ಬೆಂಗಳೂರು: ನಾಲ್ಕು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಪಾಲಿಕೆಯ ಆಡಳಿತ ವರದಿ ಮಂಡಿಸಲು ಮುಂದಾಗಿರುವ ಉಪಮೇಯರ್ ಭದ್ರೇಗೌಡ ಅವರ ಪ್ರಯತ್ನಕ್ಕೆ ಅರ್ಧ ಯಶಸ್ಸು ಸಿಗಲಿದೆ ಎಂದು ಆಯುಕ್ತರಾದ ಬಿ.ಹೆಚ್ ಅನಿಲ್ ಕುಮಾರ್ ತಿಳಿಸಿದರು.
ಈಗಾಗಲೇ ಸೆ.27 ಕ್ಕೆ ಮೇಯರ್ ಚುನಾವಣೆಗೆ ಅಧಿಸೂಚನೆ ಹೊರಡಿಸಿರುವುದರಿಂದ ಕೌನ್ಸಿಲ್ ಸಭೆಯಲ್ಲಿ ಯಾವುದೇ ಮಹತ್ವದ ವಿಚಾರ ಚರ್ಚಿಸಲು, ತೀರ್ಮಾನ ತೆಗೆದುಕೊಳ್ಳಲು ಕೆ.ಎಂಸಿ ಕಾಯ್ದೆ ಪ್ರಕಾರ ಅವಕಾಶವಿರುವುದಿಲ್ಲ. ಹೀಗಾಗಿ ಸೆ.18 ರಂದು ಕೇವಲ ಆಡಳಿತ ವರದಿ ಮಂಡನೆ ಮಾಡಲಿದ್ದಾರೆ ಎಂದು ಆಯುಕ್ತರಾದ ಬಿ.ಹೆಚ್ ಅನಿಲ್ ಕುಮಾರ್ ಮಾಹಿತಿ ನೀಡಿದರು.
ಈ ಬಗ್ಗೆ ಮಾತನಾಡಿದ ಉಪಮೇಯರ್ ಭದ್ರೇಗೌಡ, ಆಡಳಿತ ವರದಿ ಸಭೆಯ ಮುಂದೆ ಮಂಡನೆ ಮಾಡುವುದಷ್ಟೇ ನನ್ನ ಜವಾಬ್ದಾರಿ. ಅದನ್ನು ಚರ್ಚೆ ನಡೆಸಿ, ಸರ್ಕಾರಕ್ಕೆ ಕಳಿಸಿ ಒಪ್ಪಿಗೆ ಪಡೆದು, ತನಿಖೆ ಮಾಡುವುದು ಅಧಿಕಾರಿಗಳ ಜವಾಬ್ದಾರಿ. ಈ ಆಡಳಿತ ವರದಿಯಲ್ಲಿ ಮೂರು ವರ್ಷಗಳ ಪಾಲಿಕೆಯ ಆದಾಯ ಹಾಗೂ ವೆಚ್ಚ, 33 ಇಲಾಖೆಗಳ ವಿವರ, ಸಿಬ್ಬಂದಿಗಳ ವಿವರ ಸೇರಿದಂತೆ ಯೋಜನೆಗಳ ಮಾಹಿತಿಗಳು ಇರಲಿವೆ.
ಖರ್ಚು-ವೆಚ್ಚದಲ್ಲಿ, ಯೋಜನೆಗಳ ಜಾರಿಯಲ್ಲಿ ಲೋಪವಿದ್ದರೆ ಪಾಲಿಕೆ ಸದಸ್ಯರು ಚರ್ಚೆ ವೇಳೆ ಬಹಿರಂಗಪಡಿಸಬಹುದಾಗಿದೆ ಎಂದು ಅವರು ತಿಳಿಸಿದರು.
ಇನ್ನೂ ಇದರಿಂದ ಬಿಬಿಎಂಪಿಯ ಪ್ರತಿಯೊಂದು ಲೋಪದೋಷಗಳು ಪತ್ತೆಹಚ್ಚಲು ಸಾಧ್ಯವಾಗಲಿದೆ. ಆದರೆ ಈ ಹಿಂದೆ ಹೇಮಲತಾ ಗೋಪಾಲಯ್ಯ ಅವರು ನೀಡಿದ ಆಡಳಿತ ವರದಿ ಕೇವಲ ಮಂಡನೆಗಷ್ಟೇ ಸೀಮಿತವಾಗಿತ್ತೇ ಹೊರತು ಚರ್ಚೆಯಾಗಿರಲಿಲ್ಲ. ಈ ಬಾರಿಯೂ ಕೇವಲ ಮಂಡನೆಯಾಗುತ್ತಾ ಅಥವಾ ಚರ್ಚೆಗೆ ಹೊಸ ಆಡಳಿತ ಅನುವು ಮಾಡುತ್ತಾ ಎಂದು ಕಾದುನೋಡಬೇಕಿದೆ.