ಬೆಂಗಳೂರು: ಗೋದಾವರಿಯಿಂದ ಕೃಷ್ಣಾ, ಪೆನ್ನಾರ್ ಮತ್ತು ಮತ್ತು ಕಾವೇರಿ ನದಿ ಪಾತ್ರಗಳ ರಾಜ್ಯಗಳಿಗೆ ನೀರು ಹಂಚಿಕೆಯಲ್ಲಿ ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಸೊನ್ನೆ ಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ನಿನ್ನೆ ಮಾಧ್ಯಮಗಳ ಜತೆ ಮಾತನಾಡಿದ ಅವರು, ಇದೇ ತಿಂಗಳ 18ರಂದು ದೆಹಲಿಯಲ್ಲಿ ನಡೆದ ಕೇಂದ್ರ ಜಲ ಆಯೋಗದ ಸಭೆಯಲ್ಲಿ ರಾಜ್ಯದ ಪ್ರತಿನಿಧಿಯೊಬ್ಬರು ಭಾಗವಹಿಸಿದ್ದರು. ಅವರ ಉಪಸ್ಥಿತಿಯಲ್ಲೇ 242 ಟಿಎಂಸಿ ನೀರನ್ನು ತೆಲಂಗಾಣ, ಆಂಧ್ರಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳು ಮಾತ್ರ ಹಂಚಿಕೆ ಮಾಡಿಕೊಂಡಿದ್ದು, ರಾಜ್ಯಕ್ಕೆ ಕನಿಷ್ಠ ಒಂದು ಕ್ಯೂಸೆಕ್ ನೀರನ್ನು ಕೂಡ ಹಂಚಿಕೆ ಮಾಡಿಲ್ಲ. ಮೇಕೆದಾಟು ಪಾದಯಾತ್ರೆಗೆ ಹೊರಟಿರುವ ಕಾಂಗ್ರೆಸ್ ನಾಯಕರಿಗೆ ಹಾಗೂ ಆಡಳಿತಾರೂಢ ಬಿಜೆಪಿ ಸರ್ಕಾರಕ್ಕೆ ಈ ವಿಷಯ ಗೊತ್ತಿಲ್ಲವೇ? ಎಂದು ಪ್ರಶ್ನಿಸಿದರು.
ಮೂರು ದಿನಗಳ ಹಿಂದೆ ಈ ಸಭೆ ನಡೆದಿದೆ. ಆದರೆ ಇಲ್ಲಿ ಮುಖ್ಯಮಂತ್ರಿಗಳು ಮಾತ್ರ ರಾಜ್ಯಗಳ ಸಹಮತ ಪಡೆದು ನೀರು ಹಂಚಿಕೆ ಮಾಡಬೇಕು, ಡಿಪಿಆರ್ ಮಾಡುವ ಮುನ್ನ ನಮ್ಮೊಂದಿಗೆ ಚರ್ಚೆ ನಡೆಸಬೇಕು. ಈಗ ಆಗಿರುವ ತೀರ್ಮಾನಗಳನ್ನು ನಾವು ಒಪ್ಪಲಿಕ್ಕೆ ತಯಾರಿಲ್ಲ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಯಾವ ಡಿಪಿಆರ್ ಕೂಡ ಇಲ್ಲ, ಯಾವ ಚರ್ಚೆಯೂ ಇಲ್ಲ. ಅವರವರೇ ಕೂತು ನೀರು ಹಂಚಿಕೆ ಮಾಡಿಕೊಂಡಿದ್ದಾರೆ. ಸದನದಲ್ಲಿ ಈ ವಿಷಯದ ಚರ್ಚೆಗೆ ಅವಕಾಶ ಕೊಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಮಿಳುನಾಡಿಗೆ 92 ಟಿಎಂಸಿ, ಆಂಧ್ರಪ್ರದೇಶಕ್ಕೆ 90 ಟಿಎಂಸಿ, ತೆಲಂಗಾಣಕ್ಕೆ 60 ಹಂಚಿಕೊಂಡಿದ್ದಾರೆ. ರಾಜ್ಯಕ್ಕೆ ಇಂತಹ ಘೋರ ಅನ್ಯಾಯವಾಗಿದ್ರೆ, ಕಾಂಗ್ರೆಸ್ ನಾಯಕರು ಮೇಕೆದಾಟು ಉಳಿಸ್ತೀವಿ ಎಂದು ಪಾದಯಾತ್ರೆಗೆ ಹೊರಟಿದ್ದಾರೆ. ಇವರಿಗೆ ನಾಚಿಕೆಯಾಗಬೇಕು. ಇದೆಲ್ಲವೂ ಕಲಾಪದಲ್ಲಿ ಚರ್ಚೆ ಆಗಬೇಕಿತ್ತು. ಎಲ್ಲಿ ನಾವು ಸರ್ಕಾರದ ಮೇಲೆ ಮುಗಿಬೀಳುತ್ತೇವೋ ಎನ್ನುವ ಕಾರಣಕ್ಕೆ ಕಲಾಪ ನಡೆಯದಂತೆ ನೋಡಿಕೊಂಡರು. ಆ ಸಭೆಯಲ್ಲಿ ಭಾಗವಹಿಸಿದ್ದ ರಾಜ್ಯದ ಅಧಿಕಾರಿಯೊಬ್ಬರು ಆಕ್ಷೇಪ ಎತ್ತಿದಾಗ ಉಳಿದವರು, ನಿಮಗೆ ಎರಡನೇ ಹಂತದಲ್ಲಿ ಕೊಡುತ್ತೇವೆ ಎಂದು ಬಾಯಿ ಮುಚ್ಚಿಸಿದ್ದಾರೆ. ಕೇಂದ್ರ ಸರ್ಕಾರಕ್ಕೆ ಕನ್ನಡಿಗರೇನು ಮಲತಾಯಿ ಮಕ್ಕಳಾ?, ನಾವೇನೂ ಇವರ ಬಳಿ ಭಿಕ್ಷೆ ಬೇಡುತ್ತಿದ್ದೇವೆಯೇ? ಎಂದು ಪ್ರಶ್ನಿಸಿದರು.
'ನಮ್ಮ ನೀರು ನಮ್ಮ ಹಕ್ಕು' ಎಲ್ಲಿ ಹೋಯಿತು ಇವರ ಹೋರಾಟ. ಅಹೋರಾತ್ರಿ ಧರಣಿ ಬೇರೆ ಕೇಡು ಇವರಿಗೆ. ಮೊದಲು ವಿರೋಧ ಪಕ್ಷ ನಾಯಕರು ಹೋಗಿ ನದಿ ಜೋಡಣೆ ಯೋಜನೆಯಲ್ಲಿ ಆಗುತ್ತಿರುವ ನೀರು ಹಂಚಿಕೆ ಬಗ್ಗೆ ತಿಳಿದುಕೊಳ್ಳಲಿ ಎಂದು ಕಾಂಗ್ರೆಸ್ ನಾಯಕರಿಗೆ ಮಾಜಿ ಸಿಎಂ ಟಾಂಗ್ ನೀಡಿದರು.