ಬೆಂಗಳೂರು : ರಾಜ್ಯದಲ್ಲೇ ಸೆನ್ಸೇಷನ್ ಸೃಷ್ಟಿಸಿದ್ದ ಶಿವಮೊಗ್ಗದ ಹಿಂದೂ ಕಾರ್ಯಕರ್ತ ಹರ್ಷನ ಕೊಲೆ ಹತ್ಯೆ ಪ್ರಕರಣದ ತನಿಖೆ ಎನ್ಐಎದಿಂದ ಚುರುಕುಗೊಂಡಿದೆ. ಪ್ರಾಥಮಿಕ ತನಿಖೆ ಕೈಗೊಂಡು ಎಫ್ಐಆರ್ ಮಾಡಿಕೊಂಡಿರೋ ರಾಷ್ಟ್ರೀಯ ತನಿಖಾದಳ (ಎನ್ಐಎ) ಕೆಲ ಅಂಶಗಳನ್ನ ಎಫ್ಐಆರ್‌ನಲ್ಲಿ ಉಲ್ಲೇಖಿಸಿದೆ.
ಫೆಬ್ರುವರಿ 20ರಂದು ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತ ಹರ್ಷನನ್ನ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಕೊಲೆ ಆರೋಪಿಗಳನ್ನ ಬಂಧಿಸಿದ್ದ ಶಿವಮೊಗ್ಗ ಪೊಲೀಸರು ತೀವ್ರ ತನಿಖೆ ನಡೆಸಿದ್ದರು. ಈ ನಡುವೆ ಆರೋಪಿಗಳು ಮತ್ತು ಹರ್ಷನ ಜಗಳ ಕೊಲೆಗೆ ಕಾರಣ ಎನ್ನಲಾಗಿತ್ತು. ಮತ್ತೊಂದೆಡೆ ಹರ್ಷನ ಕೆಲ ಫೇಸ್‌ಬುಕ್ ಪೋಸ್ಟ್‌ಗಳು ಕೊಲೆಗೆ ಕಾರಣ ಅಂತಾ ಸಹ ಕೆಲವರು ಹೇಳಿದ್ದರು.
ಆದರೆ, ಶಿವಮೊಗ್ಗದಲ್ಲಿ ಕೋಮುಗಲಭೆ ಎಬ್ಬಿಸಲೆಂದೇ ಆರೋಪಿಗಳು ಹರ್ಷನ ಕೊಲೆ ಮಾಡಿದ್ದಾರೆ, ಸಾರ್ವಜನಿಕರಿಗೆ ಭಯ ಹುಟ್ಟಿಸೋದು, ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಉದ್ದೇಶದಿಂದ ಕೊಲೆ ಮಾಡಲಾಗಿದೆ ಎಂಬುದನ್ನ ಪ್ರಾಥಮಿಕ ತನಿಖೆ ಬಳಿಕ ಎನ್ಐಎ ದಾಖಲಿಸಿರುವ ಎಫ್ಐಆರ್‌ನಲ್ಲಿ ಬಹಿರಂಗಗೊಳಿಸಿದೆ.
ಇದನ್ನೂ ಓದಿ : ಹರ್ಷ ಕೊಲೆ ಪ್ರಕರಣ : ಎನ್ಐಎ ತಂಡ ಶಿವಮೊಗ್ಗಕ್ಕೆ ಭೇಟಿ, ತನಿಖೆ ಚುರುಕು