ಬೆಂಗಳೂರು : ಪಕ್ಷದಲ್ಲಿನ ಆಂತರಿಕ ಸಮಸ್ಯೆ ಮತ್ತು ಹಾಸನ ಕ್ಷೇತ್ರದ ಟಿಕೆಟ್ ಗೊಂದಲ ಹಿನ್ನೆಲೆಯಲ್ಲಿ ಜೆಡಿಎಸ್ ಎರಡನೇ ಪಟ್ಟಿ ಬಿಡುಗಡೆ ಮುಂದೂಡಲಾಗಿದೆ. ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಸಂಜೆ ಎರಡನೇ ಪಟ್ಟಿ ಬಿಡುಗಡೆಗೆ ಸಂಬಂಧಿಸಿದಂತೆ ಚರ್ಚಿಸಲು ಸಭೆ ಕರೆಯಲಾಗಿತ್ತು. ಆದರೆ, ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರು ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ಇದ್ದ ಕಾರಣ ಅವರು ಬೆಂಗಳೂರಿಗೆ ಬರುವುದು ತಡವಾದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಯಾಗಿಲ್ಲ. ಈ ಕಾರಣ ಪಟ್ಟಿ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ. ಏ.5 ರಂದು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆ ಇದ್ದು, ಮೊದಲ ಪಟ್ಟಿಯಲ್ಲಿ 93 ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡಲಾಗಿದೆ.
ಹಾಸನ ಟಿಕೆಟ್ ಗೊಂದಲ : ಹಾಸನ ಕ್ಷೇತ್ರದ ಟಿಕೆಟ್‌ಗೆ ಸಂಬಂಧಿಸಿದಂತೆ ಮಾಜಿ ಪ್ರಧಾನಿಮಂತ್ರಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರ ಸಮ್ಮುಖದಲ್ಲಿ ನಿನ್ನೆ ಗೌಡರ ನಿವಾಸದಲ್ಲಿ ನಡೆದ ಸಂಧಾನ ಸಭೆ ವಿಫಲವಾಗಿದೆ. ಸಂಧಾನ ಸಭೆಯಲ್ಲಿ ದೇವೇಗೌಡರು ತಮ್ಮ ನಿಲುವು ವ್ಯಕ್ತಪಡಿಸಿದ ನಂತರ ಆಕ್ರೋಶಗೊಂಡ ಭವಾನಿ ಮತ್ತು ಹೆಚ್.ಡಿ.ರೇವಣ್ಣ ಮುನಿಸಿಕೊಂಡು ಸಭೆಯ ಅರ್ಧದಲ್ಲೇ ಪ್ರತ್ಯೇಕವಾಗಿ ನಿರ್ಗಮಿಸಿದ್ದರು. ಈ ಮಧ್ಯೆ ಗುರುವಾದ ಅಥವಾ ಶುಕ್ರವಾರ ಹಾಸನ ಜಿಲ್ಲೆಯ ಟಿಕೆಟ್ ಅಂತಿಮಗೊಳಿಸಲಾಗುವುದು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಕೆ.ಆರ್. ಪೇಟೆಯಲ್ಲಿ ತಿಳಿಸಿದ್ದಾರೆ.
ಗುರುವಾರ ಅಥವಾ ಶುಕ್ರವಾರ ಹಾಸನದ ಟಿಕೆಟ್ ಫೈನಲ್ : ಇಂದು ಕೆ.ಆರ್.ಪೇಟೆಯಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಮಾತನಾಡಿ, ನಿನ್ನೆಯ ಸಭೆಯಲ್ಲಿ ಹೆಚ್.ಡಿ ದೇವೇಗೌಡರು ಕೆಲವು ಮಾರ್ಗದರ್ಶನ ನೀಡಿದ್ದಾರೆ. ದೇವೇಗೌಡರು ದೆಹಲಿಗೆ ಹೋಗಿದ್ದು, ದೆಹಲಿಯಿಂದ ಬಂದ ನಂತರ ಸಭೆ ಕರೆಯಲು ಹೇಳಿದ್ದೇನೆ. ಪಕ್ಷದ ಪ್ರಮುಖರನ್ನು ಕರೆದು ಎಲ್ಲರ ಅಭಿಪ್ರಾಯ ಸಂಗ್ರಹಿಸುತ್ತೇವೆ. ಬಳಿಕ ಗುರುವಾರ ಅಥವಾ ಶುಕ್ರವಾರ ಹಾಸನದ ಟಿಕೆಟ್ ಫೈನಲ್ ಮಾಡುತ್ತೇನೆ ಎಂದು ಹೇಳಿದರು.ಬಳಿಕ ಇವತ್ತು ಎರಡನೇ ಹಂತದ ಟಿಕೆಟ್‌ನ್ನು ಘೋಷಣೆ ಮಾಡಬೇಕು. ಅದರಿಂದ ಬೆಂಗಳೂರಿಗೆ ಹೋಗಿ ಚರ್ಚೆ ಮಾಡುತ್ತೇವೆ. ಚರ್ಚೆ ಮಾಡಿ ಎರಡನೇ ಹಂತದ ಟಿಕೆಟ್ ಫೈನಲ್ ಮಾಡುತ್ತೇವೆ ಎಂದರು.
