ಬೆಂಗಳೂರು: ಜೂನ್ ತಿಂಗಳಲ್ಲಿ ವಿಧಾನಪರಿಷತ್ನ ನಾಲ್ಕು ಕ್ಷೇತ್ರಗಳಿಗೆ ನಡೆಯುವ ಚುನಾವಣೆ ವೇಳೆ ಸಭಾಪತಿ ಬಸವರಾಜ ಹೊರಟ್ಟಿ ಅವರು ಬಿಜೆಪಿ ಸೇರಲಿದ್ದಾರೆ ಎಂಬ ವದಂತಿ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಬಸವರಾಜ ಹೊರಟ್ಟಿ ಜೊತೆ ಇಂದು ಮಹತ್ವದ ಮಾತುಕತೆ ನಡೆಸಿದ್ದಾರೆ.
ಸಭಾಪತಿ ನಿವಾಸಕ್ಕೆ ತೆರಳಿದ ಕುಮಾರಸ್ವಾಮಿ, ರಾಜಕೀಯ ವಿದ್ಯಮಾನಗಳ ಕುರಿತು ಚರ್ಚಿಸಿದ್ದಾರೆ. ಈ ಸಂದರ್ಭದಲ್ಲಿ ಹೊರಟ್ಟಿ ಬಿಜೆಪಿಗೆ ಸೇರ್ಪಡೆಯಾಗುವ ವದಂತಿ ಕುರಿತು ಕೂಡಾ ಮಾತುಕತೆ ನಡೆಸಿದರು ಎಂದು ಹೇಳಲಾಗುತ್ತಿದೆ. ವಿಧಾನ ಪರಿಷತ್‌ನಲ್ಲಿ ಆಡಳಿತಾರೂಢ ಬಿಜೆಪಿಗೆ ಬಹುಮತವಿದ್ದು, ಜೂನ್ ತಿಂಗಳಲ್ಲಿ ಪರಿಷತ್‌ಗೆ ನಡೆಯುವ ನಾಲ್ಕು ಸ್ಥಾನಗಳಲ್ಲಿ ಬಿಜೆಪಿ ಕೆಲ ಸ್ಥಾನದಲ್ಲಿ ಗೆಲ್ಲುವ ಸಾಧ್ಯತೆ ಇದೆ. ಜೆಡಿಎಸ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದರೂ ಹೊರಟ್ಟಿ ಅವರಿಗೆ ಸಭಾಪತಿ ಸ್ಥಾನ ಕೈತಪ್ಪಲಿದೆ.
ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ಹುಡುಕಾಟದಲ್ಲಿದೆ. ಹೀಗಾಗಿ, ಕೆಲವರು ಹೊರಟ್ಟಿ ಅವರನ್ನು ಬಿಜೆಪಿಗೆ ಸೆಳೆಯುವ ಪ್ರಯತ್ನ ನಡೆಸುತ್ತಿದ್ದಾರೆ. ಅವರು ಬಿಜೆಪಿಯಿಂದ ಸ್ಪರ್ಧಿಸಿದರೆ ಪಕ್ಷಕ್ಕೆ ಒಂದು ಸ್ಥಾನ ಬರುವುದು ಖಚಿತ ಎಂಬ ಚಿಂತನೆ ಪಕ್ಷದಲ್ಲಿದೆ. ಒಂದು ವೇಳೆ ಹೊರಟ್ಟಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದರೆ ಸಭಾಪತಿಯಲ್ಲಿ ಮುಂದುವರಿಯುವ ಸಾಧ್ಯತೆ ಇದೆ.
ಮತ್ತೊಂದೆಡೆ, ಬಸವರಾಜ ಹೊರಟ್ಟಿ ಅವರನ್ನು ಬಿಜೆಪಿಗೆ ಕರೆತರಲು ಪಕ್ಷದಲ್ಲಿಯೇ ವಿರೋಧ ಇದೆ. ಅವರಿಗೆ 76 ವರ್ಷವಾಗಿದ್ದು, ಪಕ್ಷದ ನಿಯಮದಂತೆ ಟಿಕೆಟ್ ನೀಡಲು ಅವಕಾಶ ಇಲ್ಲ. ಅಲ್ಲದೇ, ಕೆಲವೊಂದು ಆರೋಪಗಳಿವೆ. ಹೀಗಾಗಿ, ಬಿಜೆಪಿ ಸೇರ್ಪಡೆ ಬೇಡ ಎಂಬ ಮಾತುಗಳು ಕೇಳಿಬಂದಿವೆ. ಬಿಜೆಪಿಯಲ್ಲಿ ಭಿನ್ನರಾಗ ಇದ್ದರೂ ಹೊರಟ್ಟಿ ಅವರ ಅಭಿಪ್ರಾಯ ಕೇಳಲು ಕುಮಾರಸ್ವಾಮಿ ತೆರಳಿದ್ದು, ಸಾಧಕ-ಬಾಧಕ ಕುರಿತು ಚರ್ಚಿಸಿದ್ದಾರೆ ಎಂದು ಹೇಳಲಾಗಿದೆ.
ಹೊರಟ್ಟಿ ಅವರು ಸಹ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಲೋಪಗಳ ಬಗ್ಗೆಯೂ ಹೇಳಿದಾಗ ಅವುಗಳನ್ನು ಸರಿಪಡಿಸುವ ಕುರಿತು ಕುಮಾರಸ್ವಾಮಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಸಭಾಪತಿ ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ಉಪಹಾರಕ್ಕೆ ಕರೆದಿದ್ದರಿಂದ ಹೋಗಿದ್ದೆ. ಕೆಲವು ರಾಜಕೀಯ ವಿಚಾರಗಳನ್ನು ಚರ್ಚೆ ಮಾಡಲಾಗಿದೆ. ಅದನ್ನು ಬಹಿರಂಗಪಡಿಸುವುದಿಲ್ಲ ಎಂದರು.
ಸಭಾಪತಿ ಬಸವರಾಜ ಹೊರಟ್ಟಿ ಅವರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂಬ ವಿಚಾರ ಕುರಿತು ಚರ್ಚೆ ಬೇಡ. ಶಿಕ್ಷಕರ ಕ್ಷೇತ್ರದಿಂದ ಏಳು ಬಾರಿ ಗೆಲುವು ಸಾಧಿಸಿರುವ ಹೊರಟ್ಟಿ ಅವರಿಗೆ ಎಲ್ಲಾ ವಿಚಾರವು ಗೊತ್ತಿದೆ. ಅವರು ಹಿರಿಯರಾಗಿದ್ದು, ಅವರ ಬಗ್ಗೆ ಹೆಚ್ಚು ಹೇಳಬೇಕಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ನಾಳೆ ಚಾಮರಾಜನಗರಕ್ಕೆ ಬಿಎಸ್‌ವೈ; ವಿರಕ್ತ ಮಠಕ್ಕೆ ಭೇಟಿ