ಬೆಂಗಳೂರು: ಮುಂದೆ ಯಾವಾಗಲೂ ಯಾವುದೇ ರಾಷ್ಟ್ರೀಯ ಪಕ್ಷದ ಜತೆಗೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಎಲ್ಲಾ 224 ಕ್ಷೇತ್ರಗಳಲ್ಲೂ ಅಭ್ಯರ್ಥಿ ಹಾಕುತ್ತೇವೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್ ವಿಚಾರ ವಿಕಾಸ ವಿಕೇಂದ್ರೀಕರಣ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು ಬಿಜೆಪಿ ಬಗ್ಗೆ ಮೃದು ಧೋರಣೆ ತಾಳಿಲ್ಲ. ಯಾವುದೇ ಕಾರಣಕ್ಕೂ ನಾನು ಯಾವುದೇ ಪಕ್ಷದ ಜತೆ ಮೃದು ಧೋರಣೆಯಿಂದ ರಾಜಿ ಮಾಡಿಕೊಂಡಿಲ್ಲ ಎಂದು ತಿಳಿಸಿದರು.
ಮೂರು ಕ್ಷೇತ್ರಗಳಲ್ಲಿ ಸ್ಪರ್ಧೆ:
ಸಿಂದಗಿ, ಬಸವಕಲ್ಯಾಣ, ಮಸ್ಕಿ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿರುವ ಹಿನ್ನೆಲೆ, ಈ ಮೂರೂ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಹಾಕುತ್ತೇವೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ. ನಮಗೆ ಹಣದ ಕೊರತೆ ಇರಬಹುದು. ನಾವು ಯಾವುದೇ ಪಕ್ಷದ ಅಡಿಯಾಳಾಗಿ ಹೋಗಲ್ಲ. ಮೂರು ವಿಧಾನಸಭೆ ಉಪಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿ ಹಾಕುವುದಾಗಿ ಘೋಷಿಸಿದರು.
ಸಿದ್ದರಾಮಯ್ಯ ವಿರುದ್ಧ ಕಿಡಿ:
ಸಮ್ಮಿಶ್ರ ಸರ್ಕಾರದಲ್ಲಿ ನಮಗೆ ಸಹಕಾರ ಇರಲಿಲ್ಲ. ಆದರೂ ರೈತರಿಗೆ ಕೊಟ್ಟ ಸಾಲಮನ್ನಾ ಭರವಸೆಯನ್ನು ಈಡೇರಿಸಿದೆವು. ನನ್ನ ಇತಿಮಿತಿಯಲ್ಲಿ ಕೆಲಸ ಮಾಡಿದ್ದೇನೆ. ಕಾಂಗ್ರೆಸ್ ಸಚಿವರ ಇಲಾಖೆಗಳ ಬಗ್ಗೆ ನಾನು ಮಾತಾಡುವ ಹಾಗಿರಲಿಲ್ಲ. ಒಂದು ನಿಗಮ, ಮಂಡಳಿಗೆ ಆಯ್ಕೆ ಮಾಡಲೂ ಕಾಂಗ್ರೆಸ್ ನಾಯಕರನ್ನು ಕೇಳಿ ಮಾಡಬೇಕಾದ ಸ್ಥಿತಿ ಇತ್ತು. ನನ್ನ ಪಕ್ಷ, ನಮ್ಮ ಕಾರ್ಯಕರ್ತರ ಬಗ್ಗೆ ಸಿದ್ದರಾಮಯ್ಯ ಮಾತಾಡುತ್ತಾರೆ. ಸಿದ್ದರಾಮಯ್ಯಗೆ ತಾಕತ್ತು ಇದ್ದರೆ, ಒಂದು ಪಕ್ಷ ಕಟ್ಟಿ ತೋರಿಸಲಿ ಅಂತ ನಾನು ಸವಾಲು ಹಾಕಿದ್ದೇನೆ. ದೇವೇಗೌಡರು ಪ್ರಧಾನಿಯಾಗಲು ಯಾರ ಕೈಕಾಲೂ ಹಿಡಿಯಲಿಲ್ಲ. ಯಾರೂ ಗತಿ ಇಲ್ಲದೇ ದೇವೇಗೌಡರನ್ನು ಪ್ರಧಾನಿ ಮಾಡಿದರು. ನಾವು ಕಾಂಗ್ರೆಸ್ನವರಿಗೆ ಪ್ರಧಾನಿ ಮಾಡಿ ಅಂತ ಹೇಳಿದ್ವಾ? ಎಂದು ವಾಗ್ದಾಳಿ ನಡೆಸಿದರು.
