ಬೆಂಗಳೂರು : ಚಿಕ್ಕಬಳ್ಳಾಪುರ ನಗರಕ್ಕೆ ಹೊಂದಿಕೊಂಡಿರುವ ಆವಲಗುರ್ಕಿಯಲ್ಲಿ ಆದಿಯೋಗಿ ಪ್ರತಿಷ್ಠಾಪನೆಗೆ ಮಂಜೂರಾಗಿರುವ ಪ್ರದೇಶದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಸದೆ ಯತಾಸ್ಥಿತಿ ಕಾಯ್ದುಕೊಳ್ಳುವಂತೆ ಹೈಕೋರ್ಟ್ ನಿರ್ದೇಶಿಸಿದೆ. ಚಿಕ್ಕಬಳಾಪುರ ಕಸಬಾ ಹೋಬಳಿಯ ಚಂಬಳ್ಳಿಯ ನಿವಾಸಿ ಎಸ್, ಕ್ಯಾತಪ್ಪ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ. ಬಿ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿದೆ.
ಅಲ್ಲದೆ, ಪ್ರತಿವಾದಿಗಳಾದ ಕೇಂದ್ರ ಪರಿಸರ ಇಲಾಖೆ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಅರಣ್ಯ ಮತ್ತು ಪರಿಸರ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಗಣಿ ಮತ್ತು ಭೂಗರ್ಭ ಇಲಾಖೆಯ ನಿರ್ದೇಶಕರು ಮತ್ತು ಚಿಕ್ಕಬಳ್ಳಾಪುರ ಜಿಲ್ಲಾಡಳಿತಕ್ಕೆ ನೋಟಿಸ್ ಜಾರಿ ಮಾಡಿ ಆಕ್ಷೇಪಣೆ ಸಲ್ಲಿಸಲು ಸೂಚನೆ ನೀಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಎಂ. ಶಿವಪ್ರಕಾಶ್, ನಂದಿ ಗಿರಿಧಾಮದ ಬೆಟ್ಟ ಸೇರಿದಂತೆ ನರಸಿಂಗ ದೇವರ ಬೆಟ್ಟಗಳ ಸಾಲುಗಳು ಈ ಭಾಗದ ಜಲ ಮೂಲಗಳಾಗಿದೆ. ನರಸಿಂಹ ದೇವರ ವಲಯಕ್ಕೆ ಸೇರಿವೆ. ಈ ಬೆಟ್ಟಗಳ ಸಾಲಿನಲ್ಲಿ ಔಷಧೀಯ ಆಯುರ್ವೇದ ಸಸ್ಯಗಳು ದಟ್ಟವಾಗಿದೆ. ನಂದಿ ಬೆಟ್ಟಕ್ಕೆ ಹೊಂದಿಕೊಂಡಿರುವ ಸಾಲು ಬೆಟ್ಟಗಳ ಮಧ್ಯಭಾಗದಲ್ಲಿ ಇಶಾ ಫೌಂಡೇಶನ್ಗೆ ಸೇರಿದ ಇಶಾ ಪ್ರತಿಷ್ಠಾನಕ್ಕೆ ಅರಣ್ಯ ಸೇರಿದಂತೆ ವಿವಿಧ ಕಾಯ್ದೆಗಳನ್ನು ಉಲ್ಲಂಘಿಸಿ ವಾಣಿಜ್ಯ ಉದ್ದೇಶಕ್ಕಾಗಿ ಸರ್ಕಾರ ಜಮೀನು ಮಂಜೂರು ಮಾಡಿದೆ.