ಇನ್ನೂ ಸಚಿವ ನಾರಾಯಣಗೌಡ ಹೇಳಿಕೆ ವಿಚಾರವಾಗಿ ಮಾತನಾಡಿ ಆ ವ್ಯಕ್ತಿಯ ಹೇಳಿಕೆಗೆ ಏನು ನೈತಿಕತೆ ಇದೆ?. ಯಾವ ನೈತಿಕತೆ ಇಟ್ಟುಕೊಂಡು ಆ ವ್ಯಕ್ತಿ ಬಗ್ಗೆ ಚರ್ಚೆ ಮಾಡಲಿ. ಈ ವ್ಯಕ್ತಿ ಮೊದಲು ಎಲ್ಲಿದ್ದ. ಈ ವ್ಯಕ್ತಿಯನ್ನು ಜನರು ಎಲ್ಲಿಂದ ಗುರುತಿಸುತ್ತಾರೆ. ಇವತ್ತು ಅವರು ಬೆಳೆಯಬೇಕಾದರೆ ಹೇಗೆ ಬೆಳೆದರು. ಈಗ ಅವರು ಪಕ್ಷ ಯಾಕೆ ಬಿಟ್ಟು ಹೋದರು. ಪಕ್ಷ ಬಿಡುವ ವಾರದ ಮುಂಚೆ ನನಗೆ ಏನ್ ಟೋಪಿ ಹಾಕಿ ಹೋದರು. ಇಂತಹ ವ್ಯಕ್ತಿಗಳ ಬಗ್ಗೆ ಚರ್ಚೆ ಮಾಡೋಕೆ ಆಗಲ್ಲ. ಜನರೇ ಆತನ ಬಗ್ಗೆ ತೀರ್ಮಾನ ಮಾಡುತ್ತಾರೆ. 13ನೇ ತಾರೀಖು ಎಲ್ಲವೂ ಗೊತ್ತಾಗುತ್ತದೆ ಎಂದು ನಾರಾಯಣಗೌಡ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಸಿ.ಟಿ.ರವಿ, ಚಲುವರಾಯಸ್ವಾಮಿ ಕಾರ್ಡ್ ಆಡುವ ಫೋಟೋ ವೈರಲ್ ವಿಚಾರ : ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮತ್ತು ಚಲುವರಾಯಸ್ವಾಮಿ ಅವರಿಬ್ಬರು ಸ್ನೇಹಿತರು ಒಟ್ಟಿಗೆ ಸೇರುತ್ತಾ ಇರುತ್ತಾರೆ. ಮಂಡ್ಯ ಜಿಲ್ಲೆಯ ರಾಜಕೀಯದಲ್ಲಿ ಕಾಂಗ್ರೆಸ್ ಬಿಜೆಪಿ ಕಳೆದ ಚುನಾವಣೆಯಿಂದ ಒಟ್ಟಿಗೆ ಇದ್ದು, ಕಳೆದ ಲೋಕಸಭಾ ಚುನಾವಣೆಯಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಅದೇ ರೀತಿ ಈಗಲೂ ಅವರ ಸಂಬಂಧ ಮುಂದುವರೆದಿದೆ. ಮುಂದೆ ಅಸೆಂಬ್ಲಿ ಚುನಾವಣೆಗೆ ಬಿಜೆಪಿ ಕಾಂಗ್ರೆಸ್ ಹೇಗೆ ಹೋಗಬೇಕು ಎಂದು ಮಾತಾಡಲು ಅವರು ಸೇರಿದ್ದಾರೆ ಎಂದು ವ್ಯಂಗ್ಯವಾಗಿ ಹೇಳಿದರು.
ಇದನ್ನೂ ಓದಿ : ಇಂದು 40-50 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಸಿ ಎಂ ಇಬ್ರಾಹಿಂ