ಬೆಂಗಳೂರು: ಕಾಂಗ್ರೆಸ್ ನಾಯಕರು ಜೆಡಿಎಸ್ ಕಾರ್ಯಕರ್ತರ ಮನೆ ಬಾಗಿಲು ತಟ್ಟುತ್ತಿದ್ದಾರೆ. ಆದರೆ ನಮ್ಮ ಪಕ್ಷದಿಂದ ಎರಡ್ಮೂರು ನಾಯಕರನ್ನು ಆಮಿಷ ಒಡ್ಡಿ ಕರೆದುಕೊಂಡು ಹೋದರೆ ಹೆಚ್ಚು ವ್ಯತ್ಯಾಸವೇನೂ ಆಗಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ನಗರದ ಸುಂಕದಕಟ್ಟೆಯಲ್ಲಿ ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಪರ ಆಯೋಜಿಸಿದ್ದ ಪ್ರಚಾರದ ಸಭೆ ನಂತರ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಯಾರೊಂದಿಗೂ ಒಳ ಒಪ್ಪಂದ ಮಾಡಿಕೊಳ್ಳುವ ಪ್ರಮೇಯವೇ ಇಲ್ಲ. ಒಪ್ಪಂದ ಮಾಡಿಕೊಳ್ಳುವುದಾದರೆ ಓಪನ್ ಆಗಿ ಮಾಡಿಕೊಳ್ಳುತ್ತೇವೆ. ಅದರಲ್ಲಿ ಮುಚ್ಚುಮರೆ ಏನಿಲ್ಲ. ನಾವು ಜನರೊಂದಿಗೆ ಜನಸೇವೆಯ ಒಪ್ಪಂದ ಮಾಡಿಕೊಂಡಿದ್ದೇವೆ ಎಂದು ತಿರುಗೇಟು ನೀಡಿದರು.
ಸತ್ಯವನ್ನು ಮುಚ್ಚಿಟ್ಟು ಸ್ವಾರ್ಥದ ರಾಜಕೀಯ ಮಾಡಲಾಗುತ್ತಿದೆ. ಕುರುಕ್ಷೇತ್ರ ಯುದ್ಧ ನಡೆಯಲು ದುರ್ಯೋಧನ ಕಾರಣ ಅಲ್ಲ. ಭೀಷ್ಮ, ದ್ರೋಣ, ಕರ್ಣರೂ ಕಾರಣ ಅಂತ ಕೃಷ್ಣ ಹೇಳಿದ್ದಾನೆ. ಅವರಂತೆಯೇ ಕೆಲವರು ಸ್ವಾರ್ಥದ ರಾಜಕೀಯ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ನಮ್ಮ ಪಕ್ಷ ಚುನಾವಣಾ ಆಯುಕ್ತರು ಹೇಳಿದ್ದನ್ನು ಪಾಲಿಸಿದೆ. ಜೆಡಿಎಸ್ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿಲ್ಲ. ಜಾತ್ರೆ ಮಾಡಿಕೊಂಡು ಯಾರು ನಾಮಪತ್ರ ಸಲ್ಲಿಸಿದ್ರು ಎನ್ನುವ ವಿಡಿಯೋ ನಮ್ಮಲ್ಲಿದೆ ಎಂದು ಹೇಳಿದರು.