ಬೆಂಗಳೂರು: ಕರ್ತವ್ಯ ಲೋಪ ಎಸಗಿರುವುದು ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆಯಲ್ಲಿ ಹಲಸೂರು ಇನ್ಸ್‌ಪೆಕ್ಟರ್ ಪ್ರಕಾಶ್ ಅವರನ್ನು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಕಳೆದ ಒಂದು ತಿಂಗಳ ಹಿಂದೆ ಇದೇ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇನ್‌ಸ್ಟೆಕ್ಟರ್ ಮಂಜುನಾಥ್ ಅವರನ್ನು ಅಮಾನತುಗೊಳಿಸಲಾಗಿತ್ತು.
ಸಸ್ಪೆಂಡ್ ಆದ ಇನ್ಸ್‌ಪೆಕ್ಟರ್ ಪ್ರಕಾಶ್ ಇತ್ತೀಚೆಗೆ ಗಾಂಜಾ ಪ್ರಕರಣವೊಂದರಲ್ಲಿ ಜಪ್ತಿ ಮಾಡಿದ್ದ ವಾಹನವನ್ನು ಮಾರಾಟ ಮಾಡಿರುವ ಗಂಭೀರ ಆರೋಪ ಕೇಳಿ ಬಂದಿತ್ತು. ಪ್ರಕರಣದಲ್ಲಿ ಬಂಧಿತರಾದ ಆರೋಪಿಗಳ ಜತೆ ಶಾಮೀಲಾಗಿದ್ದರು ಎಂಬ ಆಪಾದನೆಯೂ ಇತ್ತು. ಈ ಸಂಬಂಧ ಪ್ರಕಾಶ್ ವಿರುದ್ಧ ದೂರು ಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಇಲಾಖಾ ತನಿಖೆಗೆ ಪೊಲೀಸ್ ಆಯುಕ್ತರು ಸೂಚಿಸಿದ್ದರು. ತನಿಖೆಯಲ್ಲಿ ಪ್ರಕಾಶ್ ಅಪರಾಧ ಎಸಗಿರುವುದು ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆಯಲ್ಲಿ ಸಸ್ಪೆಂಡ್ ಮಾಡಲಾಗಿದೆ.
ಇದನ್ನೂ ಓದಿ : ಅತ್ತಿಬೆಲೆ ಪಟಾಕಿ ದುರಂತದಲ್ಲಿ ಮತ್ತೋರ್ವ ಸಾವು: ಹಿಂದಿನ ತಹಶೀಲ್ದಾರ್ ಸೇರಿ ನಾಲ್ವರು ಅಧಿಕಾರಿಗಳು ಅಮಾನತು
ಈ ಹಿಂದೆ ಇದೇ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇನ್ಸ್‌ಪೆಕ್ಟರ್ ಮಂಜುನಾಥ್ ಅವರನ್ನು ಸಸ್ಪೆಂಡ್ ಮಾಡಲಾಗಿತ್ತು. ಠಾಣೆಗೆ ಪೊಲೀಸ್ ಕಮೀಷನರ್ ದಯಾನಂದ್ ಭೇಟಿ ನೀಡಿದಾಗ ದಾಖಲಾತಿ ನಿರ್ವಹಣೆಯಲ್ಲಿ ಲೋಪವೆಸಗಿರುವುದು ಕಂಡುಬಂದಿತ್ತು. ಈ ಬಗ್ಗೆ ತನಿಖೆ ನಡೆಸುವಂತೆ ಎಸಿಪಿ ಸೂಚಿಸಿದ್ದರು. ತನಿಖಾ ವರದಿ ನೀಡಿದ ಆಧಾರದ ಮೇರೆಗೆ ಆಯುಕ್ತರು ಅಮಾನತುಗೊಳಿಸಿದ್ದರು.
ಅತ್ತಿಬೆಲೆ ಪಟಾಕಿ ದುರಂತ- ನಾಲ್ವರು ಅಧಿಕಾರಿಗಳು ಅಮಾನತು: ಇತ್ತೀಚೆಗೆ ನಡೆದ ಅತ್ತಿಬೆಲೆ ಪಟಾಕಿ ಗೋದಾಮು ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಆನೇಕಲ್ ಹಿಂದಿನ ತಹಶೀಲ್ದಾರ್ ಸೇರಿದಂತೆ ನಾಲ್ವರು ಅಧಿಕಾರಿಗಳನ್ನು ಅಮಾನತುಗೊಳಿಸಿ ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದರು. ಈ ಹಿಂದಿನ ತಹಶೀಲ್ದಾರ್ ಶಶಿಧರ್ ಮಡ್ಕಳ್, ಅತ್ತಿಬೆಲೆ ನಾಡ ಕಚೇರಿ ಡೆಪ್ಯುಟಿ ತಹಶಿಲ್ದಾರ್ ಶ್ರೀಧರ್ ವಿ.ಸಿ, ಅತ್ತಿಬೆಲೆಯ ಈ ಹಿಂದಿನ ವೃತ್ತ ರಾಜಸ್ವ ನಿರೀಕ್ಷಕ ಪುಷ್ಪರಾಜ್, ಗ್ರಾಮ ಆಡಳಿತಾಧಿಕಾರಿ ಭಾಗೇಶ್ ಹೊಸಮನಿ ಅಮಾನತಿಗೆ ಆದೇಶಿಸಲಾಗಿದ್ದು, ನಂತರ ಇಲಾಖಾ ತನಿಖೆಗೆ ಸರ್ಕಾರದ ಅಧೀನ ಕಾರ್ಯದರ್ಶಿ ಸೂಚನೆ ನೀಡಿದ್ದರು.
ಆನೇಕಲ್ ತಹಶೀಲ್ದಾರ್ ಸೇರಿದಂತೆ ಅತ್ತಿಬೆಲೆ ಹಿಂದಿನ ಇನ್ಸ್‌ಪೆಕ್ಟರ್, ಅಗ್ನಿಶಾಮಕದಳದ ಮುಖ್ಯ ಇನ್ಸ್‌ಪೆಕ್ಟರ್ ಅಮಾನತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದರು. ಬೆಂಗಳೂರು ಜಿಲ್ಲಾಧಿಕಾರಿಗೆ ಮತ್ತು ಬೆಂಗಳೂರು ಎಸ್ಪಿಗೆ ನೊಟೀಸ್ ಜಾರಿಗೊಳಿಸಲು ತಿಳಿಸಿದ್ದರು.
ಇದನ್ನೂ ಓದಿ: ರಾಯಚೂರು: ಟ್ರ್ಯಾಕ್ಟರ್ ಚಾಲಕನ ಮೇಲೆ ಹಲ್ಲೆ ಪ್ರಕರಣ, ಮಸ್ಕಿ ಪಿಎಸ್‌ಐ ಸಸ್ಪೆಂಡ್