ಬೆಂಗಳೂರು : ಖಿನ್ನತೆ, ಮಾನಸಿಕ ರೋಗ, ಆತ್ಮಹತ್ಯೆ ಚಿಂತೆಯಲ್ಲಿ ಇರುವ ಹಾಗೂ ಆತ್ಮಹತ್ಯೆಗೆ ಪ್ರಯತ್ನಿಸಿ ವಿಫಲರಾಗಿರುವವರಿಗೆ ವಿದ್ಯುತ್ ಕಂಪನ ಚಿಕಿತ್ಸೆ ಅಥವಾ ಎಲೆಕ್ಟ್ರೋಕಾನ್ವಲ್ಸಿವ್ ಥೆರಪಿ (ಇಸಿಟಿ) ನೀಡಲು ಅವಕಾಶ ನೀಡುವಂತೆ ಸರ್ಕಾರಕ್ಕೆ ನಿರ್ದೇಶನ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಈ ಕುರಿತು ಮನೋವೈದ್ಯ ಮತ್ತು ವಕೀಲ ಡಾ.ವಿನೋದ್ ಕುಲಕರ್ಣಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ನೇತೃತ್ವದ ವಿಭಾಗೀಯ ಪೀಠ ನೋಟಿಸ್ ಜಾರಿಗೆ ಆದೇಶಿಸಿತು.
ಹಾಗೆಯೇ, ಅರ್ಜಿಯಲ್ಲಿ ನಿಮ್ಹಾನ್ಸ್ ಪ್ರತೀವಾದಿ ಮಾಡುವಂತೆ ಅರ್ಜಿದಾರರಿಗೆ ಸೂಚಿಸಿತಲ್ಲದೇ, ಈ ಸಂಬಂಧ ನಿಮ್ಹಾನ್ಸ್ ನಿರ್ದೇಶಕರು ತಜ್ಞರ ಪ್ರತಿಕ್ರಿಯೆಯನ್ನು ಒಂದು ವಾರದಲ್ಲಿ ಸಲ್ಲಿಸುವಂತೆ ಸೂಚಿಸಿ ವಿಚಾರಣೆಯನ್ನು ಅ.4ಕ್ಕೆ ಮುಂದೂಡಿತು.
ವಿಚಾರಣೆ ವೇಳೆ ಅರ್ಜಿದಾರರು ಖುದ್ದು ವಾದಿಸಿ, ರೋಗಿಗಳಿಗೆ ಇಸಿಟಿ ನೀಡುವುದಕ್ಕೆ ಮಾನಸಿಕ ಆರೋಗ್ಯ ಆರೈಕೆ ಕಾಯ್ದೆ-2017ರ ಸೆಕ್ಷನ್ 94(3)ಕ್ಕೆ ನಿರ್ಬಂಧ ಹೇರಿದೆ. ಅದೇ ಕಾಯ್ದೆಯ ಸೆಕ್ಷನ್ 94(1) (ಎ) ಪ್ರಕಾರ ರೋಗಿಯ ಜೀವ ಉಳಿಸಲು ಇಸಿಟಿ ನೀಡಬಹುದಾಗಿದೆ ಎಂದು ಹೇಳಲಾಗಿದೆ.
ಈ ಎರಡು ನಿಯಮಗಳು ಒಂದಕ್ಕೊಂದು ತದ್ವಿರುದ್ಧವಾಗಿವೆ. ಆದ್ದರಿಂದ ಸೆಕ್ಷನ್ 94(3) ರದ್ದುಪಡಿಸಬೇಕು. ಜನ ಇಸಿಟಿಯನ್ನು ಶಾಕ್ ಟ್ರೀಟ್ಮೆಂಟ್ ಎಂದೇ ಕರೆಯುತ್ತಾರೆ. ಖಿನ್ನತೆ ಮತ್ತು ಆತ್ಮಹತ್ಯೆಗೆ ಪ್ರಯತ್ನಿಸಿ ವಿಫಲರಾದವರಿಗೆ ಈ ಚಿಕಿತ್ಸೆ ಪರಿಣಾಮಕಾರಿಯಾಗಿದ್ದು, ಒಂದೆರಡು ಬಾರಿ ಇಸಿಟಿ ನೀಡಿದರೆ ಗುಣಮುಖರಾಗುತ್ತಾರೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಇಸಿಟಿ ಒಳ್ಳೆಯದೋ-ಕೆಟ್ಟದೋ, ರೋಗಿಗಳಿಗೆ ನೀಡಬೇಕೋ ಅಥವಾ ಬೇಡವೋ ಎಂಬುದನ್ನು ನ್ಯಾಯಾಲಯ ನಿರ್ಧರಿಸಲಾಗದು. ನಾವು ಆ ಕ್ಷೇತ್ರದ ಪರಿಣಿತರೂ ಅಲ್ಲ. ಇಸಿಟಿ ಜೀವ ಉಳಿಸುವ ಚಿಕಿತ್ಸೆ ವಿಧಾನವಾಗಿದೆಯೇ ಎಂಬ ಬಗ್ಗೆ ತಜ್ಞರ ಸಮಿತಿ ಅಭಿಪ್ರಾಯ ಪಡೆಯಬೇಕಿದೆ ಎಂದು ತಿಳಿಸಿ, ವಿಚಾರಣೆ ಮುಂದೂಡಿತು.