ಬೆಂಗಳೂರು: ಕುಮಾರಸ್ವಾಮಿಯವರದ್ದು ಆರಕ್ಕೆ ಏರಿಲ್ಲ, ಮೂರಕ್ಕೆ ಇಳಿಯಲ್ಲ ಅನ್ನೋ ಪರಿಸ್ಥಿತಿ ಇದೆ. ಮನೆಯವರ ವಿಚಾರದಲ್ಲೇ ಈಗಾಗಲೇ ಅವರಿಗೆ ಟೆನ್ಷನ್ ಇದೆ. ಹಾಗಾಗಿ ಆರೋಗ್ಯದ ಬಗ್ಗೆ ಗಮನ ಕೊಡಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ವ್ಯಂಗ್ಯವಾಡಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ಇತ್ತೀಚಿನ ಸಮಯಕ್ಕೆ ನೋಡಿದರೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಮ್ಮ ಆರೋಗ್ಯದ ಬಗ್ಗೆ ಗಮನ ಕೊಡೋದು ಒಳ್ಳೆಯದು. ಇತ್ತೀಚೆಗೆ ಅವರಿಗೆ ಯಾರ ಬಗ್ಗೆ ಏನು ಮಾತಾಡುತ್ತಿದ್ದೇನೆ ಎಂಬುದು ಗೊತ್ತಾಗ್ತಾ ಇಲ್ಲ. ಅವರಿಗೆ ಮನೆ ರಾಜಕಾರಣದ ಟೆನ್ಶನ್ ಇರಬಹುದು. ಹಾಗಾಗಿ ಆರೋಗ್ಯದ ಬಗ್ಗೆ ಗಮನ ಕೊಡಲಿ ಎಂದರು.
ಮೋದಿ ಬಂದರೆ ಕಾಂಗ್ರೆಸ್ಗೆ ಭಯ: ರಾಜ್ಯಕ್ಕೆ ಮೋದಿ ಪದೇ ಪದೆ ಭೇಟಿ ನೀಡುತ್ತಿರುವುದರ ಕುರಿತು ಕಾಂಗ್ರೆಸ್ ಟೀಕೆ ಮಾಡುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಮೋದಿ ಬರ್ತಾರೆ ಅಂದ್ರೆ ಕಾಂಗ್ರೆಸ್‌ನವರಿಗೆ ಹೆದರಿಕೆ ಯಾಕೆ? ಮೋದಿ ಬರ್ತಾರೆ ಅಂದ್ರೆ ಶೇ 5 ರಿಂದ 10ರಷ್ಟು ಮತಗಳ ಪ್ರಮಾಣ ಹೆಚ್ಚಾಗುತ್ತದೆ. ಅದಕ್ಕೆ ಅವರಿಗೆ ಭಯವಾಗುತ್ತಿದೆ. ಆ ಭಯದಲ್ಲೇ ಆ ರೀತಿಯಲ್ಲಿ ಟೀಕೆ ಮಾಡುತ್ತಿದ್ದಾರೆ. ರಾಮಲಿಂಗಾರೆಡ್ಡಿ ಅವರ ಹೇಳಿಕೆಯನ್ನು ಗಮನಿಸಿದೆ. ನಲ್ಲಿ ನೀರು ಬಿಡೋಕು ಮೋದಿನೇ ಬರಬೇಕು ಅಂತ ಹೇಳಿದ್ದಾರೆ. ಮೋದಿ ಲಕ್ಷಾಂತರ ಮನೆಗಳಿಗೆ ನಲ್ಲಿ ನೀರು ಕೊಟ್ಟಿದ್ದಾರೆ ಎಂದರು.
