ಬೆಂಗಳೂರು : ನಮಗ್ಯಾಕೆ ಟಿಕೆಟ್ ಕೊಡಲ್ಲ? ನಾವು ಗಂಡಸರಲ್ವಾ? ಎಂದು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಮಾಜಿ ಸಚಿವ ಮನೋಹರ್ ತಹಶೀಲ್ದಾರ್ ಆಕ್ರೋಶ ಹೊರ ಹಾಕಿದ್ದಾರೆ. ಸಿಎಂ ಉದಾಸಿ ನಿಧನದಿಂದ ತೆರವಾಗಿರುವ ಹಾನಗಲ್ ವಿಧಾನಸಭೆ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾಗಿದೆ. ಕಾಂಗ್ರೆಸ್ನಿಂದ ಟಿಕೆಟ್ ಆಕಾಂಕ್ಷಿಯಾಗಿರುವ ಮನೋಹರ್ ತಹಶೀಲ್ದಾರ್ ಬೆಂಗಳೂರಿಗೆ ಆಗಮಿಸಿದ್ದಾರೆ.
ಈ ವೇಳೆ ಮಾತನಾಡಿರುವ ಅವರು, ನಮಗ್ಯಾಕೆ ಟಿಕೆಟ್ ಕೊಡಲ್ಲ..? ನಮಗೆ ಯೋಗ್ಯತೆ ಇಲ್ವಾ..? ನಮಗೆ ಅರ್ಹತೆ ಇಲ್ವಾ..? ನಮಗೆ ಗಂಡಸ್ತನ ಇಲ್ವಾ..? ಎಂದು ಆಕ್ರೋಶ ಹೊರ ಹಾಕಿದ್ದಾರೆ. ಯಾವುದೇ ಕಾರಣಕ್ಕೂ ಶ್ರೀನಿವಾಸ್ ಮಾನೆಗೆ ಟಿಕೆಟ್ ಕೊಡಬಾರದು.
ಮಾನೆಗೆ ಟಿಕೆಟ್ ಕೊಟ್ಟರೆ ಚುನಾವಣೆಗೆ ಕೆಲಸ ಮಾಡಲ್ಲ. ಮಾನೆ ಹಾನಗಲ್‌ನವರಲ್ಲ, ಹೊರಗಿನವರು. ಸ್ಥಳೀಯರಲ್ಲಿ ಯಾರಿಗಾದರೂ ಟಿಕೆಟ್ ಕೊಡಲಿ, ಅವರಿಗಾಗಿ ಕೆಲಸ ಮಾಡುತ್ತೇನೆ. ಆದರೆ, ಮಾನೆಗೆ ಕೊಟ್ಟರೆ ಕೆಲಸ ಮಾಡಲ್ಲ ಎಂದಿದ್ದಾರೆ.
ನಾನೇ ವಿನ್ನಿಂಗ್ ಕ್ಯಾಂಡಿಡೇಟ್, ನನಗೆ ಟಿಕೆಟ್ ಕೊಡಬೇಕು. ಇದನ್ನ ಸಿದ್ದರಾಮಯ್ಯ, ಡಿಕೆಶಿಗೂ ಹೇಳ್ತೀನಿ. ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ಕೊಡುವ ಕಾರ್ಯ ಕಾಂಗ್ರೆಸ್ನಿಂದಾದರೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಗೆಲುವಿನ ಓಟ ಮುಂದುವರಿಸಲು ಸಹಕಾರಿಯಾಗಲಿದೆ ಎಂದಿದ್ದಾರೆ.
ಗೆದ್ದರೂ ಕಾಂಗ್ರೆಸ್ನಿಂದ ಟಿಕೆಟ್ ನಿರಾಕರಣೆ 2008ರಲ್ಲಿ ಉದಾಸಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದ ಮನೋಹರ್ ತಹಶೀಲ್ದಾರ್, 2013ರಲ್ಲಿ ಉದಾಸಿ ವಿರುದ್ಧವೇ ಗೆಲುವು ಸಾಧಿಸಿ ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಆದರೆ, 2018ರ ವಿಧಾನಸಭೆ ಚುನಾವಣೆಯಲ್ಲಿ ಮನೋಹರ್ ಬದಲು ಶ್ರೀನಿವಾಸ್ ಮಾನೆಗೆ ಟಿಕೆಟ್ ನೀಡಲಾಗಿತ್ತು.
ಹಾಲಿ ಶಾಸಕರಾಗಿದ್ದರು ತಮಗೆ ಟಿಕೆಟ್ ನಿರಾಕರಿಸಿದಕ್ಕೆ ಬೇಸರಗೊಂಡಿದ್ದ ಮನೋಹರ್ ಪಕ್ಷ ಸಂಘಟನೆಗೆ ಒತ್ತು ಕೊಟ್ಟಿದ್ದರು. ಇದೀಗ ಉದಾಸಿ ನಿಧನದಿಂದ ತೆರವಾಗಿರುವ ಕ್ಷೇತ್ರಕ್ಕೆ ತಮಗೆ ಟಿಕೆಟ್ ನೀಡುವಂತೆ ಬಲವಾದ ಲಾಬಿ ನಡೆಸಿದ್ದಾರೆ. ಇಂದು ಬೆಂಗಳೂರಿಗೆ ಆಗಮಿಸಿರುವ ಅವರು, ರಾಜ್ಯ ಕಾಂಗ್ರೆಸ್ ನಾಯಕರನ್ನು ಭೇಟಿಯಾಗಿ ಶ್ರೀನಿವಾಸ್ ಮಾನೆಗಿಂತ ತಾವೇ ಸಮರ್ಥ ಅಭ್ಯರ್ಥಿ ಎಂಬುದನ್ನು ಹೇಳಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ.
ಓದಿ: ಮೈಸೂರು: ಸೊಸೆಗೆ ಚಾಕು ಚುಚ್ಚಿದ ಅತ್ತೆ.. ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