ಬೆಂಗಳೂರು: ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ಶಾಸಕ ಶಾಸಕ ರಿಜ್ವಾನ್ ಅರ್ಷದ್ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ. ತಮ್ಮ ವಿರುದ್ಧ ದಾಖಲಾಗಿದ್ದ ಎಫ್ಐಆರ್ ಮತ್ತು ಅಧೀನ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವಿಚಾರಣೆ ರದ್ದುಗೊಳಿಸುವಂತೆ ಕೋರಿ ರಿಜ್ವಾನ್ ಅರ್ಷದ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಸುನಿಲ್ ದತ್ ಯಾದವ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರರು ವಾದ ಮಂಡಿಸಿ ರಿಜ್ವಾನ್ ಅವರು ಧಾರ್ಮಿಕ ಆಧಾರದಲ್ಲಿ ಮತಯಾಚನೆ ಮಾಡಿಲ್ಲ. ಈ ಸಂಬಂಧ ಅರ್ಜಿದಾರರ ವಿರುದ್ಧ ಹೊರಿಸಲಾಗಿರುವ ಆರೋಪಗಳಲ್ಲಿ ದಾಖಲಾಗಿರುವ ದೂರಿನಲ್ಲಿ ಯಾವುದೇ ಸತ್ಯಾಂಶವಿಲ್ಲ. ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಮೇಲ್ನೋಟಕ್ಕೆ ಯಾವುದೇ ಸಾಕ್ಷ್ಯ ಕಂಡುಬಂದಿಲ್ಲ ಎಂದು ವಿವರಿಸಿದರು. ಈ ಅಂಶ ಪುರಸ್ಕರಿಸಿದ ನ್ಯಾಯಪೀಠ ಅರ್ಜಿ ಪುರಸ್ಕರಿಸಿದ್ದು, ಪ್ರಕರಣವನ್ನು ರದ್ದುಗೊಳಿಸಿದೆ.
ಪ್ರಕರಣದ ಹಿನ್ನೆಲೆ ಏನು?: ದೊಡ್ಡನೆಕ್ಕುಂದಿ ಗ್ರಾಮದ ಕೋದಂಡರಾಮ ವೃತ್ತದ ದೇವಾಲಯದಲ್ಲಿ 2019ರ ಏಪ್ರಿಲ್ 13ರಂದು ನಡೆಯುತ್ತಿದ್ದ ಶ್ರೀ ರಾಮನವಮಿ ಉತ್ಸವದ ವೇಳೆ ಅನುಮತಿ ಪಡೆಯದೇ ರಿಜ್ವಾನ್ ಅರ್ಷದ್ ಚುನಾವಣಾ ಪ್ರಚಾರದ ನಿಮಿತ್ತ ರೋಡ್ ಷೋ ನಡೆಸಿ ಮತಯಾಚನೆ ಮಾಡಿದ್ದಾರೆ‘ ಎಂದು ಆರೋಪಿಸಿ ಚುನಾವಣಾ ಅಧಿಕಾರಿಗಳು ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು.
ಇದನ್ನೂ ಓದಿ: ಬಿಬಿಎಂಪಿ ಚುನಾವಣೆ: ಮೀಸಲು ಅಧಿಸೂಚನೆ ರದ್ದುಪಡಿಸಿದ ಹೈಕೋರ್ಟ್