ಬೆಂಗಳೂರು: ಜೆಡಿಎಸ್ನಲ್ಲಿ ಬೆಳೆದು, ಜೆಡಿಎಸ್ ಅನ್ನೇ ಮುಗಿಸಲು ಹೊರಟಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಂದಲೇ ರಾಜ್ಯ ಕಾಂಗ್ರೆಸ್ ಅವಸಾನ ಆಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಶಾಂತಿನಗರದ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಇಂದು ಶಿಕ್ಷಕರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ವಕೀಲರ ಸಂಘದ ಅಧ್ಯಕ್ಷ ಎ.ಪಿ. ರಂಗನಾಥ್ ನಾಮಪತ್ರ ಸಲ್ಲಿಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡಬೇಡಿ. ನಾವು ಯಾರ ಹಂಗಿನಲ್ಲೂ ಇಲ್ಲ. ನಿಮ್ಮಂಥ ರಾಷ್ಟ್ರೀಯ ಪಕ್ಷಗಳು ನಮ್ಮನ್ನು ದುರುಪಯೋಗ ಮಾಡಿಕೊಳ್ಳುತ್ತಿವೆ. ಜೆಡಿಎಸ್ ಪಕ್ಷವನ್ನು ಮುಗಿಸಲು ಎಂದಿಗೂ ಸಾಧ್ಯವಿಲ್ಲ ಎಂದು ಹೆಚ್ಡಿಕೆ ಟಾಂಗ್ ನೀಡಿದರು.
ಸಿದ್ದರಾಮಯ್ಯ ಅವರು ಮೊದಲು ಚಿಲ್ಲರೆ ರಾಜಕಾರಣ ಮಾಡುವುದನ್ನು ನಿಲ್ಲಿಸಲಿ. ಅವರ ಇತಿಹಾಸ ತೆಗೆದರೆ ಅವರ ಸಂಸ್ಕೃತಿ ಏನೆಂಬುದು ಗೊತ್ತಾಗಲಿದೆ. ಅವರು ಯಾವ ಪಕ್ಷದಿಂದ ಬೆಳೆದರೋ, ಈಗ ಆ ಪಕ್ಷದ ಸರ್ವನಾಶದ ಬಗ್ಗೆ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರಿಂದಲೇ ಕಾಂಗ್ರೆಸ್ ಸರ್ವನಾಶವಾಗಲಿದೆ ಎಂದು ಮಾಜಿ ಸಿಎಂ ಭವಿಷ್ಯ ನುಡಿದರು.
ದೇಶದಲ್ಲಿ ಅಧಿಕಾರಕ್ಕೆ ಬರಲು ಯಾವ ಯಾವ ಪಕ್ಷಗಳ ಬೆಂಬಲ ಪಡೆದಿದ್ದೀರಿ?. ಈ ಬಗ್ಗೆ ಅನೇಕ ಉದಾಹರಣೆ ಕೊಡಬಹುದು. ಕರ್ನಾಟಕದಲ್ಲಿ ನಾನು ಯಾವತ್ತೂ ಯಾವುದೇ ಪಕ್ಷಕ್ಕೆ ಹೆಗಲು ಕೊಡಲು ಹೋಗಿಲ್ಲ. ಕಳೆದ ಚುನಾವಣೆಯಲ್ಲಿ ಅಡ್ಡಪಲ್ಲಕ್ಕಿ ತಂದವರು ನೀವು (ಕಾಂಗ್ರೆಸ್ ನಾಯಕರು). ಅವತ್ತು ನಿಮ್ಮ ಅಡ್ಡಪಲ್ಲಕ್ಕಿ ಬೇಡ, ನಮ್ಮ ಅಡ್ಡಪಲ್ಲಕ್ಕಿಯನ್ನು ನಾವೇ ಹೊರುತ್ತೇವೆ ಎಂದು ಹೇಳಿದ್ದೆವು. ಕೊನೆಗೆ ನೀವೇ ಕುಳಿತುಕೊಳ್ಳಿ ಅಂತ ಅರ್ಧದಾರಿಯಲ್ಲಿ ಬೀದಿಗೆ ಬೀಳಿಸಿದವರು ಯಾರು?. ನಮ್ಮ ಪಕ್ಷದ ಬಗ್ಗೆ ಹಗುರವಾಗಿ ಮಾತನಾಡಬೇಡಿ ಎಂದು ಹೆಚ್ಡಿಕೆ ಎಚ್ಚರಿಸಿದರು.
