ಹೆಚ್ಡಿಕೆ- ಹೆಚ್ಡಿಡಿ ಭೋಗಸ್ ಮುಸ್ಲಿಂ ಪ್ರೇಮದ ಮುಖವಾಡ ಕಳಚಿ ಬಿದ್ದಿದೆ : ಡಾ. ಹೆಚ್ ಸಿ ಮಹಾದೇವಪ್ಪ - ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಸಚಿವ ಡಾ ಎಚ್ ಸಿ ಮಹದೇವಪ್ಪ
ಇದೀಗ ರಾಜ್ಯಸಭೆ ಅಭ್ಯರ್ಥಿಗಳ ವಿಚಾರದಲ್ಲಿ ಹೆಚ್.ಡಿ. ದೇವೇಗೌಡ ಹಾಗೂ ಕುಮಾರಸ್ವಾಮಿ ಅವರ ಭೋಗಸ್ ಮುಸ್ಲಿಂ ಪ್ರೇಮದ ಮುಖವಾಡ ಕಳಚಿ ಬಿದ್ದಿದೆ. ಅವರ ಹಿಂದಿನ ಮಾತುಗಳು ದುರುದ್ದೇಶ ಮತ್ತು ಮತ ಒಡೆಯುವ ಕಾರಣಕ್ಕೆ ಆಡಿದ್ದ ಮಾತುಗಳು ಎಂಬ ಸಂಗತಿಯು ಸಾಬೀತಾಗಿದೆ ಎಂದು ಮಾಜಿ ಸಚಿವ ಡಾ.ಹೆಚ್ ಸಿ ಮಹಾದೇವಪ್ಪ ಹೇಳಿದ್ದಾರೆ..
ಬೆಂಗಳೂರು : ಕಾಂಗ್ರೆಸ್ನ ರಾಜ್ಯಸಭಾ ಅಭ್ಯರ್ಥಿಗಳ ವಿಚಾರದಲ್ಲಿ ಜೆಡಿಎಸ್ ಪಕ್ಷದ ನಾಯಕರಾದ ಹೆಚ್ ಡಿ ದೇವೇಗೌಡ ಮತ್ತು ಕುಮಾರಸ್ವಾಮಿ ಅವರು ಹೆಚ್ಚು ತಲೆ ಕೆಡಿಸಿಕೊಂಡಿದ್ದಾರೆ. ಪ್ರತಿಪಕ್ಷದ ನಾಯಕರ ಮೇಲೆ ಎರಗಲು ಇದನ್ನೇ ಅವಕಾಶವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಮಾಜಿ ಸಚಿವ ಡಾ.ಹೆಚ್.ಸಿ. ಮಹದೇವಪ್ಪ ಆರೋಪಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, ಕಾಂಗ್ರೆಸ್ ಪಕ್ಷದಿಂದ ಇಬ್ಬರನ್ನು ನಿಲ್ಲಿಸಿದರೂ ಗೆಲ್ಲುವುದು ಒಬ್ಬರೇ. ಹೀಗಾಗಿ, ಕಾಂಗ್ರೆಸ್ ಪಕ್ಷವು ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ನೀಡಲಿ ಎನ್ನುವುದು ದೇವೇಗೌಡರ ವಾದವಾದರೆ, ಕಾಂಗ್ರೆಸ್ ಪಕ್ಷವು ಮುಸ್ಲಿಂ ಅಭ್ಯರ್ಥಿಯನ್ನು ಮುಗಿಸಲು ಈ ಕೆಲಸ ಮಾಡಿದೆ ಎಂಬುದು ಕುಮಾರಸ್ವಾಮಿ ಅವರ ವಾದವಾಗಿದೆ. ಇನ್ನು ಇತ್ತೀಚಿನ ದಿನಗಳಲ್ಲಿ ಕೋಮುವಾದಿಗಳಿಗೆ ಅನುಕೂಲವಾಗಲಿ ಮತ್ತು ಅವರ ಮತಗಳು ಒಡೆಯಲಿ ಎಂಬ ಕಾರಣಕ್ಕೆ ಕುಮಾರಸ್ವಾಮಿ ಅವರು ಮುಸಲ್ಮಾನರ ಸಮಸ್ಯೆಗಳ ಪರವಾಗಿ ದನಿ ಎತ್ತುತ್ತಿದ್ದಾರೆ ಎಂದಿದ್ದಾರೆ.
