ಬೆಂಗಳೂರು: ಕೇಂದ್ರ ಸರ್ಕಾರದ ಜೀತದಾಳು ಪುನರ್ವಸತಿ ಯೋಜನೆಯ ಎರಡು ಷರತ್ತುಗಳನ್ನು ರದ್ದುಪಡಿಸಬೇಕು, ಜೀತದಾಳುಗಳನ್ನು ಗುರುತಿಸಿ ಪುನರ್ವಸತಿ ಕಲ್ಪಿಸುವುದು ಮತ್ತು ಜೀತಕ್ಕೆ ದುಡಿಸಿಕೊಂಡವರ ವಿರುದ್ಧ ಕ್ರಮ ಕೈಗೊಳ್ಳಲು ನಿರ್ದಿಷ್ಟ ಮಾರ್ಗಸೂಚಿಗಳನ್ನು ವಜಾಗೊಳಿಸಬೇಕು ಹಾಗೂ ಜೀತ ಪದ್ದತಿ (ನಿರ್ಮೂಲನೆ) ಕಾಯ್ದೆ-1976ನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ಕೋರಿ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿ ಆದೇಶಿಸಿದೆ.
ಜೀತ ವಿಮುಕ್ತಿ-ಕರ್ನಾಟಕ ಇದರ ಸಂಯೋಜಕ ಡಾ. ಕಿರಣ ಕಮಲ ಪ್ರಸಾದ್ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ನೋಟಿಸ್ ಜಾರಿ ಮಾಡಿ ಆದೇಶ: ಅಲ್ಲದೇ, ಅರ್ಜಿಯಲ್ಲಿ ಮನವಿ ಮಾಡಲಾಗಿರುವ ವಿಷಯಕ್ಕೆ ಸಂಬಂಧಿಸಿದಂತೆ ಅರ್ಜಿದಾರರು ಸರ್ಕಾರ ಸೇರಿದಂತೆ ವಿವಿಧ ಸಕ್ಷಮ ಪ್ರಾಧಿಕಾರಿಗಳಿಗೆ ಸಲ್ಲಿಸಿರುವ ಮನವಿಗಳನ್ನು ಅರ್ಜಿಯೊಂದಿಗೆ ಅಡಕ ಮಾಡಬೇಕು ಎಂದು ಸೂಚಿಸಿತು. ಅಲ್ಲದೇ ಅರ್ಜಿ ಸಂಬಂಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಪ್ರಧಾನ ನಿರ್ದೇಶಕರು ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ನೋಟಿಸ್ ಜಾರಿ ಮಾಡಿ ಆದೇಶಿಸಿತು.
ಜೀತಪದ್ದತಿಯಿಂದ ಬಿಡುಗಡೆ ಹೊಂದಿದವರಿಗೆ ಕೇಂದ್ರ ಸರ್ಕಾರ ನೀಡುವ ಪರಿಹಾರ ಹಣದ ಬಾಕಿ ಮೊತ್ತ ಬಿಡುಗಡೆ ಮಾಡಬೇಕಾದರೆ ಜೀತದಾಳುಗಳ ಬಿಡುಗಡೆ ಪತ್ರ ಹಾಗೂ ಪ್ರಕರಣದ ಸಂಕ್ಷಿಪ್ತ ವಿಚಾರಣೆ ನಡೆಸಿದ ದಾಖಲೆ ಒದಗಿಸಬೇಕು ಮತ್ತು ರಾಜ್ಯ ಸರ್ಕಾರ ಜೀತದಾಳುಗಳ ಪುನರ್ವಸತಿ ಯೋಜನೆ ಸಲ್ಲಿಸಬೇಕು ಎಂಬ ಕೇಂದ್ರ ಸರ್ಕಾರದ ಜೀತದಾಳು ಪುನರ್ವಸತಿ ಯೋಜನೆ-2016ರ ಷರತ್ತುಗಳನ್ನು ರದ್ದುಪಡಿಸಬೇಕು.
ಜೀತ ಪದ್ದತಿ ನಿರ್ಮೂಲನೆ ಕಾಯ್ದೆ: ಇದೇ ಯೋಜನೆಯಡಿ ಜೀತದಾಳುಗಳ ಗುರುತಿಸುವಿಕೆ, ಅವರ ರಕ್ಷಣೆ ಹಾಗೂ ಜೀತಕ್ಕೆ ದುಡಿಸಿಕೊಂಡವರ ವಿರುದ್ಧ ಕ್ರಮ ಕೈಗೊಳ್ಳುವ ಸಂಬಂಧ ಸೂಚಿಸಲಾಗಿರುವ ಮಾರ್ಗಸೂಚಿಗಳನ್ನು ರದ್ದುಪಡಿಸಬೇಕು. ಜೊತೆಗೆ ಜೀತದಾಳುಗಳ ಕಲ್ಯಾಣ ಮತ್ತು ಅವರ ಆರ್ಥಿಕ ಹಿತಾಸಕ್ತಿ ಕಾಪಾಡಲು ಜಾರಿಗೆ ತಂದಿರುವ ಜೀತ ಪದ್ದತಿ (ನಿರ್ಮೂಲನೆ) ಕಾಯ್ದೆ-1976 ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ಕೇಂದ್ರ-ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಇದನ್ನೂ ಓದಿ: ಬೆಳ್ತಂಗಡಿ ವಿದ್ಯಾರ್ಥಿನಿ ಅತ್ಯಾಚಾರ, ಕೊಲೆ : ಆರೋಪಿ ಖುಲಾಸೆಗೊಳಿಸಿದ್ದ ಆದೇಶ ಪ್ರಶ್ನಿಸಿ ಸಿಬಿಐ ಹೈಕೋರ್ಟ್ಗೆ ಅರ್ಜಿ