ಬೆಂಗಳೂರು: ಗಂಡನಿಗೆ ಹೆಂಡತಿಗಿಂತಲೂ ಅನ್ಯ ಯುವತಿಯರೊಂದಿಗೆ ರೀಲ್ಸ್ ಮಾಡುವುದೇ ಮುಖ್ಯ. ಮೈದುನ ಮನೆಯ ಟಿವಿಗೆ ಇಂಟರ್ನೆಟ್ ಕನೆಕ್ಟ್ ಮಾಡಿಕೊಂಡು ಅಶ್ಲೀಲ ವಿಡಿಯೋಗಳನ್ನ ವೀಕ್ಷಿಸುತ್ತಾನೆ. ಎಲ್ಲವನ್ನು ಪ್ರಶ್ನಿಸಬೇಕಾದ ಅತ್ತೆ ಮಾವ ಮಾನಸಿಕ, ದೈಹಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿ ಗೃಹಿಣಿಯೊಬ್ಬರು ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. 25 ವರ್ಷದ ಗೃಹಿಣಿಯ ನೀಡಿದ ದೂರಿನ ಅನ್ವಯ ಆಕೆಯ ಪತಿ ಪ್ರಮೋದ್ ಕುಮಾರ್, ಮೈದುನ, ಅತ್ತೆ ಹಾಗೂ ಮಾವನ ವಿರುದ್ಧ ಪೂರ್ವ ವಿಭಾಗದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದ ವಿವರ: ದೂರುದಾರ ಮಹಿಳೆಗೆ ಕಳೆದ ವರ್ಷ ಮೇ ತಿಂಗಳಿನಲ್ಲಿ ಪ್ರಮೋದ್ ಕುಮಾರ್ ಎಂಬಾತನೊಂದಿಗೆ ವಿವಾಹವಾಗಿತ್ತು. ಮದುವೆಯಾದಾಗಿನಿಂದ ಪತ್ನಿಯೊಂದಿಗೆ ದೈಹಿಕ ಸಂಪರ್ಕ ಹೊಂದದ ಪತಿ ಅನ್ಯ ಯುವತಿಯರೊಂದಿಗೆ ರೀಲ್ಸ್ ವಿಡಿಯೋ ಮಾಡುತ್ತಿರುತ್ತಾನೆ ಎಂದು ಆರೋಪಿಸಲಾಗಿದೆ. ಇತ್ತ ಮನೆಯಲ್ಲಿ ಎಲ್ಲರೆದುರು ಟಿವಿಯಲ್ಲಿ ಅಶ್ಲೀಲ ವಿಡಿಯೋಗಳನ್ನ ವೀಕ್ಷಿಸುವ ಆತನ ಸಹೋದರ ತನ್ನನ್ನು ಮುಟ್ಟಲು ಪ್ರಯತ್ನಿಸುತ್ತಾನೆ. ಪ್ರಶ್ನಿಸಿದರೆ ತನ್ನೊಂದಿಗೆ ಅಸಭ್ಯವಾಗಿ ವರ್ತಿಸಲು ಯತ್ನಿಸುತ್ತಾನೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮದುವೆಗೆ 30 ಲಕ್ಷ ರೂ. ಖರ್ಚು ಮಾಡಿದ್ದ ದೂರುದಾರಳ ಪೋಷಕರು ವರದಕ್ಷಿಣೆಯಾಗಿ ಉಂಗುರ, ಬ್ರಾಸ್ಲೇಟ್ ಸೇರಿದಂತೆ ಚಿನ್ನಾಭರಣ ನೀಡಿದ್ದರಂತೆ. ಸ್ವಂತ ಮನೆಯಿದೆ ಎಂದು ನಂಬಿಸಿದ್ದ ಆರೋಪಿಯ ಕುಟುಂಬದವರು ನಂತರ ಮನೆ ಕಟ್ಟಿಸಬೇಕು, ನಿನ್ನ ತವರು ಮನೆಯಿಂದ ಹಣ ತಂದುಕೊಡು ಎಂದು ಒತ್ತಾಯಿಸುತ್ತಿದ್ದರಂತೆ. ಸಾಲದ್ದಕ್ಕೆ ಅತ್ತೆ ಮಾವ ಊಟ, ತಿಂಡಿ ನೀಡದೇ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಮಹಿಳೆ ಆರೋಪ ಮಾಡಿದ್ದಾರೆ. ಅಲ್ಲದೇ ಗಂಡನ ಮನೆಯಲ್ಲಿ ಅನುಭವಿಸುತ್ತಿರುವ ನೋವನ್ನು ತನ್ನ ಪೋಷಕರಿಗೆ ಹೇಳಿದ್ದಕ್ಕೆ ಯಾಕೆ ಹೇಳಿದೆ ಎಂದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಲೈಂಗಿಕ ದೌರ್ಜನ್ಯ..