ಭೋಗಸ್ ಮುಸ್ಲಿಂ ಪ್ರೇಮದ ಮುಖವಾಡ ಕಳಚಿದೆ : ಆದರೆ, ಇದೀಗ ರಾಜ್ಯಸಭೆ ಅಭ್ಯರ್ಥಿಗಳ ವಿಚಾರದಲ್ಲಿ ಹೆಚ್.ಡಿ. ದೇವೇಗೌಡ ಹಾಗೂ ಕುಮಾರಸ್ವಾಮಿ ಅವರ ಭೋಗಸ್ ಮುಸ್ಲಿಂ ಪ್ರೇಮದ ಮುಖವಾಡ ಕಳಚಿ ಬಿದ್ದಿದೆ. ಅವರ ಹಿಂದಿನ ಮಾತುಗಳು ದುರುದ್ದೇಶ ಮತ್ತು ಮತ ಒಡೆಯುವ ಕಾರಣಕ್ಕೆ ಆಡಿದ್ದ ಮಾತುಗಳು ಎಂಬ ಸಂಗತಿಯು ಸಾಬೀತಾಗಿದೆ.
ಗೆಲ್ಲಲು ಸಾಧ್ಯವಿಲ್ಲದೇ ಇದ್ದರೂ ಕೂಡ ಕಾಂಗ್ರೆಸ್ ಎರಡನೇ ಅಭ್ಯರ್ಥಿ ಹಾಕಿದೆ ಎಂದು ದೇವೇಗೌಡರು ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಿದ್ದಾರೆ. ದೇವೇಗೌಡರ ಮಾತಿನ ಪ್ರಕಾರವೇ ಹೋಗುವುದಾದರೆ, ರಾಜ್ಯಸಭೆಯಲ್ಲಿ ಗೆಲ್ಲಲು ಬೇಕಾದಷ್ಟು ಬೆಂಬಲ ಇಲ್ಲದಾಗಲೂ ಅವರೂ ಸಹ ತಮ್ಮ ಅಭ್ಯರ್ಥಿಯನ್ನು ಚುನಾವಣೆಗೆ ನಿಲ್ಲಿಸಿದ್ದು, ಇದು ಯಾವ ಕಾರಣಕ್ಕೆ ಎಂಬುದನ್ನು ಅವರು ಸ್ಪಷ್ಟಪಡಿಸಬೇಕು ಎಂದಿದ್ದಾರೆ.
ಕಳೆದ ಲೋಕಸಭಾ ಚುನಾವಣೆ ಮೈತ್ರಿಯ ನಂತರದಲ್ಲಿ ತುಮಕೂರು ಕ್ಷೇತ್ರವನ್ನು ಪಡೆದಿದ್ದ ದೇವೇಗೌಡರು, ಅಲ್ಲಿ ಸೋತರು ಎಂಬ ಕಾರಣಕ್ಕೆ ಹಿರಿಯ ನಾಯಕರು ಎಂಬ ಗೌರವ ಇಟ್ಟುಕೊಂಡು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಅವರಿಗೆ ರಾಜ್ಯಸಭೆಯಲ್ಲಿ ಅವಕಾಶವನ್ನು ಕಲ್ಪಿಸಿದೆ. ಇಡೀ ರಾಜ್ಯಕ್ಕೆ ಗೊತ್ತಿರುವ ಈ ಸಂಗತಿಯು ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರಿಗೆ ಗೊತ್ತಿದೆ ಎಂದುಕೊಂಡಿರುವೆ.
