ಬೆಂಗಳೂರು: ಯಾವುದೇ ರಾಜಕೀಯ ವಿಷಯ ಚರ್ಚೆ ಮಾಡಿಲ್ಲ. ದೇವೇಗೌಡರ ಕುಟುಂಬ ಹಾಗೂ ಬೊಮ್ಮಾಯಿ ಕುಟುಂಬ ಮೊದಲಿನಿಂದಲೂ ಆತ್ಮೀಯತೆ ಇದೆ. ಇಲಾಖೆಗೆ ಸಂಬಂಧಿಸಿದ ವಿಷಯಗಳನ್ನು ಚರ್ಚೆ ಮಾಡಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಆರ್.ಟಿ.ನಗರದಲ್ಲಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ನಿವಾಸಕ್ಕೆ ಇಂದು ಭೇಟಿ ನೀಡಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜಕೀಯ ವಿಷಯ ಚರ್ಚೆ ಮಾಡಿಲ್ಲ ಎಂದರು. ಬೆಳಗಾವಿಯಲ್ಲಿ ಶಿವಸೇನೆ ಉದ್ದಟತನ ಕುರಿತು ಕಠಿಣ ಕ್ರಮ ತೆಗೆದುಕೊಳ್ಳುವಂತೆ ಸರ್ಕಾರಕ್ಕೆ, ಗೃಹ ಸಚಿವರಿಗೆ ಮನವಿ ಮಾಡಿರುವುದಾಗಿ ತಿಳಿಸಿದರು.
ಬೆಳಗಾವಿಯಲ್ಲಿ ನಾವು ಧ್ವಜ ಹಾರಿಸೋಕೆ ಯಾರ ಪರ್ಮಿಷನ್ ಬೇಕು. ಶಿವಸೇನೆ ಉದ್ದಟತನ ಹೆಚ್ಚಾಗಿದೆ. ಹೀಗಾಗಿ ಅವರನ್ನು ನಿಯಂತ್ರಿಸಬೇಕು. ರಾಜ್ಯ ಸರ್ಕಾರ ಮಹಾರಾಷ್ಟ್ರ ವಿಷಯದಲ್ಲಿ ಯಾವುದೇ ಸಾಪ್ಟ್ ಆಗಿಲ್ಲ. ನೂತನ ಸಚಿವರಿಗೆ ಖಾತೆ ಹಂಚಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದು ಸರ್ಕಾರದ ಆಂತರಿಕ ವಿಚಾರ. ಅದರ ಬಗ್ಗೆ ಮಾತನಾಡಲ್ಲ ಎಂದರು.
ಓದಿ...ಸುಧಾಕರ್ ನಿವಾಸದಲ್ಲಿ ವಲಸಿಗ ಸಚಿವರ ಸಭೆ: ಮನೆ ಬಾಗಿಲಿಗೆ ಬಂದು ವಾಪಸ್ ಆದ ಮಾಜಿ ಸಚಿವ ಮೇಟಿ
ಬೆಳಗಾವಿಯಲ್ಲಿ ಎಂಇಎಸ್, ಶಿವಸೇನೆ ಉದ್ದಟತನ ವಿಚಾರದ ಕುರಿತು ಮಾತನಾಡಿದ ಅವರು, ಗೃಹ ಸಚಿವರಿಗೂ ಈ ಬಗ್ಗೆ ಮನವಿ ಮಾಡಿದ್ದೇನೆ. ಸರ್ಕಾರ ಎಂಇಎಸ್ ಹಾಗೂ ಶಿವಸೇನೆ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಇದು ಎಂಇಎಸ್ ಹಾಗೂ ಶಿವಸೇನೆಯ ಉದ್ದಟತನ. ಕನ್ನಡದ ಧ್ವಜವನ್ನು ಬೆಳಗಾವಿಯ ಪಾಲಿಕೆ ಮೇಲೆ ಹಾರಿಸಿರುವುದನ್ನು ವಿರೋಧ ಮಾಡಿರುವುದು ರಾಜ್ಯದ ದ್ರೋಹಿಗಳು. ಕರ್ನಾಟಕದಲ್ಲಿ ಬಿಟ್ಟು ನಾವು ಮಹಾರಾಷ್ಟ್ರದಲ್ಲಿ ಕನ್ನಡ ಬಾವುಟ ಹಾರಿಸೋಕೆ ಆಗುತ್ತಾ?. ನಮ್ಮ ರಾಜ್ಯ, ನಮ್ಮ ನೆಲ. ಇಲ್ಲಿ ಬಾವುಟ ಹಾರಿಸೋದು ವಿರೋಧ ಮಾಡೋರನ್ನು ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.