ಉಪ ಸಮರದಲ್ಲಿ ಜೆಡಿಎಸ್ ಅಭ್ಯರ್ಥಿ ಹಾಕಲ್ಲ ಅಂದರೆ ಸಿದ್ದರಾಮಯ್ಯರಿಗೆ ಯಾಕೆ ಬೇಸರ..? ನಮ್ಮದು ಪಕ್ಷವೇ ಅಲ್ಲ ಅನ್ನೋರು ನಾವು ಅಭ್ಯರ್ಥಿ ಹಾಕಲ್ಲ ಅಂದರೆ ನಿಮಗೆ ಯಾಕೆ ತಲೆಬಿಸಿ..?. ಉಪಮುಖ್ಯಮಂತ್ರಿ ಆಗಿದ್ದಾಗಲೇ ದೇವೆಗೌಡರಿಗೆ ಮೋಸ ಮಾಡಿ ಹೋದವರು ಸಿದ್ದರಾಮಯ್ಯ ಎಂದು ಕಿಡಿ ಕಾರಿದರು.
ಅಲ್ಪಸಂಖ್ಯಾತರಿಗೆ ಮುರಾರ್ಜಿ ದೇಸಾಯಿ ಶಾಲೆಗಳನ್ನು ತೆರೆದಿದ್ದು ದೇವೇಗೌಡರು. ದೇವೇಗೌಡರ ಕಾರ್ಯಕ್ರಮವನ್ನು ಸಿದ್ದರಾಮಯ್ಯ ತಮ್ಮ ಕಾರ್ಯಕ್ರಮ ಅಂತ ಹೇಳಿದ್ದಾರೆ. ಮುಸ್ಲಿಮರಿಗೆ ಶೇ 4 ರಷ್ಟು ಮೀಸಲಾತಿ ಕೊಟ್ಟಿದ್ದರೆ ಅದು ಜೆಡಿಎಸ್ ಎಂದು ತಿಳಿಸಿದರು. ವಿಧಾನಸಭೆಯಲ್ಲಿ ಸಿದ್ದರಾಮಯ್ಯನವರು ಯಡಿಯೂರಪ್ಪ ವಿರುದ್ಧದ ಪ್ರಕರಣಗಳ ಬಗ್ಗೆ ಮಾತಾಡಿದರು. ಯಡಿಯೂರಪ್ಪ ಎದ್ದು ನಿಂತು ರೀಡೂ ಪ್ರಕರಣವನ್ನು ಪ್ರಸ್ತಾಪ ಮಾಡಿದರು. ರೀಡೂ ಪ್ರಕರಣ ಅಂದ ಕೂಡಲೇ ಬಾಯಿ ಮುಚ್ಕೊಂಡು ಸುಮ್ನೆ ಕೂತ್ಕೊಂಡ್ರು ಎಂದು ತಿರುಗೇಟು ನೀಡಿದರು.
ದೇವೇಗೌಡರನ್ನು ಮಕ್ಕಳು ಮೂಲೆಗೆ ಕೂರಿಸಿದ್ದಾರೆ ಅಂತ ಮಾತಾಡ್ತಾರೆ ಕೆಲವರು. ನಮ್ಮ ಕುಟುಂಬದಲ್ಲಿ ಆ ಸಂಸ್ಕೃತಿ ಇಲ್ಲ. ಹಿರಿಯರಿಗೆ ಗೌರವ ಕೊಡೋದನ್ನು ನಮಗೆ ನಮ್ಮ ತಂದೆ ತಾಯಿ ಕಲಿಸಿದ್ದಾರೆ. ತಂದೆ ತಾಯಿ ನಮಗೆ ದೇವರಿಗೆ ಸಮಾನ, ನಮ್ಮ ಕುಟುಂಬದಲ್ಲಿ ಒಡಕಿಲ್ಲ. ನಮ್ಮ ಕುಟುಂಬದಲ್ಲಿ ಒಡಕು ತರಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ:
ಈಗ ಬಿಜೆಪಿ ಸರ್ಕಾರ ಕಾರ್ಯಕರ್ತರಿಗೆ ರಾಜ್ಯದ ಸಂಪತ್ತು ಲೂಟಿ ಮಾಡಲು ಅವಕಾಶ ಕೊಟ್ಟಿದೆ. ಬಿಜೆಪಿಯಲ್ಲಿ ಮಂತ್ರಿಗಳಾಗಲು ಹೋದವರು ಎಂಥ ಪರಿಸ್ಥಿತಿಯಲ್ಲಿ ಬದುಕ್ತಿದಾರೆ ಅಂತ ಎಲ್ರಿಗೂ ಗೊತ್ತು. ಬಿಡಿಎಯಲ್ಲಿ ತೋಳ ಕುರಿ ಮೇಯಿಸುವ ಕೆಲಸ ನಡೀತಿದೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿಯ ಭ್ರಷ್ಟ ಆಡಳಿತದ ಬಗ್ಗೆ ಮೊದಲು ಹೋರಾಟ ಮಾಡಿದ್ದು ಜೆಡಿಎಸ್. ಎರಡು ಸೂಟ್ಕೇಸ್ಗಳಲ್ಲಿ ದಾಖಲೆಗಳನ್ನು ವಿಧಾನಸೌಧಕ್ಕೆ ಕೊಂಡೊಯ್ದು ಬಿಡುಗಡೆ ಮಾಡಿದ್ವಿ. ವೀರಶೈವ ಸಮುದಾಯಕ್ಕೆ ನಾನು ಈ ವೇದಿಕೆಯಲ್ಲಿ ತಿಳಿಸೋಕೆ ಬಯಸ್ತೇನೆ. ಯಡಿಯೂರಪ್ಪನವ್ರಿಗೂ ನನಗೂ ವೈಯಕ್ತಿಕ ದ್ವೇಷ ಇಲ್ಲ. ಆದರೆ ಯಡಿಯೂರಪ್ಪರ ಹಿಂದಿನ ಸರ್ಕಾರದಲ್ಲಿ ಲೂಟಿ ನಡೀತಿತ್ತು. ರಾಜ್ಯದ ಸಂಪತ್ತು ಲೂಟಿ ಹೊಡೆಯುತ್ತಿದ್ದಾಗ ನಾನು ದನಿ ಎತ್ತಿದೆ. ಆವತ್ತು ಇದೇ ದಾಖಲೆ ಬಿಡುಗಡೆ ಮಾಡಿದ್ದು ಎಂದು ತಿಳಿಸಿದರು.