ಅಲ್ಲದೆ, ಈ ಪ್ರದೇಶವನ್ನು ಗ್ರೀನ್ ಬೆಲ್ಟ್ (ವಾಣಿಜ್ಯ ಉದ್ದೇಶಕ್ಕೆ ಬಳಸದಂತೆ) ಎಂದು ಘೋಷಣೆ ಮಾಡಲಾಗಿದ್ದು, ಸಾರ್ವಜನಿಕ ಉದ್ದೇಶಕ್ಕಾಗಿ ಬಳಕೆ ಮಾಡಿಕೊಳ್ಳಬೇಕಾಗಿದ್ದ ಸರ್ಕಾರದ ಎ-ಖರಾಬು ಮತ್ತು ಬಿ-ಕರಾಬು ಜಮೀನನ್ನು ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳುವುದಕ್ಕಾಗಿ ಜಿಲ್ಲಾಡಳಿತ ಹಸ್ತಾಂತರ ಮಾಡಿದೆ. ಇದೀಗ ಇಶಾ ಪ್ರತಿಷ್ಠಾನ ಪ್ರಸ್ತುತ ಪರಿಸರ ಸಸ್ಯ ಮತ್ತು ಪ್ರಾಣಿ ಸಂಕುಲಗಳಿಗೆ ಹಾನಿಯನ್ನುಂಟು ಮಾಡುತ್ತಿದೆ. ದೊಡ್ಡ ಯಂತ್ರೋಪಕರಣಗಳಿಂದ ಭೂಮಿಯನ್ನು ವಿರೂಪಗೊಳಿಸಲಾಗಿದೆ. ನರಸಿಂಹ ದೇವರ ಬೆಟ್ಟದ ವಲಯವನ್ನು ಸಂಪೂರ್ಣ ನಾಶ ಮಾಡುವುದಕ್ಕೆ ಮುಂದಾಗಿದೆ.
ಇದರಿಂದ ಜಲ ಮೂಲಗಳು ಸೇರಿದಂತೆ ಇಡೀ ಪರಿಸರ ವ್ಯವಸ್ಥೆಯನ್ನು ಅಸ್ತವ್ಯಸ್ಥಗೊಳ್ಳಲಿದೆ. ಈ ಭಾಗದಲ್ಲಿರುವ ಸುತ್ತ ಮುತ್ತಲ ಗ್ರಾಮಗಳಲ್ಲಿನ ಜನ ಜೀವನೋಪಾಯಕ್ಕಾಗಿ ಹೈನುಗಾರಿಕೆ ಮತ್ತು ಕೃಷಿಯನ್ನು ಅವಲಂಭಿಸಿದ್ದು, ಈ ಪ್ರದೇಶ ವಾಣಿಜ್ಯ ಉದ್ದೇಶಕ್ಕಾಗಿ ಬಳಕೆ ಮಾಡಿಕೊಂಡಲ್ಲಿ ಜನ ಜೀವನದ ಮೇಲೆ ದೊಡ್ಡ ಪರಿಣಾಮ ಬೀರಲಿದೆ. ಇದೇ ಬೆಟ್ಟಗಳ ಸಾಲಿನಲ್ಲಿಯೇ ಉತ್ತರ ಪಿನಾಕಿನಿ ಮತ್ತು ದಕ್ಷಿಣ ಪಿನಾಕಿನಿ ನದಿಗಳ ಮೂಲವಾಗಿವೆ. ಜತೆಗೆ, ಈ ಬೆಟ್ಟಗಳಲ್ಲಿನ ನೀರು ಸುತ್ತಮುತ್ತಲ ಸುಮಾರು 35ಕ್ಕೂ ಹೆಚ್ಚು ಹಳ್ಳಿಗಳ ಕೆರೆಗಳನ್ನು ತುಂಬಿಸುವ ಪ್ರಕ್ರಿಯೆ ನಡೆಯುತ್ತಿತ್ತು. ಇದೀಗ ವಾಣಿಜ್ಯ ಉದ್ದೇಶಕ್ಕಾಗಿ ನೀಡಿರುವುದರಿಂದ ಇದು ಪರಿಸರದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ವಾದಿಸಿದರು.
