ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಬಿಜೆಪಿಗಿಂತಲೂ ಜೆಡಿಎಸ್ ಬಗ್ಗೆ ಭಯ ಇದೆ. ಕುಮಾರಸ್ವಾಮಿ ಬಗ್ಗೆ ಇನ್ನೂ ಹೆಚ್ಚು ಭಯ ಇದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಶಿರಾ ಕ್ಷೇತ್ರದ ಪಕ್ಷದ ಮುಖಂಡರ ಸಭೆಗೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡಬಾರದು ಅಂದುಕೊಂಡರೂ ಪದೇ ಪದೆ ಅವರೇ ಕೆಣಕುತ್ತಾರೆ. ಅವರಿಗೆ ನಮ್ಮ ಬಗ್ಗೆ ಭಯ ಇದೆ ಎಂದರು.
ಜಾತಿ ಹೆಸರೇಳಿ ಮತ ಕೇಳುವವರು ನಾವಲ್ಲ. ಕಾಂಗ್ರೆಸ್ನವರಿಗೆ ನಾಚಿಕೆ ಆಗಬೇಕು. ನಿನ್ನೆ ಶಿರಾದಲ್ಲಿ ಒಬಿಸಿ ಸಭೆ ನಡೆಸಿದ್ದು ಯಾರು? ಜಾತಿ ರಾಜಕೀಯ ಮಾಡುತ್ತಿರುವವರು ಯಾರು? ಎಂದು ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ನಮ ಪಕ್ಷ ಒಳ ಒಪ್ಪಂದ ಮಾಡಿಕೊಳ್ಳುವಂತದ್ದೇನಿಲ್ಲ. ನಮಗೆ ಅಂತಹ ದರ್ದು ಇಲ್ಲ. ಅವರ ಅಭ್ಯರ್ಥಿ ಗೆಲ್ಲಿಸೋಕೆ ನಾನು ಅಭ್ಯರ್ಥಿ ಹಾಕದೇ ಬೆಂಬಲ ಕೊಡಬೇಕಾ? ಕಾಂಗ್ರೆಸ್ ಮತ್ತು ಬಿಜೆಪಿ ಪರ್ಸೆಂಟೇಜ್ ಸರ್ಕಾರಗಳು ಅಂತಾ ಪರಸ್ಪರ ಆರೋಪ ಮಾಡಿಕೊಂಡರು. ಆದರೆ ನಮ್ಮ ಸರ್ಕಾರದ ಬಗ್ಗೆ ಯಾರೂ ಇಂತಹ ಆರೋಪಗಳನ್ನು ಮಾಡಲಿಲ್ಲ ಎಂದು ಕುಟುಕಿದರು.
ನಾನು ಪೆದ್ದನೇ: ಕುಮಾರಸ್ವಾಮಿ ಪೆದ್ದ ಅಂತಾ ಆರೋಪ ಮಾಡುತ್ತಿದ್ದಾರೆ. ಹೌದು ನಾನು ಪೆದ್ದನೇ, ಜನರ ಒಳಿತಿಗಾಗಿ ಹೃದಯದಿಂದ ತೀರ್ಮಾನ ಮಾಡುವವನು ನಾನು. ಈ ಚುನಾವಣೆ ಗೆದ್ದ ತಕ್ಷಣ ನಾವೇನೂ ಅಧಿಕಾರ ಹಿಡಿಯಲ್ಲ ಎಂದು ಮಾರ್ಮಿಕವಾಗಿ ನುಡಿದರು.
