ಬೆಂಗಳೂರು: ಒಂದೆಡೆ ಜೆಡಿಎಸ್ನಲ್ಲಿ ಅಸಮಾಧಾನದ ಹೊಗೆಯಾಡುತ್ತಿದ್ದರೂ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ವಿದೇಶ ಪ್ರವಾಸ ಕೈಗೊಂಡಿದ್ದಾರೆ.
ಮಗನ ಸಿನಿಮಾಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಕುಮಾರಸ್ವಾಮಿ ಅವರು ಪತ್ನಿ ಅನಿತಾ ಕುಮಾರಸ್ವಾಮಿ ಹಾಗೂ ಪುತ್ರ ನಿಖಿಲ್ ಜೊತೆ ಇಂದು ಲಂಡನ್ಗೆ ತೆರಳಿದ್ದಾರೆ. ಮತ್ತೊಂದೆಡೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು, ವಿಧಾನ ಪರಿಷತ್ನ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಸೇರಿದಂತೆ ಮತ್ತಿತರ ಸದಸ್ಯರನ್ನು ತಮ್ಮ ಬಳಿ ಕರೆಸಿಕೊಂಡು, ಅಸಮಾಧಾನಕ್ಕೆ ಔಷಧ ಹಚ್ಚಲು ಮುಂದಾಗಿದ್ದಾರೆ.
ನ.6 ರಂದು ಹೆಚ್.ಡಿ. ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಜೊತೆ ಸಭೆ ನಿಗದಿ ಮಾಡಿ ಭುಗಿಲೆದ್ದಿರುವ ಅಸಮಾಧಾನದ ಸಮಸ್ಯೆ ಬಗೆಹರಿಸುವ ಬಗ್ಗೆ ಗೌಡರು ವಾಗ್ದಾನ ನೀಡಿದ್ದರು. ಆದರೆ, ಇದೀಗ ಕುಮಾರಸ್ವಾಮಿ ಅವರು ಲಂಡನ್ಗೆ ತೆರಳಿರುವುದು ವಿಧಾನ ಪರಿಷತ್ ಸದಸ್ಯರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ಕುಟುಂಬ ಸದಸ್ಯರ ಜೊತೆ ಲಂಡನ್ಗೆ ತೆರಳಿರುವ ಕುಮಾರಸ್ವಾಮಿ, ನವೆಂಬರ್ 8 ರಂದು ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. ಹೀಗಾಗಿ, ನ.6 ರಂದು ನಿಗದಿಯಾಗಿದ್ದ ಸಭೆ ರದ್ದಾಗುವ ಸಾಧ್ಯತೆ ಇದೆ ಎನ್ನಲಾಗ್ತಿದೆ.
ಕೆಲ ದಿನಗಳಿಂದ ಪರಿಷತ್ನ ಹಿರಿಯ ನಾಯಕ ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ಸಭೆಗಳನ್ನು ನಡೆಸಿದ ಕೆಲ ಸದಸ್ಯರು, ಕುಮಾರಸ್ವಾಮಿ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಅಧಿಕಾರವಿದ್ದಾಗ ತಮ್ಮನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲವೆಂಬುದು ಕೆಲ ನಾಯಕರ ಆರೋಪವಾಗಿದೆ.