಜೆಡಿಯು, ಜೆಡಿಎಸ್ ಒಂದಾಗುವ ಕಾಲ ಬಂದಿತ್ತು. ಆಗ ಕೆಲವರು ಹುಳಿ ಹಿಂಡಿದರು. ಆಗ ಒಂದಾಗಿದಿದ್ದರೆ ಇವತ್ತು ಕಾಂಗ್ರೆಸ್, ಬಿಜೆಪಿ ಇರುತ್ತಿರಲಿಲ್ಲ. ನನಗೆ ನನ್ನ ಬಿಡದಿ ತೋಟ ಅದೃಷ್ಟ ತಂದುಕೊಟ್ಟಿದೆ. ನನಗೆ ಅಧಿಕಾರ ಸಿಕ್ಕಿದ್ದು ಅಲ್ಲಿಂದಲೇ. ಹಾಗಾಗಿ, ಮುಂದಿನ ಯುವ ಜನತಾದಳದ ಸಭೆಯನ್ನು ಅಲ್ಲಿಂದನೇ ಮಾಡೋಣ. ಅಲ್ಲಿಂದಲೇ ಪಕ್ಷ ಸಂಘಟನೆ ಪ್ರಾರಂಭ ಆಗಲಿ ಎಂದರು.
ಇಂದಿನಿಂದ ಪಕ್ಷಕ್ಕೆ ಹೊಸ ರೀತಿಯ ಸಂಘಟನೆ ಮಾಡಬೇಕಿದೆ. ಬೂತ್ ಮಟ್ಟದಿಂದ ಪಕ್ಷವನ್ನು ಸಂಘಟಿಸಬೇಕಿದೆ. ಪಕ್ಷಕ್ಕೆ ಉಪಚುನಾವಣೆಯಲ್ಲಿ ಹಿನ್ನಡೆಯಾಗಿದೆ. ಆದರೂ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿಗೆ ಸರಿಸಮನಾದ ಹೋರಾಟ ಮಾಡಿದ್ದೇವೆ. ಯಾವುದೇ ನೆರವು ಇಲ್ಲದೆ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದಿದ್ದಾರೆ. ಜೆಡಿಎಸ್ ನೆಲೆ ಕಳೆದುಕೊಂಡಿಲ್ಲ ಎಂಬುದು ಇದರಿಂದ ಸಾಬೀತಾಗಿದೆ ಎಂದರು.
ಇನ್ನು ಯುವ ಜನತಾದಳದ ಅಧ್ಯಕ್ಷರನ್ನು ಹೊರತುಪಡಿಸಿ ಎಲ್ಲಾ ಪದಾಧಿಕಾರಿಗಳನ್ನು ವಿಸರ್ಜನೆ ಮಾಡುತ್ತೇವೆ. ರಾಜ್ಯದಲ್ಲಿ ಜಯಪ್ರಕಾಶ್ ನಾರಾಯಣ್ ಹೆಸರಿನಲ್ಲಿ ವಿದ್ಯಾರ್ಥಿ ಸಂಘಟನೆ ರಚನೆ ಮಾಡಲು ತೀರ್ಮಾನಿಸಿದ್ದೇವೆ. ಪಕ್ಷದ ಕಚೇರಿಯಲ್ಲಿ ಕೋರ್ ಕಮಿಟಿ ಮಾಡುತ್ತೇನೆ. ಪ್ರತಿದಿನ ಸಭೆಗೆ ಬರಬೇಕು. ಇಲ್ಲವಾದಲ್ಲಿ ಆ ಕಮಿಟಿಯಿಂದ ತೆಗೆದು ಹಾಕುತ್ತೇನೆ. ಅಂದು ಜನತಾ ಪಾರ್ಟಿಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ, ಜನರಲ್ ಸೆಕ್ರೆಟರಿ ಹೀಗೆ ಹುದ್ದೆಗಳು ಇದ್ದವು. ಇವತ್ತು ಕಾರ್ಯಕರ್ತರು, ಅಧ್ಯಕ್ಷ ಒಂದೇ ಆಗಿದೆ. ಈ ಪಕ್ಷದ ಸಂಘಟನೆಯನ್ನು ಅತ್ಯಂತ ಶಿಸ್ತುಬದ್ಧವಾಗಿ ಮಾಡುತ್ತೇನೆ ಎಂದರು.
ಪದಾಧಿಕಾರಿಗಳ ಬದಲಾವಣೆ:
ಯುವ ಹಾಗೂ ವಿದ್ಯಾರ್ಥಿ ಘಟಕದ ಪದಾಧಿಕಾರಿಗಳ ಬದಲಾವಣೆಗೆ ತೀರ್ಮಾನ ಮಾಡಿದ್ದು, ಪಕ್ಷದಲ್ಲಿ ಸಕ್ರಿಯವಾಗಿ ಕೆಲಸ ಮಾಡುವವರಿಗೆ ಕೋರ್ ಕಮಿಟಿಯಲ್ಲಿ ಅವಕಾಶ ನೀಡಲಾಗುವುದು. ಪರಿಣಾಮಕಾರಿಯಾಗಿ ಕೆಲಸ ಮಾಡದಿದ್ದಲ್ಲಿ ಕಮಿಟಿಯಿಂದ ಕೈಬಿಡುತ್ತೇವೆ ಎಂದು ಹೇಳಿದರು.
