ಬೆಂಗಳೂರು: ಮಂಡ್ಯದಲ್ಲಿ ಎತ್ತಿನಗಾಡಿ ಓಟದ ಸ್ಪರ್ಧೆ ನಡೆಸುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಇತ್ಯರ್ಥಪಡಿಸಿರುವ ಹೈಕೋರ್ಟ್, ಈ ಹಿಂದೆ ಸುಪ್ರೀಂಕೋರ್ಟ್ ನೀಡಿರುವ ಮಾರ್ಗಸೂಚಿಗಳ ಅನುಸಾರ ರೇಸ್ ನಡೆಸಬಹುದು ಎಂದು ಸೂಚಿಸುವ ಮೂಲಕ ಗ್ರಾಮೀಣ ಕ್ರೀಡೆಗೆ ಸಮ್ಮತಿಸಿದೆ.
ಮಂಡ್ಯದಲ್ಲಿ ಎತ್ತಿನ ಗಾಡಿ ಓಟದ ಸ್ಪರ್ಧೆ ನಡೆಸುವುದು ಸರಿಯಲ್ಲ, ಜಾನುವಾರುಗಳನ್ನು ಹಿಂಸಿಸಲಾಗುತ್ತಿದೆ ಎಂದು ಆಕ್ಷೇಪಿಸಿ ಮೈಸೂರಿನ ಪ್ರಾಣಿ ದಯಾ ಸಂಘಟನೆ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ನೇತೃತ್ವದ ವಿಭಾಗೀಯ ಪೀಠ, ಈಗಾಗಲೇ ಸುಪ್ರೀಂ ಕೋರ್ಟ್ ಕ್ರೀಡೆಗಳಲ್ಲಿ ಪ್ರಾಣಿಗಳನ್ನು ಬಳಸುವಾಗ ಅವುಗಳಿಗೆ ಹಿಂಸೆಯಾಗದಂತೆ ನಡೆಸಿಕೊಳ್ಳಬೇಕು ಎಂದು ಸೂಚಿಸಿದೆ.
ಅದೇ ರೀತಿ ರಾಜ್ಯ ಸರ್ಕಾರ ಇಂತಹ ಕ್ರೀಡೆಗಳಿಗೆ ಸಮ್ಮತಿಸುವ ಸಂಬಂಧ ನಿಯಮಗಳನ್ನು ಹೊಂದಿದೆ. ಹೀಗಾಗಿ ಅರ್ಜಿ ಸಂಬಂಧ ಹೆಚ್ಚಿನ ನಿರ್ದೇಶನಗಳನ್ನು ನೀಡುವ ಅಗತ್ಯವಿಲ್ಲ. ಇನ್ನು ಸರ್ಕಾರ ಕ್ರೀಡೆಗಳಿಗೆ ಸಮ್ಮತಿ ನೀಡಿದ ನಂತರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿದೆಯೇ ಎಂಬುದನ್ನು ಸ್ಪಷ್ಟಪಡಿಸಿಕೊಳ್ಳಬೇಕು. ಕ್ರೀಡೆ ನಡೆಸುವ ವೇಳೆ ಪ್ರಾಣಿಗಳಿಗೆ ಹಿಂಸಿಸಬಾರದು ಎಂದು ನಿರ್ದೇಶಿಸಿ ಅರ್ಜಿ ಇತ್ಯರ್ಥಪಡಿಸಿತು.