ಇದನ್ನೂ ಓದಿ: ಹೊಸ ಕಮಿಟಿ ಮಾಡಿ ಅಗತ್ಯ ಇದ್ದರೆ ಪಠ್ಯಕ್ರಮ ಪರಿಷ್ಕರಣೆ ಮಾಡಬೇಕು : ವಿಪಕ್ಷ ನಾಯಕ ಸಿದ್ದರಾಮಯ್ಯ
ಹೀಗಿರುವಾಗ, ದೇವೇಗೌಡರು ತಾನು ಕಾಂಗ್ರೆಸ್ ಪರವಾಗಿ ನಿಲ್ಲಬೇಕಾದ್ದು ನ್ಯಾಯಯುತವಾದ ನಡೆ ಅಂತಾ ಅವರಿಗೆ ಅನ್ನಿಸುವುದಿಲ್ಲವೇ?. ಇನ್ನು ಪ್ರತಿಪಕ್ಷದ ಸ್ಥಾನದಲ್ಲಿ ಇದ್ದುಕೊಂಡು ಪ್ರತಿಪಕ್ಷವನ್ನೇ ಬೈಯ್ಯುವ ಅಪರೂಪದ ಜನಪ್ರತಿನಿಧಿಯಾದ ಕುಮಾರಸ್ವಾಮಿ ಅವರು, ಬರೀ ಮಾತಿನಲ್ಲಿ ಮುಸಲ್ಮಾನರ ಮೇಲೆ ಪ್ರೀತಿ ತೋರಿಸದೇ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿದರೆ, ಅವರ ಗೊಂದಲಮಯ ಮಾತುಗಳಿಗೂ ಅರ್ಥವಿರುತ್ತದೆ. ಅಲ್ಲದೇ ಮುಸಲ್ಮಾನ ಅಭ್ಯರ್ಥಿ ರಾಜ್ಯಸಭೆಯನ್ನು ಪ್ರವೇಶಿಸಿದರೆ, ಅವರ ಪರ ದನಿ ಎತ್ತುವ ಅವರ ಶಕ್ತಿ ಹೆಚ್ಚಾಗುವುದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಎಲ್ಲವೂ ಇಷ್ಟೊಂದು ನೇರವಾಗಿ ಮತ್ತು ಸ್ಪಷ್ಟವಾಗಿ ಇದ್ದಾಗಲೂ ಕೂಡ ಜೆಡಿಎಸ್ ಅಸೂಕ್ಷ್ಮತೆಯಿಂದ ವರ್ತಿಸಿದರೆ ಹೇಗೆ? ಕುಮಾರಸ್ವಾಮಿ ಅವರ ತಿಳುವಳಿಕೆ ಮತ್ತು ಅವರ ಸಾರ್ವಜನಿಕ ಜೀವನದ ಬಗ್ಗೆ ನಮಗೆ ಸ್ಪಷ್ಟತೆ ಇರುವುದರಿಂದ ಅವರ ಮಾತುಗಳಿಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಆದ್ರೆ, ದೇವೇಗೌಡರ ಹಿರಿತನ ಮತ್ತು ಅನುಭವಕ್ಕೆ ಏನಾಗಿದೆ?.
ಹೀಗೆ ಮಾಡಿದರೆ ಪೊಳ್ಳಾಗಿ ಆಡುವ ಕುಮಾರಸ್ವಾಮಿಗೂ ದೇವೇಗೌಡರಿಗೂ ವ್ಯತ್ಯಾಸ ಇದೆ ಎಂದು ನಾವು ಅಂದುಕೊಳ್ಳುವುದಾದರೂ ಹೇಗೆ? ಎಲ್ಲವೂ ಇಷ್ಟು ನೇರವಾಗಿ ಮತ್ತು ಸ್ಪಷ್ಟವಾಗಿ ಇದ್ದಾಗಲೂ ವಿಪಕ್ಷೀಯ ನಾಯಕರುಗಳ ಮೇಲೆ ಅನಾರೋಗ್ಯಕರವಾಗಿ ಮೂಡಿರುವ ದೇವೇಗೌಡರ ಅಸಹನೆಗೆ ಏನಾದರೂ ಅರ್ಥವಿದೆಯೇ? ಎಂದು ಪ್ರಶ್ನಿಸಿದ್ದಾರೆ.
ಸರ್ಕಾರದ ವಿರುದ್ಧ ವಾಗ್ದಾಳಿ : ಟ್ವೀಟ್ ಮೂಲಕ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಮಹಾದೇವಪ್ಪ, ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಕುರಿತಂತೆ ತಿಳುವಳಿಕೆ ಇಲ್ಲದ ಓರ್ವ ಮಾನಸಿಕ ಪುಂಡನಿಗೆ ಶಾಲಾ ಮಕ್ಕಳ ಪಠ್ಯಪುಸ್ತಕ ಪರಿಷ್ಕರಣೆಯ ಜವಾಬ್ದಾರಿ ನೀಡಿರುವ ಸರ್ಕಾರವು, ಇದೀಗ ಸಾಕಷ್ಟು ವಿರೋಧದ ನಡುವೆ ಆತನ ಸಮಿತಿಯನ್ನು ರದ್ದು ಪಡಿಸುವ ಕೆಲಸ ಮಾಡಿದೆ.
