ಬೆಂಗಳೂರು: ಗುತ್ತಿಗೆದಾರರ ನಿವಾಸದಲ್ಲಿ ಪತ್ತೆಯಾದ ಕೋಟಿ ಕೋಟಿ ನಗದು ಹಣ ಪ್ರಕರಣವನ್ನು ಇಡಿ ಮತ್ತು ಸಿಬಿಐ ತನಿಖೆಗೆ ವಹಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಆಗ್ರಹಿಸಿದ್ದಾರೆ.
ಡಾಲರ್ಸ್ ಕಾಲೊನಿಯಲ್ಲಿರುವ ಖಾಸಗಿ ನಿವಾಸ ದವಳಗಿರಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಐಟಿ ದಾಳಿಯಲ್ಲಿ ಹಣ ಸಿಕ್ಕಿದ್ದ ಪ್ರಕರಣದಲ್ಲಿ ತನಿಖೆ ಬಳಿಕ ಹಣದ ಮೂಲ ಗೊತ್ತಾಗಲಿದೆ. ಚುನಾವಣೆಗೆ ಹಣ ಸಂಗ್ರಹ ಮಾಡಿರೋದು ನಿಜ ಅಂತ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಆರೋಪಿಸಿದ್ದಾರೆ. ಕಾಂಗ್ರೆಸ್ನವರು ಚುನಾವಣೆಗೆ ಹಣ ಸಂಗ್ರಹ ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ. ಇಡಿ ಮತ್ತು ಸಿಬಿಐ ತನಿಖೆ ಮಾಡಿದರೆ ವಾಸ್ತವಾಂಶ ಹೊರಗೆ ಬರಲಿದೆ. ಹಾಗಾಗಿ ನಾನೂ ಕೂಡ ಇಡಿ ತನಿಖೆಗೆ ಆಗ್ರಹ ಮಾಡುತ್ತೇನೆ ಎಂದರು.
ರಾಯಚೂರು ಜಿಲ್ಲೆ ಪ್ರವಾಸ ಮುಗಿಸಿ ಬರುತ್ತಿದ್ದೇನೆ. ಎಲ್ಲೆಡೆ ವಿದ್ಯುತ್ ಕಣ್ಣಾಮುಚ್ಚಾಲೆ ಇದೆ. ಪಂಪ್ ಸೆಟ್ ಇರುವ ರೈತರು ಸಂಕಷ್ಟದಲ್ಲಿದ್ದಾರೆ. ಮತ್ತೊಂದು ಕಡೆ ಬೋರ್ವೆಲ್ನಿಂದ ಅಲ್ಪ ಸ್ವಲ್ಪ ಬೆಳೆ ಉಳಿಸೋಣ ಎನ್ನುವ ಚಿಂತನೆಯಲ್ಲಿದ್ದಾರೆ. ಆದರೆ, ವಿದ್ಯುತ್ ಪೂರೈಕೆಯಾಗದೇ ಸಂಪೂರ್ಣ ಬೆಳೆ ನಾಶವಾಗಿದೆ. ಸರ್ಕಾರ ಕೂಡಲೇ ಕೊನೇ ಪಕ್ಷ ಬೋರ್ವೆಲ್ಗಳಿಗೆ ವಿದ್ಯುತ್ ಕೊಡುವ ಕೆಲಸ ಮಾಡಬೇಕು. ಇದರಿಂದ ರೈತ ಉಳಿಯಬಹುದು. ಆ ದಿಕ್ಕಿನಲ್ಲಿ ಸರ್ಕಾರ ಯೋಚನೆ ಮಾಡಬೇಕು ಎಂದು ಬಿಎಸ್ವೈ ಒತ್ತಾಯಿಸಿದರು.
ವಿದ್ಯುತ್ ದರ ಹೆಚ್ಚಿಸಿ ಏನು ಮಾಡುತ್ತಾರೆ. ಇಷ್ಟಾದರೂ ಸರ್ಕಾರಕ್ಕೆ ಬುದ್ಧಿ ಬಂದಿಲ್ಲ. ಮತ್ತೆ ವಿದ್ಯುತ್ ದರ ಹೆಚ್ಚಳ ಮಾಡುವ ಮೂಲಕ ರೈತರಿಗೆ, ಜನ ಸಾಮಾನ್ಯರಿಗೆ ಸಮಸ್ಯೆ ಮಾಡುತ್ತಿದ್ದಾರೆ. ಪ್ರಾರಂಭದಲ್ಲಿ ಅನೇಕ ಕಾರ್ಯಕ್ರಮ ಘೋಷಣೆ ಮಾಡಿ ಒಂದೊಂದೇ ಬರೆ ಎಳೆಯುವ ಕೆಲಸ ಮಾಡುತ್ತಿದೆ. ಪ್ರಾರಂಭದಲ್ಲಿ ಉಚಿತ ಯೋಜನೆ ಘೋಷಣೆ ಮಾಡಿ ಈಗ ಬೇರೆ ಬೇರೆ ರೀತಿ ಸುಲಿಗೆ ಮಾಡಿ ಹಣ ವಸೂಲಿ ಮಾಡುತ್ತಿದೆ. ಇದು ಖಂಡನೀಯ. ಇದನ್ನು ಖಂಡಿಸುತ್ತೇನೆ. ವಿದ್ಯುತ್ ದರ ಹೆಚ್ಚಳ ಮಾಡದೇ ವಾಪಸ್ ಪಡೆಯಬೇಕು ಎಂದರು.
ಭೀಕರ ಬರಗಾಲ ಅಂತ ಯಾವುದೇ ಕಾಮಗಾರಿ ನಡೆಯುತ್ತಿಲ್ಲ. ಸರ್ಕಾರ ಗ್ಯಾರಂಟಿ ಯೋಜನೆ ಘೋಷಣೆ ಮಾಡಿ ಒಂದು ರೀತಿ ದಿವಾಳಿಗೆ ಬಂದಿದೆ. ಯಾವುದೇ ಅಭಿವೃದ್ಧಿ ಕಾರ್ಯಕ್ಕೆ ಹಣ ಬಿಡುಗಡೆ ಮಾಡಿಲ್ಲ. ಈಗಲಾದರೂ ಆದ್ಯತೆ ಮೇಲೆ ಹಣ ಬಿಡುಗಡೆ ಮಾಡಬೇಕು. ಎಲ್ಲಾ ಕೆಲಸ ನಿಂತಿದ್ದು, ಕಾಮಗಾರಿ ಪ್ರಾರಂಭ ಮಾಡಬೇಕು ಎಂದು ಆಗ್ರಹಿಸಿದರು.
ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕೊಡುವಲ್ಲಿ ಕಾಂಗ್ರೆಸ್ ಮೌನ ವಿಚಾರದ ಕುರಿತು ಪ್ರತಿಕ್ರಿಯೆಗೆ ನಿರಾಕರಿಸಿದ ಯಡಿಯೂರಪ್ಪ, ನಾನು ಆ ಬಗ್ಗೆ ಯಾವುದೇ ಚರ್ಚೆ ಮಾಡೋದಕ್ಕೆ ಇಷ್ಟ ಪಡೋದಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೆ ಐಟಿಯಿಂದ ಭರ್ಜರಿ ಬೇಟೆ.. ಬಿಲ್ಡರ್ ಅಪಾರ್ಟ್ಮೆಂಟ್ನಲ್ಲಿ 40 ಕೋಟಿ ಹಣ ಪತ್ತೆ