ಅಲ್ಲದೆ, ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ಬೆಂಬಲದಿಂದ ಸ್ಥಳೀಯ ನಿವಾಸಿಗಳಿಗೆ ವಿರೋಧದ ನಡುವೆ ಅರಣ್ಯ ಪ್ರದೇಶದಲ್ಲಿ ರಸ್ತೆ ನಿರ್ಮಾಣವಾಗಿದೆ. ಈ ಬಗ್ಗೆ ದೂರುಗಳು ಸಲ್ಲಿಕೆಯಾದರೂ ಈವರೆಗೂ ಯಾವುದೇ ದೂರು ದಾಖಲಿಸಿಕೊಂಡಿದ್ದಲ್ಲ. ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ವಿರೋಧ ವ್ಯಕ್ತಪಡಿಸಿದ ಸಂದರ್ಭದಲ್ಲಿ ಪೊಲೀಸರು ಮಹಿಳೆಯರು, ಗರ್ಭಿಣಿಯರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಹೀಗಾಗಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ವಿರುದ್ಧ ಕ್ರಮಕ್ಕೆ ಆದೇಶ ನೀಡಬೇಕು ಎಂದು ಅರ್ಜಿಯಲ್ಲಿ ಕೋರಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 135 ಅಂಗನವಾಡಿಗಳು, 150 ಪ್ರಾಥಮಿಕ ಶಾಲಾ ಕಟ್ಟಡಗಳಿದ್ದು, ಹಲವು ಶಿಥಿಲಾವಸ್ಥೆಯಲ್ಲಿವೆ. ಆರೋಗ್ಯ ಕ್ಷೇತ್ರದಲ್ಲಿ ಮೂಲಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದೆ. ಆದರೂ, ಖಾಸಗಿಯವರಿಗೆ ಸರ್ಕಾರಿ ಜಮೀನು ಮತ್ತು ಹಣದ ನೆರವು ನೀಡಲಾಗಿದೆ. ಅಲ್ಲದೆ, ರಾತ್ರೋ ರಾತ್ರಿ ಶಿವನ ವಿಗ್ರಹವನ್ನು ತಂದು ಅಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ. ಅಲ್ಲದೆ, ಕೆಲ ತಿಂಗಳುಗಳ ಹಿಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾಗಲಿಂಗ ಮತ್ತು ಹುಂಡಿಯನ್ನು ಪ್ರತಿಷ್ಠಾಪನೆ ಮಾಡಿದ್ದರು ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಶೀಘ್ರ ವಿಚಾರಣೆಗೆ ಮೆಮೋ ಸಲ್ಲಿಕೆ.. ಆವಲಗುರ್ಕಿಯಲ್ಲಿ ಇಶಾ ಪ್ರತಿಷ್ಠಾನದಿಂದ ಆದಿ ಯೋಗಿ ಪ್ರತಿಮೆ ಸ್ಥಳದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಹೈಕೋರ್ಟ್ ಸೂಚನೆ ನೀಡಿದ ಬೆನ್ನಲ್ಲೇ ಇಶಾ ಯೋಗ ಕೇಂದ್ರದಿಂದ ಅರ್ಜಿಯ ಶೀಘ್ರ ವಿಚಾರಣೆಗೆ ಮೆಮೋ ಸಲ್ಲಿಸಿದ್ದಾರೆ. ಕಲಾಪದ ನಡುವೆ ಇಶಾ ಯೋಗ ಕೇಂದ್ರದ ಪರ ವಕೀಲರು, ಚಿಕ್ಕಬಳ್ಳಾಪುರದ ಆವಲಗುರ್ಕಿಯಲ್ಲಿ ಇಶಾ ಪ್ರತಿಷ್ಠಾನದಿಂದ ಸಿದ್ಧಗೊಂಡಿರುವ ಆದಿ ಯೋಗ ಪ್ರತಿಮೆ ಲೋಕಾರ್ಪಣೆಗೆ ಸಿದ್ಧಗೊಂಡಿದೆ. ಇದಕ್ಕಾಗಿ ಜನವರಿ 15 ರಂದು ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜತೆಗೆ ದೊಡ್ಡ ಮಟ್ಟದ ಕಾರ್ಯಕ್ರಮ ನಡೆಯಬೇಕಾಗಿದೆ. ಆದರೆ, ಹೈಕೋರ್ಟ್ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ನಿರ್ದೇಶನ ನೀಡಿರುವುದರಿಂದ ಕಾರ್ಯಕ್ರಮಕ್ಕೆ ತೊಂದರೆಯಾಗಿದೆ. ಹೀಗಾಗಿ ಅರ್ಜಿಯ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು ಎಂದು ಮನವಿ ಮಾಡಿದರು. ಅರ್ಜಿದಾರರ ಪರ ವಕೀಲರ ಮನವಿಯನ್ನು ಪರಿಗಣಿಸಿದ ನ್ಯಾಯಪೀಠ ವಿಚಾರಣೆಯನ್ನು ಜ.13ಕ್ಕೆ ನಿಗದಿ ಪಡಿಸಿದೆ.
ಓದಿ: ಜೀವಂತ ಹಾವನ್ನು ಹಿಡಿದ ಸದ್ಗುರು.. ಅರಣ್ಯ ಸಂರಕ್ಷಣೆ ಕಾಯ್ದೆ ಉಲ್ಲಂಘನೆ ಆರೋಪಕ್ಕೆ ಇಶಾ ಫೌಂಡೇಶನ್ ಸ್ಪಷ್ಟನೆ