ಬೆಂಗಳೂರು: ಜನರ ಮೇಲೆ ಯಾವುದೇ ತೆರಿಗೆ ಭಾರ ಹಾಕದೇ ಪಂಚರತ್ನ ಯೋಜನೆಗಳನ್ನು ಜಾರಿ ಮಾಡುತ್ತೇನೆ ಎಂದು ಹೆಚ್.ಡಿ.ಕುಮಾರಸ್ವಾಮಿ ಘೋಷಿಸಿದ್ದಾರೆ. ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ವಸಂತಪುರದಲ್ಲಿ ನಿನ್ನೆ ಸಂಜೆ ಜೆಡಿಎಸ್ ಅಭ್ಯರ್ಥಿ ರಾಜಗೋಪಾಲ ರೆಡ್ಡಿ ಅವರ ಪರ ಪ್ರಚಾರ ಸಂದರ್ಭದಲ್ಲಿ ಅವರು ಮಾತನಾಡಿದರು.
ಪಂಚರತ್ನ ಯೋಜನೆಗಳು ಉಚಿತ ಕೊಡುಗೆಗಳು ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಅವು ಉಚಿತ ಕೊಡುಗೆಗಳಲ್ಲ, ರೈತರು ಸೇರಿ ಎಲ್ಲ ವರ್ಗದ ಜನರನ್ನು ಆರ್ಥಿಕವಾಗಿ ಮೇಲೆತ್ತುವ ಹಾಗೂ ಸರ್ಕಾರಕ್ಕೆ ಆಸ್ತಿಗಳನ್ನು ಸೃಷ್ಟಿಸುವ ಯೋಜನೆಗಳಾಗಿವೆ ಎಂದು ಹೇಳಿದರು. ಈ ಯೋಜನೆಗಳಿಗೆ ಹಣ ಎಲ್ಲಿಂದ ತರುತ್ತಾರೆ? ಎಂದು ಕೆಲವರು ಕೊಂಕು ಮಾತನಾಡುತ್ತಿದ್ದಾರೆ. ಹೊಸ ತೆರಿಗೆ ಹಾಕದೆ, ಸಾಲ ಮಾಡದೆ ಆಂತರಿಕ ಸಂಪನ್ಮೂಲವನ್ನು ಕ್ರೋಢೀಕರಿಸಿ, ಜನರ ಹಣ ಲೂಟಿ ತಡೆಗಟ್ಟಿ ಹಣ ಹೊಂದಿಸುತ್ತೇನೆ. ಇದರಲ್ಲಿ ಯಾವುದೇ ಸಂಶಯ ಬೇಡ ಎಂದು ಸ್ಪಷ್ಟಪಡಿಸಿದರು.
ಎಲ್ಲರಿಗೂ ಉತ್ತಮ ಶಿಕ್ಷಣ: ಇಂದು ಸರ್ಕಾರಿ ಶಾಲೆಯಲ್ಲಿ ಉತ್ತಮ ಶಿಕ್ಷಣ ಸಿಗುತ್ತಿಲ್ಲ. ಮಕ್ಕಳ ಭವಿಷ್ಯಕ್ಕೆ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಪೋಷಕರು ಸಾಲ ಮಾಡುತ್ತಿದ್ದಾರೆ. ಜನರ ಸಹಕಾರದಿಂದ ಜನತಾ ಸರಕಾರ ಬಂದರೆ ಶಿಕ್ಷಣ ವ್ಯವಸ್ಥೆಗೆ ಚಿಕಿತ್ಸೆ ನೀಡುತ್ತೇನೆ. ಈ ಬಾರಿ ಕನ್ನಡಿಗರು ಪಂಚರತ್ನ ಯೋಜನೆಗಳ ಜಾರಿಗೆ ಜನಾದೇಶ ನೀಡಬೇಕು ಎಂದು ಮನವಿ ಮಾಡಿದರು.
ಮತ ಕೇಳಲು ಎರಡು ರಾಷ್ಟ್ರೀಯ ಪಕ್ಷಗಳ ರಾಷ್ಟ್ರೀಯ ಮುಖಂಡರು ಆಗಮಿಸಿದ್ದಾರೆ. ಪ್ರಧಾನಮಂತ್ರಿ ಬಂದಿದ್ದಾರೆ. ಪರಸ್ಪರ ಕೆಸರೆರಚಿಕೊಂಡು ಭಾವನಾತ್ಮಕ ವಿಚಾರಗಳ ಜನರಿಗೆ ಮಂಕುಬೂದಿ ಎರಚುತ್ತಿದ್ದಾರೆ. ಜನರ ಕಷ್ಟಗಳ ಬಗ್ಗೆ, ನಾಡಿನ ಜ್ವಲಂತ ಸಮಸ್ಯೆಗಳ ಕುರಿತು ಅವರು ಚರ್ಚೆ ಮಾಡುತ್ತಿಲ್ಲ. ಅಧಿಕಾರ ಬಿಟ್ಟರೆ ಅವರಿಗೆ ಬೇರೆ ಬೇಕಿಲ್ಲ ಎಂದು ಆರೋಪಿಸಿದರು.
