ಬೆಂಗಳೂರು: ಕಾಂಗ್ರೆಸ್ 120 ಸ್ಥಾನ ಇದ್ದಿದ್ದು, 80ಕ್ಕೆ ಬಂದಿತ್ತು. ಮತ್ತೆ ಅಂತದ್ದೇ ಪರಿಸ್ಥಿತಿ ಬರಲಿದೆ ಎಂದು ಹೆಚ್.ಡಿ.ರೇವಣ್ಣ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಜೆಡಿಎಸ್ ಶಾಸಕರು ಕಾಂಗ್ರೆಸ್‌ಗೆ ಬರ್ತಾರೆ ಎಂದು ಡಿಕೆಶಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಇದೆಲ್ಲ ಹೋಗಿ ಬಂದು ಏನಾಗಿದೆ. ಜೆಡಿಎಸ್ನಿಂದ ಎಳೆದುಕೊಳ್ಳೋದು ಅಂತಿದ್ದಾರೆ. ಹಿಂದೆ ಏನಾಗಿತ್ತು ನಿಮಗೆ ಗೊತ್ತು. ಕಾಂಗ್ರೆಸ್ 120 ಸ್ಥಾನ ಇದ್ದಿದ್ದು, 80ಕ್ಕೆ ಬಂದಿತ್ತು. ಮತ್ತೆ ಅಂತದ್ದೇ ಪರಿಸ್ಥಿತಿ ಬರಲಿದೆ ಎಂದು ಟಾಂಗ್ ನೀಡಿದರು.
ಜೆಡಿಎಸ್-ಬಿಜೆಪಿ ಮೈತ್ರಿ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಮೈತ್ರಿ ಬಗ್ಗೆ, ಜೆಡಿಎಸ್ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳೋದು ಬೇಡ. ಯಾರೂ ಜೆಡಿಎಸ್ ಮುಳುಗೋಯ್ತು ಅಂತ ತಿಳಿಯೋದು ಕೂಡ ಬೇಡ. ಅಂದು ಏನೂ ಇಲ್ಲ ಜೆಡಿಎಸ್ ಮುಗಿದೋಯ್ತು ಅಂದಿದ್ದರು. ಆದರೆ ದೇವೇಗೌಡರು 114 ಸೀಟು ಗೆದ್ದು, ಲೋಕಸಭಾ ಕ್ಷೇತ್ರದಲ್ಲಿ 18 ಸೀಟು ಗೆದ್ದು ಪ್ರಧಾನಿ ಆದರು. ಜೆಡಿಎಎಸ್ ಮುಗಿಸೋಕೆ ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದರು.
ಜೆಡಿಎಸ್ನಿಂದ 3ನೇ ಎರಡರಷ್ಟು ಕಾಂಗ್ರೆಸ್‌ಗೆ ಬರ್ತಾರೆ ಅಂತ ಸಚಿವ ರಾಜಣ್ಣ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಬಂದರೆ ಅವರನ್ನೆಲ್ಲ ಕರೆದುಕೊಳ್ಳಲು ಹೇಳಿ ಅಂತ ಟಕ್ಕರ್ ನೀಡಿದರು. ಮುಂದೆ ಹಾಸನಾಂಬೆ ದರ್ಶನದ ವೇಳೆ ವಿದ್ಯುತ್ ಪ್ರವಹಿಸಿದ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಬೆಳಗ್ಗೆ ಘಟನೆ ನಡೆದದ್ದು ವಿಷಯ ಗೊತ್ತಾಯಿತು. ಸಂಬಂಧಿಸಿದವರ ಜೊತೆ ಮಾತನಾಡಿದೆ. ಮೆಡಿಕಲ್ ಕಾಲೇಜು ವೈದ್ಯಾಧಿಕಾರಿ ಜೊತೆ ಮಾತಾಡಿದೆ. ಅಸ್ವಸ್ಥ ಹೆಣ್ಣು ಮಗಳಿಗೆ ಚಿಕಿತ್ಸೆ ಕೊಡುತ್ತಿರೋದಾಗಿ ಹೇಳಿದ್ದಾರೆ. ದಿನಾ ಒಂದು ಲಕ್ಷ ಜನ ದೇವಾಲಯಕ್ಕೆ ಬರುತ್ತಿದ್ದಾರೆ ಎಂದರು.
ಹಲವು ಇಲಾಖೆ ಅಧಿಕಾರಿಗಳು ಹಗಲು ರಾತ್ರಿ ಕೆಲಸ ಮಾಡುತ್ತಿದ್ದು, ಕೆಲ ಅಧಿಕಾರಿಗಳೇ ಆಸ್ಪತ್ರೆಗೆ ಸೇರುವಂತಾಗಿದೆ. ಇಲ್ಲಿಯವರೆಗೂ ಯಾವುದೇ ಅಹಿತಕರ ಘಟನೆ ನಡೆದಿರಲಿಲ್ಲ. ಆದರೆ ಈಗ ಅಂತ ಘಟನೆ ಜರುಗಿದೆ. ಈ ರೀತಿ ಇನ್ನು ಮುಂದೆ ದುರ್ಘಟನೆ ಆಗದಂತೆ ತಾಯಿ ಕಾಪಾಡಲಿ. ಜತೆಗೆ ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದೇನೆ. ಇಂಧನ ಇಲಾಖೆ ಅಧಿಕಾರಿಗಳು ಕೂಡ ಗಮನ ಹರಿಸಬೇಕು. ಜಿಲ್ಲಾಧಿಕಾರಿ ಬೆಂಗಳೂರಿಗೆ ಬಂದಿದ್ದರು. ಅವರಿಗೂ ಈ ವಿಚಾರ ಗೊತ್ತಿರಲಿಲ್ಲ ಎಂದು ಪರಿಸ್ಥಿತಿಯ ಬಗ್ಗೆ ಸ್ಪಷ್ಟಪಡಿಸಿದರು.
ಇನ್ನು ಇಂದು ಮಧ್ಯಾಹ್ನ ಹಾಸನಾಂಬೆ ದೇವಿಯ ದರ್ಶನಕ್ಕೆ ಬಂದು ಸರತಿ ಸಾಲಿನಲ್ಲಿ ನಿಂತ ಭಕ್ತರಿಗೆ ವಿದ್ಯುತ್ ಪ್ರವಹಿಸಿತ್ತು. ಪರಿಣಾಮ ಭಕ್ತರೆಲ್ಲ ಭಯಗೊಂಡು ಓಡಲು ಮುಂದಾದಾಗ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ನಡೆದಿತ್ತು. ಘಟನೆಯಲ್ಲಿ ಕೆಲ ಭಕ್ತರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಇದನ್ನೂ ಓದಿ: ಬರಗಾಲ ನಿಭಾಯಿಸಲಾಗದ ಅಸಮರ್ಥ ಸರ್ಕಾರ: ಸಂಸದ ರಾಘವೇಂದ್ರ ವಾಗ್ದಾಳಿ