ಬೆಂಗಳೂರು : ಜೀವ ವೈವಿಧ್ಯದ ತಾಣ ಬೆಂಗಳೂರು ವಿಶ್ವವಿದ್ಯಾಲಯ ಆವರಣದ ಒಟ್ಟು 32 ಎಕರೆ ಪ್ರದೇಶವನ್ನು ಯೋಗ ವಿವಿ ಮತ್ತು ಇತರೆ ಎರಡು ಸಂಸ್ಥೆಗಳಿಗೆ ನೀಡಿರುವ ಸರ್ಕಾರದ ನಿರ್ಧಾರವನ್ನು ತಕ್ಷಣವೇ ವಾಪಸ್ ಪಡೆಯಬೇಕೆಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಈ ಕುರಿತು ಸರಣಿ ಟೀಟ್ವ್ ಮಾಡಿರುವ ಅವರು, ಸುಮಾರು ಎರಡು ದಶಕಗಳಿಂದ ಪರಿಸರ ತಜ್ಞರು ಶ್ರಮವಹಿಸಿ ಬೆಳಸಿದ ತಾಣವನ್ನು ಸರ್ಕಾರ ಯಾವುದೇ ಸಮಾಲೋಚನೆ ನಡೆಸದೆ ಏಕಾಏಕಿ ಜೀವವೈವಿಧ್ಯ ತಾಣಕ್ಕೆ ಕುತ್ತು ತರುವ ನಿರ್ಧಾರ ಕೈಗೊಂಡಿರುವುದು ತೀವ್ರ ಅಪಾಯಕಾರಿ ಎಂದಿದ್ದಾರೆ.
ಹಿರಿಯ ಪರಿಸರ ತಜ್ಞ ಯಲ್ಲಪ್ಪ ರೆಡ್ಡಿ ಅವರು ತಮಗೆ ಸರ್ಕಾರ ನೀಡಿದ ಗೌರವ ಡಾಕ್ಟರೇಟ್ ಹಿಂದಿರುಗಿಸುವ ಮೂಲಕ ತಮ್ಮ ಸಾತ್ವಿಕ ಸಿಟ್ಟನ್ನು ಪ್ರಕಟಿಸಿದ್ದಾರೆ. ಇದಕ್ಕೆ ಪರಿಸರ ಪ್ರೇಮಿಗಳು ಬೆಂಬಲಿಸಿದ್ದಾರೆ.
ಯೋಗ ವಿವಿಗೆ 15 ಎಕರೆ, ಗುಲ್ಬರ್ಗ ವಿವಿಗೆ 15 ಎಕರೆ, ಸಿಬಿಎಸ್ಸಿ ದಕ್ಷಿಣ ಭಾರತದ ಕಚೇರಿಗೆ ಎರಡು ಎಕರೆ ಸೇರಿ 32 ಎಕರೆಗಳನ್ನು ನೀಡಿರುವ ಕ್ರಮದಿಂದ ಬೆಂಗಳೂರು ವಿವಿ ಆವರಣ ಕಾಂಕ್ರೀಟ್ ಕಾಡಾಗಲಿದೆ. ಈ ಸಂಸ್ಥೆಗಳಿಗೆ ಬೇರೆ ಕಡೆ ಸ್ಥಳ ನೀಡುವ ಮೂಲಕ ಈ ಜೀವ ವೈವಿಧ್ಯ ತಾಣವನ್ನು ಸರ್ಕಾರ ಉಳಿಸಬೇಕು ಎಂದು ಮನವಿ ಮಾಡಿದ್ದಾರೆ.
ಬೆಂಗಳೂರು ವಿವಿ ರಾಷ್ಟ್ರೀಯ ಸೇವಾ ಯೋಜನಾ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಸಹಕಾರದಿಂದ ಕಳೆದ 20 ವರ್ಷಗಳಲ್ಲಿ ನಿರ್ಮಾಣಗೊಂಡ ಜೀವವೈವಿಧ್ಯದ ನಡುವೆ ಮೂರು ಸಂಸ್ಥೆಗಳಿಗೆ ಭೂಮಿ ನೀಡಲು ಮುಂದಾಗಿರುವ ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಸರ್ಕಾರದ ಕ್ರಮ ಖಂಡನೀಯ.
ಇದರಿಂದ ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎಂಬಂತೆ ಇಡೀ ಸಸ್ಯ ಸಂಪತ್ತು ನಾಶವಾಗಲಿದೆ ಎಂದು ಗುಡುಗಿದರು. ಹಿಂದೆ ಉಪಕುಲಪತಿಗಳಾಗಿದ್ದ ಡಾ.ಕೆ ಸಿದ್ದಪ್ಪನವರು ಇದೊಂದು ಬಯಲು ಪ್ರಯೋಗಾಲಯವಾಗಲಿದೆ ಎಂದು ನಿರೀಕ್ಷಿಸಿ ಚಾಲನೆ ನೀಡಿದರು. ಅಂತೆಯೇ ಇದೀಗ ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಭೂಗರ್ಭಶಾಸ್ತ್ರ, ಪರಿಸರ ವಿಜ್ಞಾನ, ಸಾಮಾಜಿಕ ವಿಜ್ಞಾನಗಳ ವಿದ್ಯಾರ್ಥಿಗಳಿಗೆ ಇದೊಂದು ಬಯಲು ಪ್ರಯೋಗಾಲಯವಾಗಿ ನೂರಾರು ಸಂಶೋಧನೆಗಳು ನಡೆಯುತ್ತಿವೆ. ಇಂತಹ ತಾಣವನ್ನು ಧ್ವಂಸ ಮಾಡಬಾರದು. ಮುಂದಿನ ಪೀಳಿಗೆಗೆ ಉಳಿಸಬೇಕು ಬೆಳೆಸಬೇಕು ಎಂದು ತಿಳಿಸಿದ್ದಾರೆ.