ಬೆಂಗಳೂರು: 'ಕಾವೇರಿ ಕೂಗು' ಯೋಜನೆಯಡಿ ಗಿಡ ಬೆಳೆಸಲು ಸಾರ್ವಜನಿಕರಿಂದ ಹಣ ವಸೂಲಿಗೆ ಮುಂದಾಗಿರುವುದನ್ನ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
ಎ.ವಿ. ಅಮರನಾಥನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆದಿದೆ.
ಅರ್ಜಿದಾರರು ವಾದ ಮಾಡಿ ಕಾವೇರಿ ತಟದ ಬಳಿ 639 ಕಿ.ಮೀ ಉದ್ದಗಲಕ್ಕೂ 253 ಕೋಟಿ ಗಿಡ ನೆಡಲು ಇಶಾ ಫೌಂಡೇಶನ್ ಯೋಜನೆ ಹಾಕಿಕೊಂಡಿದೆ. ಇದಕ್ಕಾಗಿ ಸಾರ್ವಜನಿಕರಿಂದ 1 ಗಿಡಕ್ಕೆ 42 ರೂ. ಪಡೆಯಲು ಮುಂದಾಗಿದೆ. ಇದರ ಒಟ್ಟು ಮೊತ್ತ 10,626 ಕೋಟಿ ರೂ. ಆಗುತ್ತದೆ. ಇದೊಂದು ಆತಂಕಕಾರಿ ವಿಚಾರ ಎಂದು ತಿಳಿಸಿದರು.
ಅರ್ಜಿದಾರರ ವಾದ ಆಲಿಸಿದ ನ್ಯಾಯಾಲಯವು ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿಕೆ ಮಾಡಿದೆ.