ಬೆಂಗಳೂರು: ಕೇದಾರನಾಥದಲ್ಲಿ ಆದಿ ಶಂಕರಚಾರ್ಯರ ಪ್ರತಿಮೆಯನ್ನು ಅನಾವರಣಗೊಳಿಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅಭಿನಂದನೆ ಸಲ್ಲಿಸಿದ್ದಾರೆ.
ಈ ಬಗ್ಗೆ ಪ್ರಧಾನಿಗೆ ಪತ್ರ ಬರೆದಿರುವ ಅವರು, ಪ್ರತಿಮೆಯನ್ನು ನೋಡಿ ಭಾವುಕನಾಗಿದ್ದೇನೆ. ಪವಿತ್ರ ಸ್ಥಳದ ಪರಿವರ್ತನೆಗೆ ತೋರಿಸಿದ ಸಮರ್ಪಣಾ ಭಾವನೆಯು ಸಂತಸ ಉಂಟುಮಾಡಿದೆ. ನಾನು ಬಹಳ ಹಿಂದಿನಿಂದಲೂ ಶೃಂಗೇರಿ ಶಾರದ ಪೀಠದ ಕಟ್ಟಾ ಅನುಯಾಯಿ. ಮಹಾನ್ ಸಂತನಿಂದ ಸ್ಥಾಪಿಸಲ್ಪಟ್ಟ ನಾಲ್ಕು ಪ್ರಮುಖ ಕೇಂದ್ರಗಳಲ್ಲಿ ಒಂದಾಗಿದೆ. ಶೃಂಗೇರಿ ಮಠ ನನ್ನನ್ನುವಿಶೇಷವಾಗಿ ಆಕರ್ಷಿಸಿದೆ. ಶಂಕರಚಾರ್ಯರು ಹಲವು ಆಡಳಿತಗಾರರು ಮತ್ತು ರಾಜ್ಯಗಳಿಗೆ ಆಧ್ಯಾತ್ಮಿಕ ಸಲಹೆಗಾರರಾಗಿದ್ದರು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಒಡೆಯರು, ಪೇಶ್ವೆಗಳು, ಕೆಳದಿ ಮತ್ತು ತಿರುವಾಂಕೂರು ದೊರೆಗಳು ಮಠದಿಂದ ಎಷ್ಟು ಲಾಭ ಪಡೆದರು. ಮೈಸೂರು ರಾಜರಾಗಿದ್ದ ಹೈದರ್ ಅಲಿ, ಟಿಪ್ಪು ಸುಲ್ತಾನ್ ಮತ್ತು ಹೈದರಾಬಾದಿನ ನಿಜಾಮರು ಮಠದ ಮೇಲೆ ಭಕ್ತಿ ಹೊಂದಿದ್ದರು. ಅವರು ನೀಡಿದ ಬುದ್ಧಿವಂತ ಸಲಹೆಯಿಂದ ಅಪಾರವಾಗಿ ಗಳಿಸಿದ್ದಾರೆ. ಮಠದ ಮಾರ್ಗದರ್ಶನದ ವೈಭವೋಪೇತ ಪರಂಪರೆ ಇಂದಿಗೂ ನಡೆದುಕೊಂಡು ಬಂದಿದೆ. ನನಗೆ ವೈಯಕ್ತಿಕವಾಗಿ ಶೃಂಗೇರಿ ಮಠವು ಸರ್ವಧರ್ಮ ಸಮನ್ವಯದ ಸಂಕೇತವಾಗಿದೆ. ಈ ಅತ್ಯಂತ ಪವಿತ್ರವಾದ ಆಸನದಿಂದ ನನ್ನ ಜೀವನದುದ್ದಕ್ಕೂ ನಾನು ಪಡೆದ ಆಶೀರ್ವಾದಕ್ಕೆ ಋಣಿಯಾಗಿದ್ದೇನೆ. ಶೀಘ್ರದಲ್ಲಿಯೇ ಕೇದಾರಮಠಕ್ಕೆ ಭೇಟಿ ನೀಡಿ ಹೊಸದಾಗಿ ಸ್ಥಾಪಿಸಲಾದ ಪೂಜ್ಯರ ಪ್ರತಿಮೆ ನೋಡಲು ಬಯಸುತ್ತೇನೆ ಎಂದಿದ್ದಾರೆ.
ಶಂಕರಾಚಾರ್ಯರರ ಪ್ರತಿಮೆಯನ್ನು ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆ ಮಾಡಿದ್ದಾರೆ ಎಂಬುದು ಸಂಸತದ ವಿಚಾರ. ಎಲ್ಲವೂ ದೈವಿಕವಾಗಿ ಏರ್ಪಾಡಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿಯಿಂದ ಕೇದಾರನಾಥದಲ್ಲಿ ಆದಿ ಗುರು ಶ್ರೀ ಶಂಕರಾಚಾರ್ಯರ ಪ್ರತಿಮೆ ಲೋಕಾರ್ಪಣೆ