ಬೆಂಗಳೂರು : ಮಂತ್ರಾಕ್ಷತೆ ಬಗ್ಗೆ ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು, ಅದೇನು ದೊಡ್ಡ ಆಲಹಳ್ಳಿಯಲ್ಲಿ ಬೆಳೆದ ಅಕ್ಕಿನಾ? ಎಂದು ಲೇವಡಿ ಮಾಡಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಗೆ ಸಿದ್ಧತೆ ನಡೆಸುವ ಸಂಬಂಧ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಕರೆದಿರುವ ಪಕ್ಷದ ಮುಖಂಡರ ಸಭೆಗೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಮಮಂದಿರಕ್ಕೆ ಕರೆಯಬೇಕಾ?, ಅವರಾಗೆ ಹೋಗಬೇಕು. ಸಾವಿರಾರು ಜನ ಬರ್ತಾರೆ, ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಯಾವಾಗ ಬೇಕಾದ್ರು ಬಂದು ರಾಮಮಂದಿರ ದರ್ಶನ ಮಾಡಿ ಎಂದಿದ್ದಾರೆ. ಯಾರು ಬೇಕಾದ್ರು ಹೋಗಬಹುದು. ಅದಕ್ಕೆ ಪರ್ಮಿಷನ್ ಬೇಕಾ?, ರಾಮನ ಮೇಲೆ ಭಕ್ತಿಯಿರುವವರು ಯಾರು ಬೇಕಾದ್ರು ಹೋಗಬಹುದು ಎಂದರು.
ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಮನೆಯಲ್ಲಿ ಬರಿ ದೇವರ ಫೋಟೊಗಳೇ ಇವೆ. ದೇವರ ರಕ್ಷಣೆ ಇಲ್ಲದಿದ್ದರೆ ಉಳಿಬೇಕಲ್ಲ, ಅದಕ್ಕಾಗಿ ಯಾವಾಗಲೂ ದೇವರನ್ನು ನೆನಪಿಸಿಕೊಳ್ಳುತ್ತಾರೆ ಎಂದು ಕುಮಾರಸ್ವಾಮಿ ಹೇಳಿದರು.
ಮಂತ್ರಿಗಳಿಗೆ ಭಯವಿಲ್ಲ, ಸಿಎಂ ಕರೆದು ಬುದ್ಧಿ ಹೇಳಬೇಕು : ಸ್ವಾತಂತ್ರ್ಯ ಪೂರ್ವದಲ್ಲಿ ಬೆಳಗಾವಿಯು ಮಹಾರಾಷ್ಟ್ರಕ್ಕೆ ಸೇರಿತ್ತು ಎಂದು ವಿವಾದಾತ್ಮಕ ಹೇಳಿಕೆ ನೀಡಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ತರಾಟೆಗೆ ತೆಗೆದುಕೊಂಡ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು, ಇಂತಹ ಅಸಂಬದ್ಧ ಹೇಳಿಕೆಗಳನ್ನು ನೀಡುವ ಸಚಿವರಿಗೆ ಮುಖ್ಯಮಂತ್ರಿ ಕರೆದು ಬುದ್ಧಿ ಹೇಳಲಿ ಎಂದರು.
ಇದು ಎಂದೋ ಮುಗಿದು ಹೋಗಿರುವ ವಿಷಯ. ಅದನ್ನು ಮತ್ತೆ ಮತ್ತೆ ಕೆಣಕುವ ಅಗತ್ಯ ಏನಿದೆ? ಬಹುಶಃ ಅವರಿಗೆ ಮಹಾರಾಷ್ಟ್ರದ ವ್ಯಾಮೋಹದಿಂದ ಹೊರಬರಲು ಸಾಧ್ಯವಿಲ್ಲ. ನೆರೆ ರಾಜ್ಯದ ಮೇಲೆ ಅವರಿಗೆ ವ್ಯಾಮೋಹ ಜಾಸ್ತಿ ಅಂತ ಕಾಣುತ್ತದೆ ಎಂದು ಕಿಡಿಕಾರಿದರು.
ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರೇ ಇಂತಹ ಅನಗತ್ಯ, ವಿವಾದಾಸ್ಪದ ವಿಷಯಗಳನ್ನು ಮಾತಾಡಿದರೆ ನೀವೇ ನೀರು ಎರೆದ ಹಾಗೆ ಅಲ್ಲವಾ? ಸಿಎಂ ಅವರಿಗೆ ಮಂತ್ರಿಗಳ ಮೇಲೆ ಹಿಡಿತ ಇದ್ದರೆ ಅವರನ್ನು ಕರೆದು ಸರಿಯಾಗಿ ಬುದ್ಧಿ ಹೇಳಬೇಕು ಎಂದು ಒತ್ತಾಯಿಸಿದರು.
ಈ ಮಂತ್ರಿಗಳಿಗೆ ಗ್ಯಾರಂಟಿ ಹೆಸರಲ್ಲಿ ಸರ್ಕಾರ ರಚನೆ ಮಾಡಿರುವುದರಿಂದ ಯಾವುದೇ ಅಭಿವೃದ್ಧಿ ರಾಜ್ಯದಲ್ಲಿ ಕಾಣುತ್ತಿಲ್ಲ. ಮುಖ್ಯಮಂತ್ರಿ ಆರ್ಥಿಕ ಸಲಹೆಗಾರರಾದ ಬಸವರಾಜ ರಾಯರೆಡ್ಡಿ ಅವರೇ ಹೇಳಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕುಂಠಿತವಾಗಿದೆ ಎಂದು ಅವರು ಒಪ್ಪಿಕೊಂಡಿದ್ದಾರೆ ಎಂದರು. 8 ತಿಂಗಳು ಆಗಿದೆ ಸರ್ಕಾರ ಬಂದು. ಬರ ಪರಿಹಾರ ವಿಚಾರದಲ್ಲಿ ಸರ್ಕಾರ ಹೇಗೆ ನಡೆದುಕೊಳ್ಳುತ್ತಿದೆ ಎನ್ನುವುದನ್ನು ಜನ ನೋಡುತ್ತಿದ್ದಾರೆ. 2 ಸಾವಿರ ಹಣ ಕೊಡಲು 105 ಕೋಟಿ ಹಣ ಬಿಡುಗಡೆ ಮಾಡಿದ್ದಾರೆ.
ಅದು ಎಷ್ಟು ಜನರಿಗೆ ಹೋಗುತ್ತದೆ. ಬರದಿಂದ 30 ಸಾವಿರ ಕೋಟಿ ನಷ್ಟ ಆಗಿದೆ ಅಂತ ಹೇಳಿ 105 ಕೋಟಿ ಬಿಡುಗಡೆ ಮಾಡಿದರೆ ಸಾಕಾ?. ಇಷ್ಟು ಹಣದಿಂದ ಯಾವ ಪುರುಷಾರ್ಥ ಸಾಧಿಸುತ್ತಾರೆ? ರೈತರನ್ನ ಬದುಕಿಸೋಕೆ ಸಾಧ್ಯನಾ? ಎಂದು ಅವರು ಪ್ರಶ್ನೆ ಮಾಡಿದರು. ಸಂಸದೆ, ನಟಿ ಸುಮಲತಾ ಅವರು ನನಗೇನು ಶತ್ರುನಾ?. ಕಳೆದ ಚುನಾವಣೆಯಲ್ಲಿ ಅವರು ಮಂಡ್ಯದಲ್ಲಿ ಬಿಜೆಪಿಯ ಅಭ್ಯರ್ಥಿಯ ಪರ ಕೆಲಸ ಮಾಡಿದ್ದಾರೆ. ಅವರನ್ನು ಭೇಟಿ ಮಾಡಿದರೆ ತಪ್ಪೇನಿದೆ? ಎಂದು ಹೇಳಿದರು.
