ಹಲವು ಪಕ್ಷಗಳ ಬಹಿಷ್ಕಾರದ ನಡುವೆ ಸಂಸತ್ ಭವನ ಉದ್ಘಾಟನೆಗೆ ಹೋಗ್ತೇನಿ ಎಂದ ದೇವೇಗೌಡರು! - Introspection meeting of JDS party
ಒಬ್ಬ ಮಾಜಿ ಪ್ರಧಾನಮಂತ್ರಿಯಾಗಿ ಸಂಸತ್ ಭವನದ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಹೋಗುತ್ತೇನೆ ಎಂದು ಹೆಚ್.ಡಿ ದೇವೇಗೌಡರು ಹೇಳಿದರು.
ಬೆಂಗಳೂರು : ಸಂಸತ್ ಭವನದ ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮಕ್ಕೆ ಹೋಗದೇ ಇರುವುದಕ್ಕೆ ಅದೇನು ಬಿಜೆಪಿ, ಆರ್ಎಸ್ಎಸ್ ಕಚೇರಿಯೇ? ನಾನು ಆ ಕಾರ್ಯಕ್ರಮಕ್ಕೆ ಹಾಜರಾಗುತ್ತಿದ್ದೇನೆ. ಅದು ದೇಶದ ಆಸ್ತಿ. ಯಾರೊಬ್ಬರ ವೈಯಕ್ತಿಕ ವಿಷಯಕ್ಕೆ ಸಂಬಂಧಿಸಿದ್ದಲ್ಲ ಎಂದು ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡ ಹೇಳಿದರು.
ಇಂದು ನಗರದ ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್ ಪಕ್ಷದ ಆತ್ಮಾವಲೋಕನ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಂಸತ್ ಭವನ ಉದ್ಘಾಟನಾ ಕಾರ್ಯಕ್ರಮ ಯಾರ ವೈಯಕ್ತಿಕ ಕಾರ್ಯಕ್ರಮ ಅಲ್ಲ. ದೇಶದ ಕಾರ್ಯಕ್ರಮ. ಆ ಭವ್ಯ ಕಟ್ಟಡ ದೇಶದ ಜನರ ತೆರಿಗೆ ಹಣದಿಂದ ನಿರ್ಮಾಣವಾಗಿದೆ. ಅದು ದೇಶಕ್ಕೆ ಸೇರಿದ್ದು. ಬಿಜೆಪಿ ಅಥವಾ ಆರೆಸ್ಸೆಸ್ ಕಚೇರಿ ಅಲ್ಲ. ಸಂಸತ್ ಭವನದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಓರ್ವ ಮಾಜಿ ಪ್ರಧಾನಮಂತ್ರಿಯಾಗಿ, ದೇಶದ ಪ್ರಜೆಯಾಗಿ ಭಾಗಿಯಾಗುತ್ತಿದ್ದೇನೆ ಎಂದು ಸ್ಪಷ್ಟವಾಗಿ ತಿಳಿಸಿದರು.
ಬಿಜೆಪಿಯನ್ನು ರಾಜಕೀಯವಾಗಿ ವಿರೋಧ ಮಾಡಲಿಕ್ಕೆ ನನ್ನಲ್ಲಿ ಅನೇಕ ಕಾರಣಗಳಿವೆ. ಆದರೆ, ಸಂಸತ್ ಭವನ ಉದ್ಘಾಟನೆ ವಿಷಯದಲ್ಲಿ ರಾಜಕೀಯ ತರುವುದು ನನಗೆ ಇಷ್ಟವಿಲ್ಲ. ನಾನು ಸಂಸತ್ತಿನ ಎರಡು ಸದನಗಳಿಗೆ ಆಯ್ಕೆಯಾಗಿದ್ದೇನೆ. ಅಲ್ಲಿ ಸಾಂವಿಧಾನಿಕ ಚೌಕಟ್ಟಿನಲ್ಲಿ ಕರ್ತವ್ಯ ನಿರ್ವಹಿಸಿದ್ದೇನೆ. ಈಗಲೂ ಸದಸ್ಯನಾಗಿದ್ದೇನೆ. ಸಂವಿಧಾನದ ಮೌಲ್ಯಗಳನ್ನು ಕಾಪಾಡುವ ಕೆಲಸ ಮಾಡಿದ್ದೇನೆ. ಹೀಗಾಗಿ ಸಂವಿಧಾನದ ವಿಷಯದಲ್ಲಿ ನಾನು ರಾಜಕೀಯ ತರಲಾರೆ ಎಂದು ಮಾಜಿ ಪ್ರಧಾನಿಗಳು ಸ್ಪಷ್ಟಪಡಿಸಿದರು.