ಮುನಿರತ್ನ ಅವರಿಗೆ ಬಿಜೆಪಿಯಲ್ಲಿ ಟಿಕೆಟ್ ಸಿಗದೇ ಇದ್ದರೆ ಜೆಡಿಎಸ್ ಟಿಕೆಟ್ ಕೊಡುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಹೆಚ್ಡಿಕೆ, ಈಗಾಗಲೇ ನಮ್ಮ ಪಕ್ಷದಿಂದ ಮೂವರ ಹೆಸರನ್ನು ಅಂತಿಮ ಮಾಡಲಾಗಿದೆ. ಬೇರೆ ಯಾರೂ ನಮ್ಮ ಬಳಿ ಅರ್ಜಿ ಹಾಕಿಕೊಂಡಿಲ್ಲ. ಬೇರೆ ಯಾರಿಗೂ ಟಿಕೆಟ್ ಕೊಡುವ ಬಗ್ಗೆ ಚಿಂತನೆ ನಡೆಸಿಲ್ಲ ಎಂದು ಹೇಳಿದರು. ಶಿರಾ ಕ್ಷೇತ್ರದ ಅಭ್ಯರ್ಥಿ ಯನ್ನು ಈಗಾಗಲೇ ದೇವೇಗೌಡರು ಘೋಷಣೆ ಮಾಡಿದ್ದಾರೆ. ಆರ್ಆರ್ ನಗರದ ಅಭ್ಯರ್ಥಿ ಘೋಷಣೆ ಸಂಜೆ ಅಥವಾ ನಾಳೆ ವೇಳೆಗೆ ಮಾಡುತ್ತೇವೆ ಎಂದರು.
ಹನುಮಂತರಾಯಪ್ಪ, ರಾಜೇಶ್ ಗೌಡ ಜೆಡಿಎಸ್ ನವರಲ್ಲ : ಕಾಂಗ್ರೆಸ್ ಘೋಷಣೆ ಮಾಡಿರುವ ಅಭ್ಯರ್ಥಿಯ ತಂದೆ ಹನುಮಂತರಾಯಪ್ಪ ಜೆಡಿಎಸ್ ನವರಲ್ಲ. ಹಿಂದೆ ಅವರಿಗೆ ಜೆಡಿಎಸ್ ನಿಂದ ಟಿಕೆಟ್ ಕೊಟ್ಟಿದ್ದು ನಿಜ. ನಂತರ ಅವರೇ ಬಂದು ಶಿವಕುಮಾರ್ ಜೊತೆ ಹೋಗುತ್ತೇನೆಂದು ಹೇಳಿದರು. ಒಳ್ಳೆಯದಾಗಲಿ ಎಂದು ಹೇಳಿದೆ. ಇನ್ನು ಕಳೆದ ಬಾರಿ ಬಿಜೆಪಿ ಮುಖಂಡ ರಾಮಚಂದ್ರ ಅವರನ್ನು ಕರೆಸಿ ಟಿಕೆಟ್ ಕೊಟ್ಟಿದ್ದೆವು. ಆಗಲೂ ಅರವತ್ತು ಸಾವಿರ ಮತ ಪಡೆದುಕೊಂಡಿದ್ದೆವು. ಅವರೂ ಸಹ ನಮ್ಮ ಪಕ್ಷದವರಲ್ಲ ಎಂದು ಹೇಳಿದರು.
ರಾಜೇಶ್ ಗೌಡ ನಮ್ಮ ಪಕ್ಷದ ಕಾರ್ಯಕರ್ತ ಅಲ್ಲ. ಅವರ ತಂದೆ ಕಾಂಗ್ರೆಸ್ ನಿಂದ ಎರಡು ಬಾರಿ ಸಂಸದರಾಗಿದ್ದವರು. ಕಳೆದ ಚುನಾವಣೆಯಲ್ಲಿ ಟಿ.ಬಿ.ಜಯಚಂದ್ರ ಮೇಲೆ ಅಸಮಾಧಾನದಿಂದ ನಮ್ಮ ಪಕ್ಷಕ್ಕೆ ಬೆಂಬಲ ಕೊಟ್ಟಿರಬಹುದು. ಈಗಲೂ ಅವರು ಕಾಂಗ್ರೆಸ್ ಪಕ್ಷದವರೇ ಎಂದರು.