ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮನೆ ಮೇಲೆ ಸಿಬಿಐ ದಾಳಿ ನಡೆಸಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು, ನಾನು ತಕ್ಷಣ ಪ್ರತಿಕ್ರಿಯೆ ಕೊಡುವುದಿಲ್ಲ. ಇದು ರಾಜಕೀಯ ಪ್ರೇರಿತವೋ, ಇಲ್ಲವೋ ಹೇಳಲಾರೆ ಎಂದಿದ್ದಾರೆ.
ಶಾಂತಿನಗರದ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಇಂದು ಶಿಕ್ಷಕರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ವಕೀಲರ ಸಂಘದ ಅಧ್ಯಕ್ಷ ಎ.ಪಿ. ರಂಗನಾಥ್ ನಾಮಪತ್ರ ಸಲ್ಲಿಸಿದ ನಂತರ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಯಾವುದೇ ಜನಪ್ರತಿನಿಧಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ರೆ, ದಾಳಿಗೆ ಹೆದರುವ ಅವಶ್ಯಕತೆ ಇರಲ್ಲ.
ನಾವು ಸರಿಯಾಗಿ ಕೆಲಸ ಮಾಡಿದ್ರೆ ಯಾವುದೇ ರೀತಿಯ ತನಿಖೆಯನ್ನಾದ್ರೂ ಎದುರಿಸಲು ಸಿದ್ಧರಿರಬೇಕು. ದೇಶದ ಕಾನೂನು ವ್ಯವಸ್ಥೆಯಲ್ಲಿ ಸತ್ಯಕ್ಕೆ ಜಯ ಸಿಗಲಿದೆ. ಹಾಗಾಗಿ, ಸತ್ಯ ಹೊರಗೆ ಬರುತ್ತದೆ ಎಂಬುದು ನನ್ನ ಅಭಿಪ್ರಾಯ ಎಂದು ಹೇಳಿದ್ದಾರೆ.
ಸಾಮಾನ್ಯವಾಗಿ ಇಂತಹ ಸಂದರ್ಭದಲ್ಲಿ ಸಿಬಿಐ ದಾಳಿ ನಡೆದ್ರೆ ಅದನ್ನು ರಾಜಕೀಯ ಪಿತೂರಿ ಎಂದೇ ಹೇಳುವುದು ಎಂದರು. ಸಂವಿಧಾನದಲ್ಲಿ ಸ್ವಾಯತ್ತ ಸಂಸ್ಥೆಗಳು ಗೌರವ ಉಳಿಸುತ್ತವೆ ಎಂಬುದು ನನ್ನ ಅಭಿಪ್ರಾಯ. ಆದರೆ, ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರಲ್ಲಿ ಈ ರೀತಿ ಚರ್ಚೆಯಾಗುತ್ತಿದೆ.
ದಾಳಿ ಮಾಡಲು ಕಾರಣ ಏನೆಂಬುದರ ಸತ್ಯವನ್ನು ಸಿಬಿಐ ಹೇಳಬೇಕಾಗುತ್ತದೆ. ಇಲ್ಲ ಪ್ರಕರಣದಲ್ಲಿ ಸಿಲುಕಿರುವ ಕಾಂಗ್ರೆಸ್ ನಾಯಕರು ಇದರ ಬಗ್ಗೆ ಹೇಳಬೇಕು. ಈ ಬಗ್ಗೆ ನಾವು ಚರ್ಚೆ ಮಾಡುವುದು ಉಪಯೋಗವಿಲ್ಲ ಎಂದು ಹೇಳುವ ಮೂಲಕ ಸಿಬಿಐ ದಾಳಿಗೆ ಪರೋಕ್ಷ ಬೆಂಬಲ ನೀಡಿದರು.