ಬೆಂಗಳೂರು: ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ನನ್ನ ಪಕ್ಷದ ಕೆಲ ಮುಖಂಡರನ್ನು ಸೆಳೆಯಲು ಪ್ರಯತ್ನ ನಡೆಯುತ್ತಿದೆ. ಜೆಡಿಎಸ್ ಮುಖಂಡರನ್ನು ಸೆಳೆಯುವುದಕ್ಕೆ ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಡಿ.ಕೆ.ಶಿವಕುಮಾರ್ ವಿರುದ್ಧ ತಿರುಗೇಟು ನೀಡಿದ್ದಾರೆ.
ಜೆಪಿ ನಗರದಲ್ಲಿ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಸ್ಥಳೀಯ ರಾಜಕೀಯ ಮುಖಂಡರನ್ನು ಸೆಳೆಯುವುದು ಸಾಮಾನ್ಯವಾಗಿದ್ದು, ಕಾಂಗ್ರೆಸ್ ನಾಯಕರಿಂದ ಹೊಸ ನಾಟಕ ಶುರುವಾಗಿದೆ. ಇದು ಕೂಡ ಜನರ ಹೃದಯವನ್ನು ಗೆಲ್ಲುವುದಿಲ್ಲ. ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾದ ಕೂಡಲೇ ಸಮಾಜದ ಮುಖಂಡರನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಇದರಲ್ಲಿ ಯಶಸ್ವಿಯಾಗುವುದಿಲ್ಲ ಎಂದರು.
ಜೆಡಿಎಸ್ ನಾಯಕರ ಮನೆಗೆ ಕಾಂಗ್ರೆಸ್ ನಾಯಕರು ಭೇಟಿ ನೀಡಿ ಜೆಡಿಎಸ್ ಅನ್ನು ಮುಗಿಸುವುದಾಗಿ ಹೇಳಿದ್ದಾರೆ. ಸಿದ್ದರಾಮಯ್ಯನವರು ಜೆಡಿಎಸ್ ಪಕ್ಷವನ್ನು ಸಮಾಧಿ ಮಾಡಿದ್ದಾಗಿದೆ. ಈಗ ಡಿ.ಕೆ ಶಿವಕುಮಾರ್ ಅವರು, ಅವರಿಗೆ (ಸಿದ್ದರಾಮಯ್ಯ) ಕೈ ಜೋಡಿಸ್ತಿದ್ದಾರೆ ಎಂದು ವ್ಯಂಗ್ಯವಾಡಿದ ಹೆಚ್ಡಿಕೆ, ಈ ಹಿಂದೆ ರಾಜ್ಯಸಭೆ ಚುನಾವಣೆ ಸಂದರ್ಭದಲ್ಲೂ ಏಳು ಶಾಸಕರನ್ನು ನಮ್ಮ ಪಕ್ಷದಿಂದ ಸೆಳೆದಿದ್ದರು. ಆದರೂ ಜೆಡಿಎಸ್ ಕಾರ್ಯಕರ್ತರು ಮತ್ತು ಮುಖಂಡರಿಂದ ಉಳಿದುಕೊಂಡಿದೆ ಎಂದರು.
ಪಕ್ಷದ ಕೆಲವು ಮುಖಂಡರು ಪಕ್ಷಾಂತರವಾದರೂ ಕಾರ್ಯಕರ್ತರು ಪಕ್ಷದಲ್ಲೇ ಇರುತ್ತಾರೆ. ರಾಜಕಾರಣದಲ್ಲಿ ಬೇಜಾರು, ಕೋಪ ಮಾಡಿಕೊಂಡರೆ ಕೇಳುವವರು ಇರುವುದಿಲ್ಲ ಎಂದು ಪರೋಕ್ಷವಾಗಿ ಟೀಕಿಸಿದರು. ಈ ಹಿಂದೆ ಅವರು ಯಾರಿಗೆ ರಕ್ಷಣೆ ಕೊಟ್ಟಿದ್ದಾರೆ. ಜನರ ಕಷ್ಟಸುಖಕ್ಕೆ ಎಷ್ಟರಮಟ್ಟಿಗೆ ಸ್ಪಂದಿಸಿದ್ದಾರೆ. ಕಿಂದರ ಜೋಗಿಯ ಹಿಂದೆ ಹೋದಂತೆ ಹೋಗಲು ಯಾವ ಕಾಣಿಕೆ ಇದೆ ಎಂದು ಡಿಕೆಶಿ ಹೆಸರನ್ನು ಪ್ರಸ್ತಾಪಿಸದೆ ಹೆಚ್ಡಿಕೆ ಪ್ರಶ್ನಿಸಿದರು.
ರಾಜರಾಜೇಶ್ವರಿನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೇಲೆ ಎಫ್‍ಐಆರ್ ದಾಖಲಿಸಿರುವ ಬಗ್ಗೆ ರಾಜಕಾರಣ ಬೆರೆಸುವ ಅಗತ್ಯವಿಲ್ಲ. ನಮ್ಮ ಪಕ್ಷದ ಅಭ್ಯರ್ಥಿ ನಾಮಪತ್ರ ಸಲ್ಲಿಸುವಾಗ ಮೂರು ಮಂದಿ ಮಾತ್ರ ಹೋಗಿದ್ದೆವು. ವಿಧಾನಪರಿಷತ್ ಸದಸ್ಯ ಅಪ್ಪಾಜಿಗೌಡ, ಮಾಜಿ ಸದಸ್ಯ ಟಿ.ಎ.ಶರವಣ ಇದ್ದರೂ ಬರುವುದು ಬೇಡ ಎಂದು ಹೇಳಿದ್ದೆ.
ಕಾಂಗ್ರೆಸ್ ನಾಯಕರೇ ಜೆಡಿಎಸ್‍ನೊಂದಿಗೆ ಮೈತ್ರಿಯ ಅಗತ್ಯವಿಲ್ಲ ಎಂದು ಹೇಳಿದ ಮೇಲೆ ಆ ಬಗ್ಗೆ ನಾವೇಕೆ ಚರ್ಚೆ ಮಾಡಬೇಕು. ಕಾಂಗ್ರೆಸ್‍ನವರು ವ್ಯಕ್ತಿಯನ್ನು ಸೋಲಿಸಲು ಬಯಸಿದರೆ ಅದೇ ನಕಾರಾತ್ಮಕವಾಗಲಿದೆ. ನಾವು ನಮ್ಮ ಪಕ್ಷದ ಸಾಧನೆ, ಕಾರ್ಯಕ್ರಮಗಳ ಆಧಾರದ ಮೇಲೆ ಚುನಾವಣೆ ಎದುರಿಸುತ್ತೇವೆ. ವ್ಯಕ್ತಿಯನ್ನು ಸೋಲಿಸುವುದು ಕಾಂಗ್ರೆಸ್ ನವರ ಗುರಿಯಾಗಿದ್ದರೆ, ನಮ್ಮದು ರಾಜ್ಯ ಸರಿಯಾಗಬೇಕೆಂಬ ಗುರಿಯಿದೆ ಎಂದರು.