ಸ್ವಾಭಿಮಾನ ಕಳೆದುಕೊಂಡು ಸಿಎಂ ಆಗಿರುವ ಹುಚ್ಚು ಇರಲಿಲ್ಲ. ಪ್ರತಿಯೊಂದಕ್ಕೂ ಕಾಂಗ್ರೆಸ್ ಅನುಮತಿ ಪಡೆದೇ ಸಹಿ ಹಾಕಬೇಕಾದ ಪರಿಸ್ಥಿತಿ ಇತ್ತು. ಎರಡೂ ಪಕ್ಷದ ಜೊತೆಗೆ ಹೋಗಿ ಸಾಕಷ್ಟು ಅನುಭವಿಸಿದ್ದೇನೆ. ಕಾರ್ಯಕರ್ತರಿಗೆ ಎಲ್ಲಾ ಶಕ್ತಿ ನೀಡಿದ್ದೇನೆ. ನೀವು ಸಂಘಟನೆ ಮಾಡಿ ಎಂದು ಕರೆ ನೀಡಿದ ಹೆಚ್ಡಿಕೆ, ಕಾಂಗ್ರೆಸ್ ಕುತಂತ್ರದಿಂದ 37 ಸೀಟುಗಳು ಬಂದವು. ಮುಂದೆ ಸಂಪೂರ್ಣವಾಗಿ ನಾವು ಅಧಿಕಾರ ಹಿಡಿಯಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
"ಕಾಲ ಕಾಲಕ್ಕೆ ಎಲ್ಲಾ ಬದಲಾವಣೆ ಆಗುತ್ತದೆ, ಹಾಗೆ ಜೆಡಿಎಸ್ ಬದಲಾವಣೆ ಆಗುತ್ತದೆ" ಎಂದು ಒಬ್ಬರು ಮೈಸೂರಿನಲ್ಲಿ ಮಾತನಾಡಿದ್ದಾರೆ. ಬಹುಶಃ ಈಗ ಅವರಿಗೆ ಕ್ಷೇತ್ರದಲ್ಲಿ ಅನುಕಂಪ ಬಂದಿದೆ ಎಂದು ವ್ಯಂಗ್ಯವಾಡಿದ ಕುಮಾರಸ್ವಾಮಿ, ಪಕ್ಷದ ಸಭೆಗೆ ಆಹ್ವಾನ ನೀಡಿಲ್ಲ ಎನ್ನುತ್ತಿದ್ದಾರೆ ಎಂದರು. ಆಗ ಕಾರ್ಯಕರ್ತರು ಪಕ್ಷದಿಂದ ಉಚ್ಛಾಟನೆ ಮಾಡಿ ಎಂದಾಗ, ಮೈಸೂರಿಗೆ ಹೋಗಿ ಅಲ್ಲಿಂದಲೇ ಉಚ್ಛಾಟನೆ ಮಾಡುತ್ತೇನೆ ಎಂದು ಪರೋಕ್ಷವಾಗಿ ಜಿ.ಟಿ.ದೇವೇಗೌಡಗೆ ಎಚ್ಚರಿಕೆ ನೀಡಿದರು.
ರಾಜ್ಯದ ಮೂವತ್ತು ಜಿಲ್ಲೆಗೆ 30 ಮಂದಿಯನ್ನು ಸಂಬಳ ಕೊಟ್ಟು ನೇಮಕ ಮಾಡುತ್ತೇನೆ. ಆಧಾರ್ ಕಾರ್ಡ್ ನಂಬರ್ ರೀತಿಯಲ್ಲಿ ಕಾರ್ಡ್ ನೀಡುತ್ತೇವೆ. ಇಲ್ಲಿ ವಾರ್ ರೂಮ್ ಇರುತ್ತದೆ. ಇಲ್ಲಿಗೆ ಅವರು ಪ್ರತಿ ದಿನ ಮಾಹಿತಿ ನೀಡಬೇಕು ಎಂದು ಹೇಳಿದರು.
ಮುಂದಿನ ಚುನಾವಣೆಯಲ್ಲಿ ಯುವಕರಿಗೆ ಶೇ. 40ರಷ್ಟು ಮೀಸಲಿಡಲು ತೀರ್ಮಾನಿಸಲಾಗಿದೆ. ಆ ನಿಟ್ಟಿನಲ್ಲಿ ಯುವಕರು ಕೆಲಸ ಮಾಡಬೇಕು. ನಮ್ಮ ಪಕ್ಷದ ಜೊತೆ ಬಿಜೆಪಿ ಹಾಗೂ ಕಾಂಗ್ರೆಸ್ ಯಾವ ರೀತಿ ಚೆಲ್ಲಾಟ ಅಡುತ್ತಿದೆ ಎಂಬುದರ ಬಗ್ಗೆ ಗಮನಿಸಿ ಆ ಪಕ್ಷಗಳಿಗೆ ತಕ್ಕ ಉತ್ತರ ನೀಡಬೇಕು ಎಂದು ಹೇಳಿದರು. ವಿಧಾನಸಭೆ, ಜಿಲ್ಲಾ, ತಾಲೂಕುಮಟ್ಟದಲ್ಲಿ ಯಾವ ರೀತಿ ಸಂಘಟನೆ ಮಾಡಬೇಕು ಎಂಬುದರ ಬಗ್ಗೆ ನೀವೇ ಯೋಜನೆ ರೂಪಿಸಿಕೊಳ್ಳಿ. ಎರಡು ವರ್ಷ ಕೆಲಸ ಮಾಡಿ. ನಿಮ್ಮನ್ನು ಎಲ್ಲಾ ರೀತಿಯಲ್ಲಿ ಗುರುತಿಸುತ್ತೇವೆ ಎಂದು ಯುವಕರಿಗೆ ತಿಳಿಸಿದರು.