ಬೆಂಗಳೂರು: ಕರ್ತವ್ಯ ನಿರತ ಪೌರಕಾರ್ಮಿಕರು ಸೋಂಕಿನಿಂದ ಮೃತರಾದರೆ ಅವರ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಪೌರಕಾರ್ಮಿಕ ದಿನಾಚರಣೆಗೆ ಟ್ವೀಟ್ ನಲ್ಲಿ ಶುಭಾಶಯ ಕೋರಿದ ಅವರು, ಹಣದ ರೂಪದ ಪರಿಹಾರ ನೀಡುವುದು ಸರ್ಕಾರದ ಆಡಳಿತಾತ್ಮಕ ಕರ್ತವ್ಯವಾಗುತ್ತದೆ. ಪೌರಕಾರ್ಮಿಕ ಸಮುದಾಯವನ್ನು ಸದಾ ಕೃತಜ್ಞತೆಯಿಂದ ಸ್ಮರಿಸುವುದು, ಅವರ ಬೇಡಿಕೆಗಳನ್ನು ಈಡೇರಿಸುವುದೇ ಅವರಿಗೆ ಸಲ್ಲಿಸಬಹುದಾದ ಗೌರವವಾಗುತ್ತದೆ ಎಂದು ಹೇಳಿದ್ದಾರೆ.
ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ತ್ಯಾಗ, ಸೇವೆ, ಸಮರ್ಪಣೆ, ಕಾರುಣ್ಯದಿಂದ ಸದಾ ಜೀವ ತೇಯುತ್ತಿರುವ ಪೌರಕಾರ್ಮಿಕರನ್ನು ಈ ಸಮಾಜ ಪ್ರತಿ ಕ್ಷಣವೂ ತಾಯ್ತನದಿಂದ ಕಾಣುವುದೇ ನಾವು ಸಲ್ಲಿಸಬಹುದಾದ ದೊಡ್ಡ ಕೃತಜ್ಞತೆ ಎಂದಿದ್ದಾರೆ.
ಕೊರೊನಾ ಸಂದರ್ಭದಲ್ಲೂ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ದುಡಿಯುತ್ತಿರುವ ಪೌರಕಾರ್ಮಿಕರು ವೈದ್ಯ ಸಮೂಹದಂತೆ ಪ್ರಧಾನ ಪಾತ್ರ ವಹಿಸಿದ್ದಾರೆ ಎಂದು ಹೇಳಿದ್ದಾರೆ.