ಅನೇಕ ಪಕ್ಷಗಳು ಸಂಸತ್ ಭವನದ ಉದ್ಘಾಟನೆ ಕಾರ್ಯಕ್ರಮವನ್ನು ಬಹಿಷ್ಕರಿಸಿವೆ. ಓರ್ವ ಮಾಜಿ ಪ್ರಧಾನಿಯಾಗಿ ನೀವು ಹೋಗುತ್ತೀರಾ? ಇಲ್ಲವಾ? ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ಹೌದು, ನಾನು ಸಂವಿಧಾನಕ್ಕೆ ಬದ್ಧನಾಗಿದ್ದೇನೆ. ಅದಕ್ಕಾಗಿ ಸಂಸತ್ ಭವನ ಉದ್ಘಾಟನೆಗೆ ಹೋಗುತ್ತೇನೆ ಎಂದು ಅವರಿಗೆ ಹೇಳಲು ಬಯಸುತ್ತೇನೆ ಎಂದು ಹೆಚ್.ಡಿ.ದೇವೇಗೌಡರು ನುಡಿದರು.
ಪಕ್ಷವನ್ನು ಉಳಿಸುತ್ತೇನೆ : ಜೆಡಿಎಸ್ ಪಕ್ಷಕ್ಕಾಗಿ ನನ್ನ ಜೀವ ಸವೆಸಿದ್ದೇನೆ. ನಾನು ಬದುಕಿರುವಷ್ಟು ಕಾಲವೂ ಪಕ್ಷಕ್ಕಾಗಿಯೇ ಬದುಕುತ್ತೇನೆ. ನನ್ನ ಕೊನೆ ಉಸಿರು ಇರುವ ತನಕ ನಾನು ಪಕ್ಷಕ್ಕೇ ಮೀಸಲು ಎಂದು ಹೆಚ್.ಡಿ.ದೇವೇಗೌಡ ಅವರು ಭಾವುಕರಾದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಸೋತಿದೆ ಎಂಬುದಕ್ಕೆ ನನಗೆ ಬಹಳ ನೋವಿದೆ. ಅದೇ ನೋವಿನಿಂದ ಕಾಲ ದೂಡಲು ಸಾಧ್ಯವೇ? ಪುಟಿದೆದ್ದು ಪಕ್ಷ ಕಟ್ಟಬೇಕು. ಅಧಿಕಾರಕ್ಕೆ ಬರಲು ಶ್ರಮಿಸಬೇಕು ಎಂದರು.
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದಕ್ಕೆ ಪ್ರಾಮಾಣಿಕವಾಗಿ ಕಾರಣಗಳನ್ನು ಹುಡುಕೋಣ. ಅವುಗಳಿಗೆ ಪರಿಹಾರಗಳನ್ನು ಕಂಡು ಹಿಡಿಯೋಣ. 1989ರಲ್ಲಿ ನಮ್ಮ ಪಕ್ಷ ಕೇವಲ ಎರಡು ಕ್ಷೇತ್ರಗಳಲ್ಲಿ ಮಾತ್ರ ಗೆದ್ದಿತ್ತು. ಅದಾದ ಮೇಲೆ ಐದು ವರ್ಷಗಳ ನಂತರ ನಮ್ಮ ಪಕ್ಷ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂತು.
ಈ ವೇಳೆ ನಾನೇ ಮುಖ್ಯಮಂತ್ರಿ ಆದೆ. ಆಮೇಲೆ ಪ್ರಧಾನಿಯೂ ಆದೆ. ಜನರ ಆಶೀರ್ವಾದದಿಂದ ಅದು ಸಾಧ್ಯವಾಯಿತು. ಸೋತಾಗ ನಿರಾಶೆ, ನೋವು ಸಹಜ. ನಾನು ಈ ಎಲ್ಲಾ ಹಂತಗಳನ್ನು ದಾಟಿಕೊಂಡು ಮುಂದೆ ಬಂದಿದ್ದೇನೆ. ಪಕ್ಷವನ್ನು ಕಟ್ಟಿ ಬೆಳೆಸಿದ್ದೇನೆ. ಈ ಪಕ್ಷವನ್ನು ಉಳಿಸುವ ಕೆಲಸ ನಾನು ಮಾಡಿಯೇ ಮಾಡುತ್ತೇನೆ. ಎಂದು ಪಕ್ಷದ ನಾಯಕರಿಗೆ ಧೈರ್ಯ ತುಂಬುವ ಕಾರ್ಯಕ್ಕೆ ಮುಂದಾದರು.
ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಸೇರಿದಂತೆ ಪಕ್ಷದ ಎಲ್ಲಾ ಶಾಸಕರು, ವಿಧಾನ ಪರಿಷತ್ ಸದಸ್ಯರು, ಪಕ್ಷದ ತಾಲೂಕು, ಜಿಲ್ಲಾ ಘಟಕಗಳ ಅಧ್ಯಕ್ಷರು ಹಾಜರಿದ್ದರು.
ಇದನ್ನೂ ಓದಿ : ಸೋಲಿನಿಂದ ದೃತಿಗೆಡಬೇಕಿಲ್ಲ, ಲೋಕಸಭೆ ಚುನಾವಣೆ ಫಲಿತಾಂಶದ ಮೇಲೆ ಕಾಂಗ್ರೆಸ್ ಸರ್ಕಾರದ ಭವಿಷ್ಯ ನಿಂತಿದೆ: ಹೆಚ್ ಡಿ ಕುಮಾರಸ್ವಾಮಿ