ಕಾಂಗ್ರೆಸ್ನವರು ಮೋದಿ ಅವರನ್ನು ವಿಷ ಸರ್ಪ ಅಂತಾರೆ, ಸೋನಿಯಾ ಗಾಂಧಿ ಅವರನ್ನು ಬಿಜೆಪಿಯವರು ವಿಷಕನ್ಯೆ ಎನ್ನುತ್ತಾರೆ. ಕಾಂಗ್ರೆಸ್ ಇದ್ದರೆ 80 ಪರ್ಸೆಂಟ್ ಅಂತಾರೆ, ಬಿಜೆಪಿಯವರದ್ದು 40 ಪರ್ಸೆಂಟ್ ಅಂತಾರೆ. ನಾನು ಈ ನಾಡಿನ ತಾಯಂದಿರ ಕಣ್ಣೀರು ಒರೆಸಲು ಪಂಚರತ್ನ ಯೋಜನೆ ತರಲು ಮುಂದಾಗಿದ್ದೇನೆ. ಅದಕ್ಕಾಗಿ ಒಂದು ಬಾರಿ ನಮಗೆ ಆಶೀರ್ವಾದ ಮಾಡಿ. ಈ ಯೋಜನೆಗಳು ಜಾರಿಗೆ ಬಂದರೆ ಸುವರ್ಣ ಕರ್ನಾಟಕ ನಿರ್ಮಾಣ ಆಗೋದು ಗ್ಯಾರಂಟಿ ಎಂಬ ಆಶ್ವಾಸನೆ ನೀಡಿದರು.
ನಮ್ಮ ಸರ್ಕಾರ ಬಂದರೆ ವೃದ್ದರಿಗೆ 5000 ರೂ. ಕೊಡಲಾಗುತ್ತದೆ. ವಿಧವೆಯರಿಗೆ 2500 ರೂ. ಕೊಡಲಾಗುತ್ತದೆ. ಸ್ತ್ರೀ ಶಕ್ತಿ ಸ್ವಹಾಯ ಗುಂಪುಗಳ ಸಾಲಮನ್ನಾ ಮಾಡಲಾಗುತ್ತದೆ. ವರ್ಷಕ್ಕೆ ಐದು ಸಿಲಿಂಡರ್ ಉಚಿತವಾಗಿ ಕೊಡುತ್ತೇವೆ. ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಆಗುತ್ತಲೇ ಇದೆ. ಆದರೆ, ಬಿಜೆಪಿಯವರು ಮೂರು ಸಿಲಿಂಡರ್ ಕೊಡ್ತಾರಂತೆ. ನಾವು ಐದು ಸಿಲಿಂಡರ್ ಉಚಿತವಾಗಿ ಕೊಡುತ್ತೇವೆ ಎಂದು ಘೋಷಣೆ ಮಾಡಿದ್ದೇವೆ ಎಂದರು.
ವಸಂತಪುರವನ್ನು ಆಗ ಬಿಬಿಎಂಪಿಗೆ ಸೇರಿಸಿದೆ. ಸಾವಿರಾರು ಕೋಟಿ ಹಣ ನಗರದ ಅಭಿವೃದ್ಧಿಗೆ ಸಿಕ್ಕಿತು. ಮೆಟ್ರೋ ರೈಲು ಯೋಜನೆ ಪ್ರಾರಂಭ ಮಾಡಿದ್ದು ನಾನು. ದೆಹಲಿಯಲ್ಲಿ ಮೆಟ್ರೋ ಯೋಜನೆ ಪ್ರಾರಂಭ ಮಾಡಿದ್ದು ದೇವೇಗೌಡರು ಎಂದ ಕುಮಾರಸ್ವಾಮಿ, ದಾಸರಹಳ್ಳಿ ಕ್ಷೇತ್ರದಲ್ಲಿ ಮಂಜುನಾಥ್ ಹಾಗೂ ಯಲಹಂಕ ಕ್ಷೇತ್ರದಲ್ಲಿ ಮುನೇಗೌಡ ಪರವಾಗಿ ಪ್ರಚಾರ ನಡೆಸಿದರು.
ಇದನ್ನೂ ಓದಿ: ನಾನೇ ಮುಂದಿನ ಸಿಎಂ, ಮೊದಲ ಕ್ಯಾಬಿನೆಟ್‌ನಲ್ಲೇ ಗ್ಯಾರಂಟಿಗಳಿಗೆ ಅನುಮೋದನೆ: ಡಿಕೆಶಿ