ಮರಗಳ್ಳರಿಗೆ ಕುಮಾರಸ್ವಾಮಿ ಬೆಂಬಲಿಸುತ್ತಿದ್ದಾರೆ ಎಂಬ ಸಚಿವ ಈಶ್ವರ್ ಖಂಡ್ರೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು ಮರಕಡಿಯುವರಿಗೆ ಅಕ್ರಮ ಚಟುವಟಿಕೆ ಮಾಡುವವರಿಗೆ ನೀಡುವುದಿಲ್ಲ. ಆದರೆ, ಸಚಿವ ಈಶ್ವರ್ ಖಂಡ್ರೆಯವರು ಕರೆದ ಸಭೆಯಲ್ಲಿ ಅಧಿಕಾರಿಗಳು ಏನು ಸಲಹೆ ಕೊಟ್ರು?. ಆರೋಪಿ 1, ಆರೋಪಿ 2 ಎಫ್ಐಆರ್ನಲ್ಲಿದ್ದರೂ ಬಂಧಿಸಿಲ್ಲ. ಅಧಿಕಾರಿಗಳಿಂದ ಬೇಲ್ ಕೊಡುತ್ತೀರಿ. ಎಫ್ಐಆರ್ನಲ್ಲೇ ಇಲ್ಲದ ವಿಕ್ರಮ ಸಿಂಹ ಅವರನ್ನು ಬಂಧಿಸಿದ್ದಾರೆ. ಅವರನ್ನು ಮ್ಯಾಜಿಸ್ಟ್ರೇಟ್ ಮುಂದೆ ಏಕೆ ಕರೆದುಕೊಂಡು ಹೋದಿರಿ? ಈಶ್ವರ ಖಂಡ್ರೆಯವರೆ ಇದಕ್ಕಿಂತ ಗಂಭೀರ ಪ್ರಕರಣ ಕೊಡಲು ಸಿದ್ದ. ಅವರ ಮೇಲೆ ಕ್ರಮ ಕೈಗೊಳ್ಳುತ್ತೀರಾ? ಎಂದು ಪ್ರಶ್ನಿಸಿದರು.
ತರೀಕೆರೆಯಲ್ಲಿ ಅರಣ್ಯ ಇಲಾಖೆಯ ಭೂಮಿಯಲ್ಲಿ ನಿಮ್ಮ ಅಧಿಕಾರಿಗಳೇ ಅಕ್ರಮವಾಗಿ ಎಷ್ಟು ಮರ ಕಡಿದಿದ್ದಾರೆ. ಆ ಅಕ್ರಮ ಮರ ಯಾವ ಶಾಸಕರ ಮನೆಗೆ ಹೊಯ್ತು, ಗೊತ್ತಿಲ್ವಾ ನಿಮಗೆ...? ಏನಾದರೂ ಕ್ರಮ ಕೈಗೊಂಡ್ರಾ?, ಕ್ರಮ ತೆಗೆದುಕೊಳ್ಳುತ್ತಿರಾ? ಎಂದು ಕುಮಾರಸ್ವಾಮಿ ಅವರು ಸಚಿವರನ್ನು ಪ್ರಶ್ನೆ ಮಾಡಿದರು.
ಕಳೆದ ಎರಡು ಮೂರು ವರ್ಷಗಳಿಂದ ವಿರಾಜಪೇಟೆಯಲ್ಲಿ ರೋಸ್ವುಡ್, ಟೀಕ್ವುಡ್ ಮರ ಕದ್ದು ಸಾಗಣೆ ಆಗಿದೆ. ಆಗಸ್ಟ್ ತಿಂಗಳಿನಲ್ಲಿ ಹಿರಿಯ ಅಧಿಕಾರಿಗಳು ಇದರ ಬಗ್ಗೆ ಆಕ್ಷನ್ ತೆಗೆದುಕೊಳ್ಳುವಂತೆ ಹೇಳಿದ್ರು ಏನು ಕ್ರಮ ಕೈಗೊಂಡಿದ್ದೀರಿ?. ಇಲ್ಲಿಯವರೆಗೂ ಏಕೆ ಕ್ರಮ ಕೈಗೊಂಡಿಲ್ಲ?. ನಾನು ದಾಖಲೆ ಇಲ್ಲದೇ ಏನು ಮಾತನಾಡುವುದಿಲ್ಲ. ಇದರ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದರು.
