ಬೆಂಗಳೂರು: ನಾವೇನೇ ಪಾದಯಾತ್ರೆ ಮಾಡಿದ್ರೂ, ಹೊರಗೆ ಜಾತ್ರೆ ಮಾಡಿದ್ರೂ ಕಾನೂನಾತ್ಮಕವಾಗಿಯೇ ಫೈಟ್ ಮಾಡಬೇಕು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಮೇಕೆದಾಟು ಪಾದಯಾತ್ರೆಗೆ ಪರೋಕ್ಷ ವಾಗ್ದಾಳಿ ನಡೆಸಿದರು.
ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, ತಮಿಳುನಾಡು ನೀರಿನ ವಿಚಾರದಲ್ಲಿ ನಮ್ಮ ಮೇಲೆ ಗದಾಪ್ರಹಾರ ಮಾಡುತ್ತಿದೆ. ತಮಿಳುನಾಡು ಉದ್ಧಟತನ ತೋರುತ್ತಿದೆ. ನಾವು ಇಷ್ಟು ಕಾಲ ತಾಳ್ಮೆಯಿಂದ ಇದ್ದೇವೆ. ನಾವು ತಮಿಳುನಾಡಿನ ಹಸ್ತಕ್ಷೇಪ ಗಂಭೀರವಾಗಿ ತಗೆದುಕೊಳ್ಳಬೇಕು. ಬಜೆಟ್ನಲ್ಲಿ ಎತ್ತಿನಹೊಳೆಗೆ 3 ಸಾವಿರ ಕೋಟಿ ಅನುದಾನ ಇಡಲಾಗಿದೆ. 2011-12 ರಲ್ಲಿ ಬೊಮ್ಮಾಯಿ ನೀರಾವರಿ ಮಂತ್ರಿ ಆಗಿದ್ದಾಗ ಎತ್ತಿನಹೊಳೆ ಯೋಜನೆ ತರೋ ನಿರ್ಧಾರ ಮಾಡಿದ್ದರು. 24 ಟಿಎಂಸಿ ನೀರು ಕೋಲಾರ, ಚಿಕ್ಕಬಳ್ಳಾಪುರಕ್ಕೆ ಹರಿಸುವ ಯೋಜನೆ ಅದಾಗಿದೆ. 8,323 ಕೋಟಿ ಆಗ ಹಣ ನಿಗದಿ ಮಾಡಲಾಗಿತ್ತು. 2014 ಕ್ಕೆ12,912 ಕೋಟಿಗೆ ವೆಚ್ಚ ಏರಿತು. ಆಗ ಸಂಸತ್ ಚುನಾವಣೆಗೆ ಒಂದೇ ವರ್ಷದಲ್ಲಿ ನೀರು ತರುತ್ತೇವೆ ಎಂದು ಕಾಂಗ್ರೆಸ್ ಘೋಷಣೆ ಮಾಡಿತ್ತು ಎಂದು ಟಾಂಗ್ ನೀಡಿದರು.
ಕಾಮಗ್ರೆಸ್ ನಡೆ ಆಂಧ್ರದ ಕಡೆಗೆ:
ಕಾಂಗ್ರೆಸ್ ನಡಿಗೆ ಕೃಷ್ಣೆ ಕಡೆಗೆ ಅಲ್ಲ, ಕಾಂಗ್ರೆಸ್ ನಡಿಗೆ ಆಂಧ್ರದ ಕಡೆಗೆ ಅಂತ ನಾನು ಆವತ್ತೇ ಹೇಳಿದ್ದೆ. ಎತ್ತಿನಹೊಳೆಗೆ ಇಟ್ಟಿರುವ 3 ಸಾವಿರ ಕೋಟಿ ಸದ್ಬಳಕೆ ಆಗಲಿ. ಜನತೆಗೆ ಉಪಯೋಗ ಆಗಬೇಕು. 2012-13 ರಲ್ಲಿ ಎತ್ತಿನ ಹೊಳೆ ಕಾಮಗಾರಿ ಆರಂಭವಾಗಿತ್ತು. ಈಗ ಅದರ ಪರಿಸ್ಥಿತಿ ಏನಾಗಿದೆ ನೋಡಬೇಕು. ಎತ್ತಿನಹೊಳೆಗೆ ಈಗ 25 ಸಾವಿರ ಕೋಟಿ ಹಣ ಬೇಕಾಗಿದೆ. 