ಇನ್ನೆಷ್ಟು ಮೀಸಲಾತಿ ಹೋರಾಟ ಶುರುವಾಗುತ್ತೋ?:
ಮೀಸಲಾತಿ ಹೋರಾಟಗಳು ರಾಜ್ಯದಲ್ಲಿ ನಡೀತಿವೆ. ಇನ್ನೆಷ್ಟು ಮೀಸಲಾತಿ ಹೋರಾಟಗಳು ಶುರುವಾಗುತ್ವೋ ಗೊತ್ತಿಲ್ಲ ಎಂದು ಇದೇ ವೇಳೆ ತಿಳಿಸಿದರು. ಸವಿತಾ ಸಮಾಜದವರು ಹೋರಾಟ ಶುರು ಮಾಡುತ್ತಾರೆ. ಉಪ್ಪಾರ ಸಮಾಜದವರು ಹೋರಾಟ ಶುರು ಮಾಡುತ್ತಾರೆ. ಮುಸ್ಲಿಮರಿಗೆ, ಒಕ್ಕಲಿಗರಿಗೆ ಮೀಸಲಾತಿ ಕೊಟ್ಟಿದ್ದು ದೇವೇಗೌಡರು. ವೀರಶೈವರಿಗೆ ಮೀಸಲಾತಿ ಇರೋದು ಶೇ 5. ಸುಪ್ರೀಂಕೋರ್ಟ್ ಹೇಳಿದೆ ಮೀಸಲಾತಿ ಶೇ 50 ಮೀರಬಾರದು ಅಂತ. ರಾಜ್ಯದಲ್ಲಿ ಈಗಾಗಲೇ ಶೇ 50 ರಷ್ಟು ಮೀಸಲಾತಿ ಇದೆ. ಯಾವ್ಯಾವ ಹೋರಾಟಗಳು ಎಲ್ಲೆಲ್ಲಿ ಹೋಗಿ ತಲುಪುತ್ವೋ ಸುಮ್ನೆ ನೋಡ್ತಿದೀವಿ ನಾವು ಎಂದರು.
ಈ ರಾಜ್ಯದಲ್ಲಿ ಸಮಾಜ ಸಮಾಜಗಳ ನಡುವೆ ಸಂಘರ್ಷ ತಂದಿಡ್ತಿದಾರೆ, ಮುಂದೆ ಎಲ್ಲಿ ಹೋಗ್ತಾರೆ ಇವರು. ಬಡವರಿಗಾಗಿ ಅಂಬೇಡ್ಕರ್ ಮೀಸಲಾತಿ ಕೊಟ್ಟರು. ಉಳ್ಳವರಿಗೇ ಮೀಸಲಾತಿ ಕೊಟ್ರೆ ಬಡವರಿಗೆ ಯಾರು ಕೊಡ್ತಾರೆ? ಐದೈದು ಸಲ ಆರಾರು ಸಲ ಮೀಸಲಾತಿಯಡಿ ಗೆದ್ದು ಬರ್ತೀರಲ್ಲ? ಯುವಕರು ಎಲ್ಲಿ ಹೋಗಬೇಕು? ಪ್ರತೀ ಕುಟುಂಬಕ್ಕೆ ಮೀಸಲಾತಿ ಕೊಟ್ರೆ ಅದು ಅಂಬೇಡ್ಕರ್ರಿಗೆ ಮಾಡುವ ಅಗೌರವ ಎಂದು ವಿವರಿಸಿದರು.