ಆತನ ಸಮಿತಿಯ ಪಠ್ಯವನ್ನು ಹಾಗೆ ಉಳಿಸಿಕೊಳ್ಳಲು ಹೊರಟಿದೆ. ಪಠ್ಯ ಪುಸ್ತಕ ಎಂಬುದು ಪ್ರಜಾಪ್ರಭುತ್ವವನ್ನು ಆರೋಗ್ಯಕರವಾಗಿ ಬೆಳೆಸುವ ಆಕರವೇ ಹೊರತು ಪುಂಡ ಪೋಕರಿಗಳು ತಲೆ ಹರಟೆ ಮಾಡುವ ತಾಣವಲ್ಲ. ಸರ್ಕಾರ ಕೂಡಲೇ ಆತನ ಸಮಿತಿಯನ್ನು ರದ್ದು ಮಾಡಿದಂತೆಯೇ ಆತನ ಸಮಿತಿ ಮಾಡಿರುವ ಅಜ್ಞಾನದ ಯಡವಟ್ಟುಗಳನ್ನೂ ಕೂಡ ರದ್ದು ಮಾಡಬೇಕೆಂದು ಆಗ್ರಹಿಸುತ್ತೇನೆ ಎಂದಿದ್ದಾರೆ.
ಜೊತೆಗೆ ಮಠಾಧೀಶರು ವಿರೋಧಿಸಿದರು ಎಂಬ ಕಾರಣಕ್ಕೆ ಬಸವಣ್ಣನ ಪಠ್ಯವನ್ನು ಮಾತ್ರವೇ ಬದಲಿಸುತ್ತೇವೆ ಎಂಬ ಸರ್ಕಾರದ ನಿಲುವು ಮೂರ್ಖತ್ವ ಮತ್ತು ಬಾಲಿಶತನದಿಂದ ಕೂಡಿದೆ. ಕಾರಣ ಬಸವಣ್ಣ ಎಂಬ ವ್ಯಕ್ತಿ ಸಮಾಜದ ಕ್ರಾಂತಿಕಾರಿ ಆಲೋಚನೆಗಳ ಅರಿವಿನ ಭಾಗವಾಗಿದ್ದಾರೆ. ಅವರ ಕುರಿತಂತೆ ಎಲ್ಲರಿಗೂ ತಿಳುವಳಿಕೆ ಇರಬೇಕಾದ್ದು ಸಾಮಾಜಿಕ ಜವಾಬ್ದಾರಿಯೇ ಆಗಿದೆ.
ಸರ್ಕಾರ ಬಸವಣ್ಣನವರ ತತ್ವಗಳನ್ನು ಗಾಳಿಗೆ ತೂರಿದ್ದು, ಪಠ್ಯದಲ್ಲಿ ಬಸವಣ್ಣನವರ ವಿಷಯದಲ್ಲಿ ಆಗಿರುವ ಎಡವಟ್ಟನ್ನೇ ಹಾಗೆ ಕಾಪಾಡಿಕೊಂಡು, ಒಂದು ಅರ್ಥವಿಲ್ಲದ ಆದೇಶದ ಮೂಲಕ ಮಠಾಧೀಶರನ್ನೂ ದಾರಿ ತಪ್ಪಿಸಲು ಹೊರಟಿದೆ. ದಯಮಾಡಿ ಎಲ್ಲ ಮಠಾಧೀಶರು ಬೊಮ್ಮಾಯಿ ಮತ್ತವರ ಸರ್ಕಾರಕ್ಕೆ ಬಸವಣ್ಣನವರ ಕುರಿತಂತೆ ತಿಳಿಸಿಕೊಡಬೇಕಾಗಿ ವಿನಂತಿಸುತ್ತೇನೆ ಎಂದಿದ್ದಾರೆ.