5.78 ಟಿಎಂಸಿ ನೀರು ಬೈರಮಂಗಲದಲ್ಲಿ ಶೇಖರಣೆ ಮಾಡಬೇಕಿತ್ತು. ಆದ್ದರೆ ಭೂಸ್ವಾಧೀನ ವೆಚ್ಚ ಜಾಸ್ತಿ ಆಗುತ್ತೆ ಅಂತ 2 ಟಿಎಂಸಿ ನೀರು ಸಂಗ್ರಹ ಆದ್ರೆ ಸಾಕು ಅಂತಿದ್ದಾರೆ. ಇದರ ಬಗ್ಗೆ ಏನು ಮಾಡಬೇಕೆಂಬ ಬಗ್ಗೆ ಸ್ಪಷ್ಟತೆ ಇಲ್ಲ. 2014 ರಲ್ಲಿ ಒಂದೇ ವರ್ಷದಲ್ಲಿ ಎತ್ತಿನಹೊಳೆ ನೀರು ಕೊಡೋದಾಗಿ ಕಾಂಗ್ರೆಸ್ ಹೇಳಿತ್ತು. ಇವರು ಒಂದುವರ್ಷದಲ್ಲಿ ನೀರು ತಂದ್ರೆ ನಾನು ತಲೆಗೂದಲು ತೆಗೆಸಿಕೊಳ್ತೇನೆ ಅಂತ ಹೇಳಿದ್ದೆ. ಆಗ ನನ್ನ ತಲೆಯಲ್ಲಿ ಸ್ವಲ್ಪ ಕೂದಲು ಸಹ ಇತ್ತು. ಆಗ ಅವರು ಅವನ ತಲೇಲಿ ಕೂದಲೇ ಇಲ್ಲ. ಅವನೆಲ್ಲಿ ತಲೆ ಬೋಳಿಸ್ಕೋತಾನೆ ಅಂತ ಕಾಲೆಳೆದ್ರು. ನನಗೆ ಅದೆಲ್ಲ ಇನ್ನೂ ನೆನಪಿದೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಹೆಚ್‌ಡಿಕೆ ವಾಗ್ದಾಳಿ ನಡೆಸಿದರು.
26 ಅಣೆಕಟ್ಟನ್ನು ನಾವೇ ಕಟ್ಟಿದ್ದೇವೆ ಅಂತಾರೆ. ಏನು ಅಣೆಕಟ್ಟು ಕಟ್ಟಿದ್ದೀರಿ ಎಂದು ಕಾಂಗ್ರೆಸ್ಗೆ ಟಾಂಗ್ ನೀಡಿದ ಕುಮಾರಸ್ವಾಮಿ, ಯಾರೋ ಮಾಡಿದ್ದಕ್ಕೆ ನೀವು ಸರ್ಟಿಫಿಕೇಟ್ ತಗೋತೀರಾ?. ಆಲಮಟ್ಟಿ ಜಲಾಶಯ ಪೂರ್ಣ ಆಗೋದಕ್ಕೆ ಜನತಾ ಸರ್ಕಾರ ಬರಬೇಕಾಯಿತು. ಆಲಮಟ್ಟಿ ಅಣೆಕಟ್ಟನ್ನು ನೀವು ಪ್ರಾರಂಭಿಸಿದ್ದೀರಿ. ಪೂರ್ಣ ಮಾಡಿರಲಿಲ್ಲ. ನೀವು ನಿದ್ದೆ ಹೊಡಿತಾ ಇದ್ದೀರಿ. ದೇವೇಗೌಡರು ನೀರಾವರಿ ಬಗ್ಗೆ ಏನು ಮಾಡಿದ್ದಾರೆ ಎಂಬುದು ರೆಕಾರ್ಡ್ನಲ್ಲಿದೆ ಎಂದು ಕಿಡಿಕಾರಿದರು.
ಇದನ್ನೂ ಓದಿ: ಅಧಿಕಾರದಲ್ಲಿದ್ದಾಗ ಏನೂ ಮಾಡದ ಕೆಲವರಿಂದ ಮೇಕೆದಾಟು ಪಾದಯಾತ್ರೆ: ಹೆಚ್‌ಡಿಕೆ