ಮೋದಿಯವರು ಬರೀ ಕರ್ನಾಟಕಕ್ಕೆ ಮಾತ್ರ ಬಂದಿಲ್ಲ. ತಮಿಳುನಾಡು, ಮಹಾರಾಷ್ಟ್ರದಲ್ಲಿ ಚುನಾವಣೆ ಇಲ್ಲ ಅಂದ್ರೂ ಅಲ್ಲೂ ಹೋಗಿದ್ದಾರೆ. ಕಾರ್ಯಕ್ರಮಗಳಲ್ಲೂ ಭಾಗವಹಿಸಿದ್ದಾರೆ. ಮೋದಿ ಹಾಲಿಡೇ ರಾಜಕಾರಣಿ ಅಲ್ಲ. ಕ್ರಿಸ್ಮಸ್ ಬಂದಾಗ ಒಂದು ದೇಶ ಅಂತ ಮೋದಿ ಹೋಗಲ್ಲ. ಯಾವಾಗ ಬೇಕಾದರೂ ಯಾವ ರಾಜ್ಯಕ್ಕೆ ಬೇಕಾದರೂ ಹೋಗುತ್ತಾರೆ. ಅವರ ಲೀಡರ್ ಬಂದರೆ ಲಾಸ್ ಆಗುತ್ತದೆ ಎಂದು ಪರೋಕ್ಷವಾಗಿ ರಾಹುಲ್ ಗಾಂಧಿಯನ್ನು ಟೀಕಿಸಿದರು.
ಕಾಂಗ್ರೆಸ್‌ನವರಿಗೆ ಅವರ ಪಾರ್ಟಿ ಲೀಡರ್ ಬಂದರೆ ಲಾಸ್ ಅಷ್ಟೇ, ಲಾಭ ಏನೂ ಆಗಲ್ಲ. ಮೋದಿ ಬಂದರೆ ರಾಜ್ಯ ಮತ್ತು ಪಕ್ಷ ಎರಡಕ್ಕೂ ಲಾಭವಾಗುತ್ತದೆ. ಮೋದಿ ನಮ್ಮ ಟೀಂ ಕ್ಯಾಪ್ಟನ್. ನಮ್ಮ ಪಕ್ಷ ಪ್ರತಿ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಳ್ಳುತ್ತದೆ. ಕಾಂಗ್ರೆಸ್‌ನವರು ಗೆದ್ದರೆ, ಅದಕ್ಕೆ ಕಾರಣ ಜನಾದೇಶ ಅಂತಾರೆ, ಒಂದು ವೇಳೆ ಸೋತರೆ ಇವಿಎಮ್ನಲ್ಲಿ ದೋಷ ಎಂದು ಹೇಳುತ್ತಾರೆ. ನಾವು ಪರಿಶ್ರಮದಿಂದ ಪಕ್ಷ ಕಟ್ಟುತ್ತೇವೆ. ಪರಿಶ್ರಮದಿಂದ ಅಧಿಕಾರಕ್ಕೆ ಬರುತ್ತೇವೆ ಎಂದು ಟಾಂಗ್ ನೀಡಿದರು.
ಆರ್ ಅಶೋಕ್ಗೆ ರಾಜ್ಯವನ್ನೇ ಲೀಡ್ ಮಾಡುವ ಸಾಮರ್ಥ್ಯವಿದೆ: ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವರ ಬದಲಾವಣೆ ವಿಚಾರವಾಗಿ ಮಾತನಾಡಿ, ಸ್ವತಃ ಆರ್ ಅಶೋಕ್ ಅವರೇ ಮಂಡ್ಯ ಉಸ್ತುವಾರಿ ಬದಲಾಯಿಸಿ ಅಂತ ಪತ್ರ ಬರೆದಿದ್ದಾರೆ ಎಂದು ಮಾತ್ರ ಗೊತ್ತು. ಅಶೋಕ್ಗೆ ಬರೀ ಮಂಡ್ಯ ಅಲ್ಲ, ಇಡೀ ಕರ್ನಾಟಕ ಲೀಡ್ ಮಾಡುವ ಶಕ್ತಿ ಇದೆ. ನೀವು ರಾಂಗ್ ಅಡ್ರೆಸ್ಗೆ ಪ್ರಶ್ನೆ ಕೇಳ್ತಿದ್ದೀರಾ. ಸಂಬಂಧಪಟ್ಟವರನ್ನೇ ಕೇಳಿ ಎಂದು ತಿಳಿಸಿದರು.
ಇದನ್ನೂ ಓದಿ: ರಾಹುಲ್ ಗಾಂಧಿ ರಾಜ್ಯಕ್ಕೆ ಬಂದರೆ ಕಾಂಗ್ರೆಸ್ಗೆ ಬರುವ ವೋಟ್ ಕೂಡಾ ಬರಲ್ಲ: ಈಶ್ವರಪ್ಪ ವ್ಯಂಗ್ಯ