ಬೆಂಗಳೂರು: ಹಾಸನ ವಿಧಾನಸಭೆ ಕ್ಷೇತ್ರದ ಟಿಕೆಟ್ ಬಿಕ್ಕಟ್ಟು ಸಂಬಂಧ ಭಾನುವಾರ(ನಿನ್ನೆ) ತಡರಾತ್ರಿ ಪದ್ಮನಾಭನಗರದ ದೇವೇಗೌಡರ ನಿವಾಸದಲ್ಲಿ ಮಹತ್ವದ ಸಭೆ ನಡೆದಿದೆ. ಆದರೆ ಗೊಂದಲ ನಿವಾರಣೆ ಸಾಧ್ಯವಾಗಿಲ್ಲ. ಹೆಚ್.ಡಿ.ರೇವಣ್ಣ, ಭವಾನಿ ರೇವಣ್ಣ ಹಾಗೂ ಕುಮಾರಸ್ವಾಮಿ ಸಭೆಯಲ್ಲಿ ಪಾಲ್ಗೊಂಡಿದ್ದರು. ಸಭೆ ಆರಂಭವಾದ 15 ನಿಮಿಷದಲ್ಲೇ ಭವಾನಿ ರೇವಣ್ಣ ನಿರ್ಗಮಿಸಿದರು.
ಅಸಮಾಧಾನ ವ್ಯಕ್ತಪಡಿಸಿ ಭವಾನಿ ಹೊರ ನಡೆದರು ಎಂಬ ಅನುಮಾನ ಮೂಡಿದೆ. ಇದಾದ ಕೆಲವೇ ಹೊತ್ತಿನಲ್ಲೇ ಹೆಚ್.ಡಿ.ರೇವಣ್ಣ ಕೂಡ ಸಭೆಯಿಂದ ಹೋಗಿದ್ದಾರೆ. ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ಇಬ್ಬರೂ ನಿರಾಕರಿಸಿದರು. ಮೇಲ್ನೋಟಕ್ಕೆ ಹಾಸನ ಟಿಕೆಟ್ ವಿಚಾರದಲ್ಲಿ ಒಮ್ಮತ ಮೂಡಿಲ್ಲ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಹಾಸನ ಟಿಕೆಟ್ ಡಿಸಿಶನ್ ಪೆಂಡಿಂಗ್; ದೇವೇಗೌಡರ ನಿರ್ಧಾರದ ಕುತೂಹಲ
ಭವಾನಿ ರೇವಣ್ಣ ಹಾಸನ ಕ್ಷೇತ್ರದ ಟಿಕೆಟ್ಗಾಗಿ ಪಟ್ಟು ಹಿಡಿದಿದ್ದಾರೆ. ಹೆಚ್.ಡಿ.ರೇವಣ್ಣ ಕೂಡ ಪತ್ನಿ ಬೆಂಬಲಕ್ಕೆ ನಿಂತಿದ್ದಾರೆ. ಆದರೆ ಹೆಚ್.ಡಿ.ಕುಮಾರಸ್ವಾಮಿ ಅವರು ಸ್ವರೂಪ್ ಅವರನ್ನು ಕಣಕ್ಕಿಳಿಸಲು ಒಲವು ತೋರಿದ್ದಾರೆ. ಈ ನಿಟ್ಟಿನಲ್ಲಿ ಸಹೋದರರಾದ ಕುಮಾರಸ್ವಾಮಿ ಹಾಗೂ ರೇವಣ್ಣ ನಡುವೆ ಜಟಾಪಟಿಯೂ ನಡೆದಿತ್ತು. ಟಿಕೆಟ್ ಬಿಕ್ಕಟ್ಟು ಬಗೆಹರಿಯದ ಕಾರಣ ದೊಡ್ಡಗೌಡರು ಮಧ್ಯಪ್ರವೇಶ ಮಾಡಿದ್ದಾರೆ.
