ಬೆಂಗಳೂರು: ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸಯ್ಯದ್ ಯೆಸ್ರಬ್ ಅಲಿಖಾದ್ರಿ ಅವರ ಹೆಸರನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಇಂದು ಜೆಪಿ ಭವನದಲ್ಲಿ ಘೋಷಣೆ ಮಾಡಿದರು.
ಉಪ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಂಬಂಧ ಮುಖಂಡರ ಸಭೆ ನಡೆಸಲಾಯಿತು. ಸಭೆಯಲ್ಲಿ ಸಯ್ಯದ್ ಯೆಸ್ರಬ್ ಅಲಿಖಾದ್ರಿ ಹಾಗೂ ಕಾರ್ಯಕರ್ತರನ್ನ ಪಕ್ಷಕ್ಕೆ ಸೇರ್ಪಡೆ ಮಾಡಿ ಅಭ್ಯರ್ಥಿ ಘೋಷಣೆ ಮಾಡಿದರು.
ಸಭೆ ಬಳಿಕ ಮಾತನಾಡಿದ ಕುಮಾರಸ್ವಾಮಿ, ಉಪಚುನಾವಣೆ ದಿನಾಂಕ ಘೋಷಣೆ ಆಗಿದೆ. ನನಗೆ ಆರೋಗ್ಯ ಸಮಸ್ಯೆ ಇದ್ರೂ ಸಹ ಮಸ್ಕಿ, ಬಸವಕಲ್ಯಾಣ ಮುಖಂಡರ ಸಭೆ ನಡೆಸಿದೆ. ಎರಡೂ ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ನಿಲ್ಲಿಸಲು ನಿರ್ಧರಿಸಲಾಗಿದೆ. ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಆನಂದ್ ಎಂಬುವವರು ಬಹುಮತದಿಂದ ಗೆದ್ದಿದ್ದಾರೆ. ಬಸವಕಲ್ಯಾಣದಲ್ಲಿ ನಮ್ಮ ಅಭ್ಯರ್ಥಿ ಗೆಲ್ಲಬೇಕೆಂದು ಸೈಲೆಂಟ್ ಆಗಿ ಚರ್ಚೆ ನಡೆಸಿ ಅಭ್ಯರ್ಥಿ ಘೋಷಣೆ ಮಾಡಿದ್ದೇನೆ. ಸಯ್ಯದ್ ಯೆಸ್ರಬ್ ಅಲಿಖಾದ್ರಿ ಅವರನ್ನು ಬಸವಕಲ್ಯಾಣಕ್ಕೆ ಆಯ್ಕೆ ಮಾಡಿದ್ದೇನೆ ಎಂದು ತಿಳಿಸಿದರು.
ನಾಳೆ ಮಸ್ಕಿ ಅಭ್ಯರ್ಥಿ ಘೋಷಣೆ:
ನಾಳೆ ಮಸ್ಕಿ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿ ಆಯ್ಕೆ ಮಾಡುವುದಾಗಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಬೆಳಗಾವಿ ಲೋಕಸಭೆ ಅಭ್ಯರ್ಥಿಯನ್ನು ಸಭೆ ನಡೆಸಿ ನಿರ್ಧಾರ ಮಾಡುತ್ತೇನೆ. ಮಸ್ಕಿ, ಬಸವಕಲ್ಯಾಣ ಕ್ಷೇತ್ರಗಳ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದೇನೆ. ಎಷ್ಟೇ ಆರ್ಥಿಕ ಸಮಸ್ಯೆ ಇದ್ರೂ ಶ್ರಮಿಸುತ್ತೇನೆ. ಉಪಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದ್ದೇನೆ. 15 ವರ್ಷದಿಂದ ಸೈಯದ್ ಎಸ್ರಾಬ್ ಅಲಿಖಾನ್ ಕಾಂಗ್ರೆಸ್ನಲ್ಲಿ ಇದ್ರು. ಇವರು ಎಲ್ಲಾ ಸಮುದಾಯದ ಜೊತೆಗೆ ಉತ್ತಮ ಸಂಬಂಧ ಹೊಂದಿದ್ದಾರೆ. ಇವರು ಪಕ್ಷಕ್ಕೆ ಬರುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ ನಾಯಕರು ಜೆಡಿಎಸ್ಗೆ ಬರ್ತಿದ್ದಾರೆ. ಯಾವ ನಾಯಕರ ಮನೆಗೆ ಮೈತ್ರಿ ಬಗ್ಗೆ ಚರ್ಚೆ ಮಾಡೋದಕ್ಕೆ ಅವರ ಮನೆ ಬಾಗಿಲಿಗೆ ಹೋಗಿಲ್ಲ. ಪದೇ ಪದೆ ಜೆಡಿಎಸ್ ಬಗ್ಗೆ ಅನುಮಾನ ಬರೋ ರೀತಿ ಕಾಂಗ್ರೆಸ್ ನಾಯಕರು ಮಾತಾಡ್ತಿದ್ದಾರೆ. ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ವೇದಿಕೆ ಮೇಲೆ ಹೇಳಿದ್ದಾರೆ. ನಾನು ಅವರ ಮನೆ ಬಾಗಿಲಿಗೆ ಹೋಗಿಲ್ಲ.