ಟೆಕ್ಕಿ ಬಂಧನ: ಇನ್ಸ್ಟಾಗ್ರಾಮ್ ಮುಖಾಂತರ ಕೆಲಸ ಕೊಡಿಸುವುದಾಗಿ ನಂಬಿಸಿ ಯುವತಿಯರನ್ನು ಹೋಟೆಲ್ ರೂಮ್ಗಳಿಗೆ ಕರೆಸಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಟೆಕ್ಕಿಯನ್ನು(ಸಾಫ್ಟ್‌ವೇರ್ ಇಂಜಿನಿಯರ್) ಬೆಂಗಳೂರು ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. ಆಂಧ್ರಪ್ರದೇಶ ಮೂಲದ ದಿಲ್ಲಿ ಪ್ರಸಾದ್ ಬಂಧಿತನಾಗಿದ್ದು, ಕೋರಮಂಗಲದಲ್ಲಿ ವಾಸವಾಗಿದ್ದ. ಈತ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಸುಲಭವಾಗಿ ಹಣ ಸಂಪಾದಿಸಲು ಅಡ್ಡದಾರಿ ತುಳಿದು ಇನ್ಸ್ಟಾಗ್ರಾಮ್‌ನಲ್ಲಿ ಮೋನಿಕಾ, ಮ್ಯಾನೇಜರ್ ಎಂಬುದೂ ಸೇರಿದಂತೆ ಐದಕ್ಕಿಂತ ಹೆಚ್ಚು ನಕಲಿ ಖಾತೆಗಳನ್ನು ಸೃಷ್ಟಿಸಿ ಯುವತಿ ಹಾಗೂ ಮಹಿಳೆಯರೊಂದಿಗೆ ಚಾಟ್ ಮಾಡುತ್ತಿದ್ದ. ತಾನು ಎಂಎನ್ಸಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ನನಗೆ ಗೊತ್ತಿರುವ ಕಂಪನಿಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸುತ್ತಿದ್ದ. ಈ ಮಾತು ನಂಬಿ ಯುವತಿಯರು ಆರೋಪಿ ಹೇಳಿದ ಜಾಗಕ್ಕೆ ಬರುತ್ತಿದ್ದರು.
ಪೂರ್ವಸಂಚಿನಂತೆ ಮಡಿವಾಳದ ಓಯೊ ಹೋಟೆಲ್ ರೂಮ್ ಬುಕ್ ಮಾಡಿ ಅಲ್ಲಿ ಸಂದರ್ಶನ ನಡೆಯಲಿದೆ ಎಂದು ಒಳಗೆ ಕರೆಯಿಸಿಕೊಳ್ಳುತ್ತಿದ್ದ. ಆದರೆ ಒಳಗೆ ನೋಡಿದಾಗ ಚಿತ್ರಣವೇ ಬದಲು. ಸಂದರ್ಶನ ನಡೆಸುವ ಬದಲು ಲೈಂಗಿಕವಾಗಿ ಸಹಕರಿಸಿದರೆ ಒಳ್ಳೆಯ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ಆರೋಪಿ ಪುಸಲಾಯಿಸುತ್ತಿದ್ದ. ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ಕ್ರಿಯೆ ನಡೆಸಿ ಅದನ್ನು ರಹಸ್ಯವಾಗಿ ಸೆರೆಹಿಡಿದುಕೊಳ್ಳುತ್ತಿದ್ದ. ಅದೇ ವಿಡಿಯೋ ಇಟ್ಟುಕೊಂಡು ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ. ಇದೇ ರೀತಿ ಸುಮಾರು 10ಕ್ಕಿಂತ ಹೆಚ್ಚು ಯುವತಿಯರನ್ನು ಕೆಲಸ ಕೊಡಿಸುವುದಾಗಿ ನಂಬಿಸಿ ದುರ್ಬಳಕೆ ಮಾಡಿಕೊಂಡಿದ್ದಾನೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದ್ದರು.
ಇದನ್ನೂ ಓದಿ: ಇನ್ಸ್ಟಾಗ್ರಾಮ್‌ನಲ್ಲಿ ಉದ್ಯೋಗದ ಆಸೆ ತೋರಿಸಿ ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯ; ಟೆಕ್ಕಿ ಅರೆಸ್ಟ್