ಲೋಕಸಭೆ ಚುನಾವಣೆ ಹಿನ್ನೆಲೆ ಪಕ್ಷದ ಶಾಸಕರು, ಮಾಜಿ ಶಾಸಕರು, ಮುಖಂಡರ ಸಭೆ ಕರೆದಿದ್ದೇನೆ. ಎನ್ಡಿಎ ಮೈತ್ರಿಕೂಟದಲ್ಲಿ ನಾವು ಲೋಕಸಭೆಗೆ ತಯಾರಿ ಮಾಡ್ತಿದ್ದೇವೆ. ಜೆಡಿಎಸ್ ಪಕ್ಷ ಸ್ಪರ್ಧಿಸುವ ಕ್ಷೇತ್ರದ ಜೊತೆಗೆ ಬಿಜೆಪಿಯ ಅಭ್ಯರ್ಥಿಯನ್ನು ಗೆಲ್ಲಿಸಲು ಅಳಿಲು ಸೇವೆ ಮಾಡುತ್ತೇವೆ ಎಂದು ಹೇಳಿದರು. ಉತ್ತರ ಕರ್ನಾಟಕದ ಹಲವು ಕ್ಷೇತ್ರದಲ್ಲಿ ಒಂದುವರೆಯಿಂದ ಎರಡು ಲಕ್ಷದವರೆಗೂ ಜೆಡಿಎಸ್‌ನ ಮತ ಇದೆ. ಹೀಗಾಗಿ ಆ ಭಾಗದ ಮುಖಂಡರ ಸಭೆ ಕರೆದು ಪಕ್ಷ ಬಲಪಡಿಸುವ ಕೆಲಸ ಮಾಡ್ತಿದ್ದೇವೆ ಎಂದರು.
ಮುಖಂಡರ ಜೊತೆ ಸಭೆ ನಡೆಸುತ್ತಿರುವ ಹೆಚ್ಡಿಕೆ : ಪಕ್ಷದ ಕಚೇರಿ ಜೆಪಿ ಭವನದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಸಭೆ ಕರೆದಿದ್ದು, ಮುಂಬರಲಿರುವ ಲೋಕಸಭಾ ಚುನಾವಣೆ ಮತ್ತು ಜೆಡಿಎಸ್ ಪಕ್ಷ ಸಂಘಟನೆ ವಿಚಾರದ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಸಭೆಯಲ್ಲಿ ಜೆಡಿಎಸ್ ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆ ಲೀಲಾ ದೇವಿ ಆರ್ ಪ್ರಸಾದ್ , ಮಾಜಿ ಸಚಿವ ಬಂಡೆಪ್ಪ ಕಾಶ್ಯಂಪೂರ್ , ಹಲ್ಕೋಡ್ ಹನುಮಂತಪ್ಪ, ಹೆಚ್. ಕೆ ಕುಮಾರಸ್ವಾಮಿ, ಅನ್ನ ದಾನಿ, ಶಾಸಕರಾದ ಎಂ ಟಿ ಕೃಷ್ಣಪ್ಪ, ಕರಿಯಮ್ಮ, ಶಾರದಾ ಪುರ್ಲೆ ನಾಯಕ್ ರಾಜು ಗೌಡ, ವಿಧಾನ ಪರಿಷತ್ ಸದಸ್ಯರಾದ ತಿಪ್ಪೇಸ್ವಾಮಿ ಸೇರಿದಂತೆ ಇತರ ಪಕ್ಷದ ಮುಖಂಡರು ಭಾಗವಹಿಸಿದ್ದಾರೆ.
ಇದನ್ನೂ ಓದಿ: ಪ್ರತಾಪ್ ಸಿಂಹ ಮುಗಿಸಲು ಹೂಡಿದ ಟರ್ಮಿನೇಟರ್ ಸಿನಿಮಾಕ್ಕೆ ಚಿತ್ರಕಥೆ ಸಿದ್ದರಾಮಣ್ಣಂದೇ: ಹೆಚ್ಡಿಕೆ