ನಾವು ಕಳೆದ ಬಾರಿ ಇನ್ನೂ 10ರಿಂದ 15 ಸೀಟ್ ಗೆಲ್ಲುತ್ತಿದ್ವಿ. ಕಾಂಗ್ರೆಸ್ ವ್ಯವಸ್ಥಿತವಾಗಿ ನಮ್ಮ ಪಕ್ಷವನ್ನು ಬಿಜೆಪಿ ಬಿ ಟೀಂ ಎನ್ನುವ ಮೂಲಕ ನಮ್ಮ ಸಂಖ್ಯೆ ಕಡಿಮೆ ಮಾಡಿತು. ಇಲ್ಲದಿದ್ದರೆ ಕನಿಷ್ಠ 60 ಸೀಟ್ ನಾವು ಗೆಲ್ಲುತ್ತಿದ್ವಿ. 50 ಕೋಟಿ ರೂ. ವ್ಯವಹಾರ ಆಗಿದೆ ಎಂದು ಹೇಳಿದವನು ನಾನು. ನರೇಶ್ ಬಗ್ಗೆ ಹೇಳಿದವನು ನಾನು. ನಿಖರ ಮಾಹಿತಿ ಇಲ್ಲದೆ ನಾನು ಮಾತನಾಡುವುದಿಲ್ಲ. ಶೀಘ್ರದಲ್ಲೇ ಗೊತ್ತಾಗಲಿದೆ ನಿಮಗೆ ಆ ಮಹಾನಾಯಕ ಯಾರು ಎಂದು. ಹಲವರು ನಮ್ಮ ಅಭಿಮಾನಿಗಳಿದ್ದಾರೆ. ಹಲವರು ನಮ್ಮ ಬಳಿ ಸಹಾಯ ಪಡೆದಿದ್ದಾರೆ. ಈಗ ಹೇಳಲ್ಲ. ಸಮಯ ಬಂದಾಗ ಮಾಹಿತಿ ನೀಡುವೆ ಎಂದರು.
ಜಿಟಿಡಿ ಮುಗಿದ ಅಧ್ಯಾಯ:
ಮಾಜಿ ಸಚಿವ ಜಿ.ಟಿ.ದೇವೇಗೌಡರ ವಿಷಯ ಜೆಡಿಎಸ್ನಲ್ಲಿ ಕ್ಲೋಸ್ಡ್ ಚಾಪ್ಟರ್. ಸಾ.ರಾ.ಮಹೇಶ್ ನನಗಿಂತಲೂ ಭಾವನಾ ಜೀವಿ. ಹಾಗಾಗಿ ಭಾವನಾತ್ಮಕವಾಗಿ ಮಾತನಾಡಿದ್ದಾರೆ. ಅದನ್ನೆಲ್ಲಾ ಮರೆತು ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ಸಾ.ರಾ.ಮಹೇಶ್ಗೆ ಸೂಚನೆ ನೀಡಿದ್ದೇನೆ. ಮೈಮುಲ್ ಚುನಾವಣೆಗೂ ಸಾರ್ವತ್ರಿಕ ಚುನಾವಣೆಗೂ ಸಾಕಷ್ಟು ವ್ಯತ್ಯಾಸವಿದೆ. 500 ವೋಟ್ಗಳಿರುವ ಆ ಚುನಾವಣೆ ಹೇಗೆ ನಡೆಯುತ್ತೆ ಎಂಬುದು ಎಲ್ಲರಿಗೂ ಗೊತ್ತಿದೆ. ನಾವು ಜಿ.ಟಿ.ದೇವೇಗೌಡರ ಮೇಲೆ ಕ್ರಮ ಕೈಗೊಳ್ಳುವುದಿಲ್ಲ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಕಾರ್ಯಕರ್ತರು, ಮತದಾರರು ಕ್ರಮ ಏನು ಎಂದು ತೋರಿಸುತ್ತಾರೆ. ನಮ್ಮ ಕುಟುಂಬದವರು ಆಂಜನೇಯ ಸೊಸೈಟಿ ಚುನಾವಣೆಯಿಂದಲೇ ರಾಜಕೀಯ ಜೀವನ ಪ್ರಾರಂಭಿಸಿದ್ದು. ಹಾಗಾಗಿ ಪಕ್ಷದ ಹಿತದೃಷ್ಟಿ, ಕಾರ್ಯಕರ್ತರಿಗಾಗಿ ಸಂಸತ್ ಚುನಾವಣೆಯಿಂದ ಸೊಸೈಟಿ ಚುನಾವಣೆವರೆಗೆ ಯಾವ ಚುನಾವಣೆಯಾದರೂ ಸರಿ ನಮ್ಮ ಕುಟುಂಬ ಅದರಲ್ಲಿ ಭಾಗಿಯಾಗುತ್ತದೆ ಎಂದು ಹೇಳಿದರು.