ಶಿರಾ ಕ್ಷೇತ್ರದಲ್ಲಿ ನಾನು ಕಣ್ಣೀರು ಸುರಿಸಿಲ್ಲ. ಹಳ್ಳಿ ಭಾಷೆಯಲ್ಲಿ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಹೇಳಿದ್ದೇನೆ. ನಾನು ಮಾಡಿರುವ ಒಳ್ಳೆ ಕೆಲಸಕ್ಕೆ ಹಾಲು ಕೊಡುತ್ತಿರೋ ಅಥವಾ ವಿಷ ಕೊಡುತ್ತಿರೋ ಎಂಬುದನ್ನು ನೀವೇ ನಿರ್ಧಾರ ಮಾಡಿ ಎಂದಿದ್ದೇನೆ ಅಷ್ಟೇ. ಆದರೆ ಇವರು ಅವರ ಅಪ್ಪನ ರೀತಿ ಕಣ್ಣೀರು ಸುರಿಸಿ ನಾಟಕ ಮಾಡಿದರೆ ನಡೆಯೋಲ್ಲ ಎಂದಿದ್ದಾರೆ. ಕಳೆದ ಚುನಾವಣೆಯಲ್ಲಿ ಇದೇ ಸಿದ್ದರಾಮಯ್ಯ ಜೆಡಿಎಸ್ ಅನ್ನು ಬಿ ಟೀಮ್ ಎಂದು ಕರೆದಿದ್ದರು. ಮತ್ತೆ ಅದೇ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜೇಶ್ ಗೌಡ ಬಿಜೆಪಿಗೆ ಹೋಗಲು ಯಾರ ಚಿತಾವಣೆ? ರಾಜೇಶ್ ಗೌಡ ಹಾಗೂ ನಿಮ್ಮ ಪುತ್ರ ಯತೀಂದ್ರನಿಗೂ ಏನು ಸಂಬಂಧ?. ಅವರಿಬ್ಬರೂ ಬಿಸಿನೆಸ್ ಪಾಲುದಾರರಲ್ಲವೇ?. ರಾಜೇಶ್ ಗೌಡ ಬಿಜೆಪಿಗೆ ನಿಮ್ಮ ಚಿತಾವಣೆಯಿಂದ ಹೋಗಿದ್ದಾನೆ. ಬಿಜೆಪಿಯ ಗೆಲುವಿಗೆ ಒಳಸಂಚು ಮಾಡಿರುವುದು ನೀವು ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಕಳೆದ ಚುನಾವಣೆಯಲ್ಲಿ ಬಿಜೆಪಿಯ ಬಿ ಟೀಮ್ ಎಂದು ಹೇಳಿ ಮುಸ್ಲಿಂ ಮತ ವರ್ಗೀಕರಣ ಮಾಡಿದವರು ನೀವು. ಈಗ ನೀವು ಅದೇ ಕೆಲಸ ಮಾಡಲು ಹೊರಟಿದ್ದೀರಿ. ನಾನು ಎಂದೂ ಸಹ ಜಾತಿ ರಾಜಕಾರಣ ಮಾಡಿಲ್ಲ. ಎಲ್ಲರನ್ನು ಒಂದೇ ಎಂದು ಕಾಣುತ್ತಿದ್ದೇನೆ. ನೀವು ಈ ಚಿಲ್ಲರೆ ರಾಜಕಾರಣ ಬಿಟ್ಟು ನೇರವಾಗಿ ರಾಜಕಾರಣ ಮಾಡಿ ಎಂದು ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ಹರಿಹಾಯ್ದರು.