ಕೇಂದ್ರ ಸರ್ಕಾರದ ಬಜೆಟ್ ಮೇಲೆ ನನಗೆ ಯಾವುದೇ ನಿರೀಕ್ಷೆ ಇಲ್ಲ: ಹೆಚ್ಡಿಕೆ ವ್ಯಂಗ್ಯ - central government budget
ಫೆಬ್ರವರಿ 1 ರಂದು ಕೇಂದ್ರ ಸರ್ಕಾರ ಮಂಡಿಸುವ ಬಜೆಟ್ನ ಮೇಲೆ ನನಗೆ ಯಾವುದೇ ರೀತಿಯ ನಿರೀಕ್ಷೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಬೆಂಗಳೂರು: ಫೆಬ್ರವರಿ 1 ರಂದು ಕೇಂದ್ರ ಸರ್ಕಾರ ಮಂಡಿಸುವ ಬಜೆಟ್ ಮೇಲೆ ನನಗೆ ಯಾವುದೇ ನಿರೀಕ್ಷೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರಿಂದ ಕರ್ನಾಟಕಕ್ಕೆ ದೊಡ್ಡಮಟ್ಟದ ನೆರವು ಸಿಗುತ್ತದೆ ಎನ್ನುವ ನಿರೀಕ್ಷೆಯೂ ನನಗಿಲ್ಲ ಎಂದಿರುವ ಹೆಚ್.ಡಿ. ಕುಮಾರಸ್ವಾಮಿ, ಕೇಂದ್ರ ಸರ್ಕಾರದ ಬಜೆಟ್ ಬಗ್ಗೆ ಲೇವಡಿ ಮಾಡಿದ್ದಾರೆ. ಅಲ್ಲದೆ ಕಳೆದ ವರ್ಷ ಬಜೆಟ್ನಲ್ಲಿ ಕೊಡಬೇಕಾಗಿರುವ 17,000 ಕೋಟಿಯನ್ನು ಈಗಾಗಲೇ ಕಡಿತಗೊಳಿಸಿದ್ದಾರೆ. ಹೀಗಿರುವಾಗ ಹೊಸದಾಗಿ ಮೋದಿ ಅವರಿಂದ ಏನನ್ನು ನಿರೀಕ್ಷೆ ಮಾಡುತ್ತೀರಿ ಎಂದು ಹೆಚ್ಡಿಕೆ ಪ್ರಶ್ನಿಸಿದ್ದಾರೆ.
ದೇಶದಲ್ಲಿ ನಿರುದ್ಯೋಗ ಸಮಸ್ಯೆ ಮತ್ತೊಂದು ಕಡೆ ಮಳೆಯ ಅನಾಹುತದಿಂದ ರೈತಾಪಿ ವರ್ಗ ಸಂಕಷ್ಟದಲ್ಲಿದೆ. ಇದಲ್ಲದೆ ಕೇಂದ್ರ ಸರ್ಕಾರದ ಚುನಾವಣೆಗಳು ಹಾಗೂ ಈಗ ಹೊಸದಾಗಿ ಜಾರಿಗೆ ತಂದಿರುವ ಸಿಎಎ ಹಾಗೂ ಎನ್ಆರ್ಸಿ ಇವುಗಳಿಗೆ ಸರ್ಕಾರ ಪ್ರಾಶಸ್ತ್ಯ ಕೊಟ್ಟಿದೆ. ಆದ್ರೆ ಬಜೆಟ್ ಬಗ್ಗೆ ಹಾಗೂ ಆರ್ಥಿಕ ಸಂಕಷ್ಟ, ಆರ್ಥಿಕ ಕುಸಿತದ ಬಗ್ಗೆ ಸರ್ಕಾರ ಗಮನ ಕೊಡ ಬೇಕಿದೆ ಎಂದು ತಿಳಿಸಿದರು.
ಕಳೆದ ಅವಧಿಯಲ್ಲಿ ಕೇಂದ್ರ ಸರ್ಕಾರ ರೈತರ ಆದಾಯವನ್ನು ದುಪ್ಪಟ್ಟು ಮಾಡುತ್ತೇವೆ ಎಂದು ಹೇಳಿದ್ದರು. ಈಗ ಅವರ ಮಾತಿನಂತೆ ಕೇಂದ್ರ ಸರ್ಕಾರ ರೈತರ ಆದಾಯವನ್ನು ದ್ವಿಗುಣಗೊಳಿಸುವುದರ ಬಗ್ಗೆ ಕಾರ್ಯಕ್ರಮವನ್ನು ಜಾರಿಗೊಳಿಸಬೇಕು. ಈ ಬಜೆಟ್ನಲ್ಲಿ ರೈತರ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಯಾವ ರೀತಿಯ ಕೊಡುಗೆ ಕೊಡುತ್ತಾರೋ ಕಾದು ನೋಡೋಣ ಎಂದು ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.