ಇದನ್ನೂ ಓದಿ: ದೇವೇಗೌಡರಿಗೆ ಜೆಡಿಎಸ್ ಅಧಿಕಾರಕ್ಕೆ ತರಬೇಕೆಂಬ ಹಂಬಲ: ಹೆಚ್ಡಿಕೆ
ಇಂದು(ಸೋಮವಾರ) ಜೆಡಿಎಸ್ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಮಾಡುವುದಾಗಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದರು. ಹಾಸನ ಅಭ್ಯರ್ಥಿಯನ್ನೂ ಸೇರಿಸಿ ಟಿಕೆಟ್ ಬಿಡುಗಡೆಯಾಗಲಿದೆ ಎಂದಿದ್ದರು. ಆದರೆ ಭಾನುವಾರ ರಾತ್ರಿ ದೇವೇಗೌಡರ ನಿವಾಸದಲ್ಲಿ ನಡೆದ ಸಭೆಯಲ್ಲಿ ಹಾಸನ ಟಿಕೆಟ್ ಸಂಬಂಧ ಒಮ್ಮತ ಮೂಡಿಲ್ಲ ಎನ್ನಲಾಗಿದೆ.
ಇಂದು ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಯಾಗುತ್ತಾ ಅಥವಾ ಹಾಸನ ಕ್ಷೇತ್ರ ಬಿಟ್ಟು ಉಳಿದ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುತ್ತೋ ಎಂಬ ಕುತೂಹಲವಿದೆ. ಹೆಚ್.ಡಿ.ರೇವಣ್ಣ-ಭವಾನಿ ದಂಪತಿ ಸಭೆಯಿಂದ ತೆರಳಿದ ಬಳಿಕವೂ ದೇವೇಗೌಡರು ಹೆಚ್.ಡಿ.ಕುಮಾರಸ್ವಾಮಿ ಜತೆ ಸಭೆ ಮುಂದುವರಿಸಿದರು. ಸಭೆಯಲ್ಲಿ ಭವಾನಿ ಹಾಸನ ಟಿಕೆಟ್ ಪಟ್ಟು ಸಡಿಲಿಸಿಲ್ಲ ಎನ್ನಲಾಗಿದೆ.
ದೇವೇಗೌಡರಿಂದ ಪರಿಹಾರ ನಿರೀಕ್ಷೆ: ಹಾಸನ ವಿಧಾನಸಭೆ ಕ್ಷೇತ್ರದ ಟಿಕೆಟ್ ವಿಚಾರ ಇನ್ನೂ ಗೊಂದಲದಲ್ಲೇ ಮುಂದುವರೆದಿದ್ದು, ಸಮಸ್ಯೆ ಅಂತಿಮವಾಗಿ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ಅಂಗಳಕ್ಕೆ ಬಂದು ನಿಂತಿದೆ. ಹಾಸನ ಮತ್ತು ಹೊಳೆನರಸೀಪುರ ಎರಡೂ ಕ್ಷೇತ್ರಗಳಲ್ಲಿ ಟಿಕೆಟ್‌ಗೆ ಹೆಚ್.ಡಿ.ರೇವಣ್ಣ ಕುಟುಂಬ ಒತ್ತಾಯಿಸುತ್ತಿದೆ. ಈ ಸಮಸ್ಯೆಯನ್ನು ಬಗೆಹರಿಸುವ ಕುರಿತು ಪಕ್ಷದಲ್ಲಿ ಚರ್ಚೆ ನಡೆಯುತ್ತಿದೆ. ಆದರೆ, ಕುಮಾರಸ್ವಾಮಿ ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ, ಕುಟುಂಬಕ್ಕಿಂತ ಪಕ್ಷದ ಕಾರ್ಯಕರ್ತರು ಮುಖ್ಯ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಹಾಸನ ಟಿಕೆಟ್: ದೇವೇಗೌಡರಿಂದ ತೀರ್ಮಾನ- ಹೆಚ್.ಡಿ.ಕುಮಾರಸ್ವಾಮಿ