ಬೆಂಗಳೂರು : ಅಸಮಾಧಾನಿತ ಶಾಸಕರ ಮನವೊಲಿಕೆಗೆ ಮುಂದಾಗುವ ಮೂಲಕ ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಿಸಲು ಜೆಡಿಎಸ್ ವರಿಷ್ಠರು ನಿರ್ಧರಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಜತೆ ಮುನಿಸಿಕೊಂಡು ಜೆಡಿಎಸ್‍ನಿಂದ ಅಂತರ ಕಾಯ್ದುಕೊಂಡಿರುವ ಮಾಜಿ ಸಚಿವ ಜಿ ಟಿ ದೇವೇಗೌಡ ಅವರ ಮನವೊಲಿಸುವ ಪ್ರಯತ್ನವನ್ನ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ನಡೆಸಿದ್ದಾರೆ.
ಜಿ.ಟಿ.ದೇವೇಗೌಡ ಅವರಿಗೆ ಕರೆ ಮಾಡಿದ್ದ ದೇವೇಗೌಡರು, ಅರ್ಧಗಂಟೆಗೂ ಹೆಚ್ಚು ಕಾಲ ಮಾತನಾಡಿದ್ದು, ಪಕ್ಷ ತೊರೆಯದಂತೆ ಮನವಿ ಮಾಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ತಮಗೂ ಮತ್ತು ತಮ್ಮ ಮಗನಿಗೂ ಟಿಕೆಟ್ ನೀಡುವ ಬಗ್ಗೆ ಆಶ್ವಾಸನೆ ನೀಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಅದೇ ರೀತಿ ಪಕ್ಷ ತೊರೆಯಲು ಮುಂದಾಗಿರುವ ಶಾಸಕರ ಮನವೊಲಿಕೆಗೂ ದೇವೇಗೌಡರು ಯತ್ನಿಸಿದ್ದಾರೆ.
ಜಿ ಟಿ ದೇವೇಗೌಡರ ವಿರುದ್ಧ ಮುನಿಸಿಕೊಂಡಿರುವ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರೊಂದಿಗೂ ಸಹ ಮಾತುಕತೆ ನಡೆಸಿದ್ದು, ಅವರ ಮನವೊಲಿಕೆಗೂ ಪ್ರಯತ್ನ ಮಾಡಿದ್ದಾರೆ. ಅಲ್ಲದೇ, ಇತರೆ ಅಸಮಾಧಾನಿತ ಮುಖಂಡರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಈ ವೇಳೆ ಹೆಚ್.ಡಿ. ದೇವೇಗೌಡರ ಜತೆಗೆ ಮಾತನಾಡಿದ ಅಸಮಾಧಾನಿತ ಶಾಸಕರು, ಮುಖಂಡರು ಮತ್ತೆ ಮಾತಾಡೋಣ ಎಂದಷ್ಟೇ ತಿಳಿಸಿದ್ದಾರೆ. ನಿಮ್ಮ ಆರೋಗ್ಯ ಚೆನ್ನಾಗಿ ನೋಡಿಕೊಳ್ಳಿ. ಮತ್ತೆ ಮಾತನಾಡೋಣ ಎಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜಿ.ಟಿ.ದೇವೇಗೌಡ ಅವರು ಕುಮಾರಸ್ವಾಮಿ ಜತೆ ಮುನಿಸಿಕೊಂಡು ಪಕ್ಷದ ಚಟುವಟಿಕೆಯಿಂದ ದೂರ ಉಳಿದಿದ್ದಾರೆ. ಕಾಂಗ್ರೆಸ್ ಅಥವಾ ಬಿಜೆಪಿಗೆ ಸೇರಲು ಜಿ.ಟಿ.ದೇವೇಗೌಡ ಚಿಂತನೆ ನಡೆಸಿದ್ದಾರೆ. ಅದಲ್ಲದೇ, ಪಕ್ಷದ ಕೆಲವು ಮುಖಂಡರು ಸಹ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದಾರೆ. ಕೆಲವರು ಪಕ್ಷ ತೊರೆದು ಕಾಂಗ್ರೆಸ್ ಅಥವಾ ಬಿಜೆಪಿಗೆ ಸೇರ್ಪಡೆಯಾಗುವ ಸಾಧ್ಯತೆ ಇದೆ.
ಇದನ್ನು ಅರಿತ ದೇವೇಗೌಡರು, ಅಸಮಾಧಾನಿತ ಪಕ್ಷದ ಶಾಸಕರ ಜೊತೆ ಮಾತುಕತೆ ನಡೆಸಿ ಮನವೊಲಿಕೆ ಮಾಡುವ ಪ್ರಯತ್ನಕ್ಕೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಮುಂಬರುವ ವಿಧಾನಸಭೆ ಚುನಾವಣೆ ಹೊತ್ತಿಗೆ ಪಕ್ಷದಲ್ಲಿರುವ ಅಸಮಾಧಾನಿತ ಮುಖಂಡರನ್ನು ಮನವೊಲಿಸಿ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆಗೆ ಹೋಗುವುದು ವರಿಷ್ಠರ ಪ್ಲ್ಯಾನ್ ಆಗಿದೆ.