ಬೆಂಗಳೂರು : ವಿಧಾನಸಭೆಯಲ್ಲಿ ಇಂದು ಹಲಾಲ್ ವಿವಾದ ಪ್ರತಿಧ್ವನಿಸಿತು. ಚುನಾವಣಾ ಸುಧಾರಣೆ ಕುರಿತು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಮಾತನಾಡುತ್ತಿದ್ದ ವೇಳೆ ಆಹಾರ ಪದ್ಧತಿ ಬಗ್ಗೆ ಪ್ರಸ್ತಾಪವಾಯಿತು. ಆಗ ಹಿಜಾಬ್ ಆಯ್ತು, ಜಾತ್ರೆಗೆ ನಿರ್ಬಂಧ ವಿಚಾರ ಆಯ್ತು. ಈಗ ಹಲಾಲ್ ವಿವಾದ ಶುರುವಾಗಿದೆ. ಯುಗಾದಿ ಹಬ್ಬದಲ್ಲಿ ನಾವು ಹಲಾಲ್ ಮಾಡಿದ್ದಾರೋ ಇಲ್ಲವೋ ನೋಡುವುದಿಲ್ಲ. ನಾವು ಮಾಂಸದಂಗಡಿಯಿಂದ ತರುವ ಮಾಂಸವನ್ನು ಪೂಜೆಗೆ ಇಡಲ್ಲ. ಯಾಕೆ ಇಂತಹ ವಾತಾವರಣ ನಿರ್ಮಾಣ ಮಾಡಬೇಕು ಎಂದು ಹೆಚ್‌ಡಿಕೆ ಪ್ರಶ್ನಿಸಿದರು.
ಆಹಾರ ಪದ್ಧತಿ ಅವರವರ ಹಕ್ಕು : ಅಲ್ಲದೇ ಇಂತಹ ವಿಚಾರವನ್ನು ಮಾಧ್ಯಮಗಳು ಬಿತ್ತರಿಸಬಾರದು. ವಾಟ್ಸ್‌ಆ್ಯಪ್ ಸಂದೇಶ ನೋಡಿದರೆ ಭಯ ಆಗುತ್ತದೆ. ಯಾರೋ ನಮ್ಮ ಹಿಂದೂ ಸಮಾಜದ ತಿಳಿಗೇಡಿಗಳು ಇದನೆಲ್ಲಾ ಮಾಡಿದ್ದಾರೆ. ಸಮಾಜದಲ್ಲಿ ಕಲುಷಿತ ವಾತಾವರಣ ತರುವ ಪ್ರಯತ್ನಕ್ಕೆ ಪ್ರೋತ್ಸಾಹ ನೀಡಬೇಡಿ ಎಂದು ಸದನದಲ್ಲಿ ವಾಟ್ಸ್‌ಆ್ಯಪ್ ಸಂದೇಶವನ್ನು ಓದಿದರು.
ಈ ವೇಳೆ ಮಧ್ಯೆ ಪ್ರವೇಶಿಸಿ ಮಾತನಾಡಿದ ಸಚಿವ ಆರ್. ಅಶೋಕ್, ಆಹಾರಪದ್ದತಿ ಅವರವರ ಹಕ್ಕು. ಯಾರು ಕೂಡ ಯಾರ ಮೇಲೆ ಬಲವಂತ ಮಾಡುವಂತಿಲ್ಲ. ಇದನ್ನು ಸರ್ಕಾರವು ಸಹಿಸುವುದಿಲ್ಲ ಎಂದರು. ಆಗ ಹೆಚ್‌ಡಿಕೆ ಮಾತನಾಡಿ, ಕಳೆದ ಮೂರು ದಿನಗಳಿಂದ ರಾಜ್ಯದಲ್ಲಿ ಹಲಾಲ್ ವಿವಾದ ದೊಡ್ಡ ಸಂಘರ್ಷವನ್ನು ಉಂಟು ಮಾಡುತ್ತಿದೆ. ದಯವಿಟ್ಟು ಬಿಜೆಪಿ ಸದಸ್ಯರು ಬೇಸರಪಟ್ಟುಕೊಳ್ಳಬಾರದು.
ನಾವು ನೀವೇ ಮಾಡಿದ್ದೀರಿ ಎಂದು ಹೇಳುವುದಿಲ್ಲ. ಆದರೆ, ಮೂರು ದಿನಗಳಿಂದ ಸಮಾಜದಲ್ಲಿ ನಡೆಯುತ್ತಿರುವ ಸಂಘರ್ಷ ಕೆಲವು ಮುಖಂಡರ ಹೇಳಿಕೆಗಳು, ಸಂಘಟನೆಗಳ ಹೇಳಿಕೆಗಳನ್ನು ಗಮನಿಸಿದರೆ ನಾವೇನು ನಾಗರಿಕ ಸಮಾಜದಲ್ಲಿದ್ದೇವೆಯೇ ಇಲ್ಲವೇ ಎಂಬ ಆತಂಕ ಮೂಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಯತ್ನಾಳ್ ಕಾಲೆಳೆದ ಕಾಂಗ್ರೆಸ್ ಶಾಸಕರು : ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೇವಲ ಒಂದು ಕಡೆಯದು ಮಾತ್ರ ಹೇಳುತ್ತಿದ್ದಾರೆ. ಎರಡೂ ಕಡೆಯದ್ದನ್ನು ಹೇಳಿ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಒತ್ತಾಯಿಸಿದರು. ಆಗ ಕಾಂಗ್ರೆಸ್ ಶಾಸಕರು, ಅವರು ಬಿಜೆಪಿಯವರಿಗೆ ಮಾತ್ರ ಹೇಳುತ್ತಿಲ್ಲ. ನೀವೇಕೆ ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಂಡು ನೋಡುತ್ತೀರಿ ಎಂದು ಕಾಲೆಳೆದರು.
ಅಶೋಕ್ ಅವರು ಏಕೆ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು. ಕುಮಾರಸ್ವಾಮಿಯವರು ಬಿಜೆಪಿ ಅಥವಾ ಹಿಂದೂಗಳ ಬಗ್ಗೆ ಮಾತ್ರ ಮಾತನಾಡಬಾರದು. ಈ ರಾಜ್ಯದಲ್ಲಿ ಬೇರೆ ಬೇರೆ ಧರ್ಮದವರು ಏನೇನು ಮಾಡುತ್ತಿದ್ದಾರೆ ಎಂಬುದರ ಬಗ್ಗೆಯೂ ಬೆಳಕು ಚೆಲ್ಲಿ ಎಂದು ಒತ್ತಾಯಿಸಿದರು.
ಆಗ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಎದ್ದು ನಿಂತು, ಹಲಾಲ್ ವಿಚಾರವಾಗಿ ಪೂರ್ಣ ತಿಳುವಳಿಕೆ ಇದ್ದಂಗಿಲ್ಲ. ಇಸ್ಲಾಂ ಧರ್ಮದ ಪ್ರಕಾರ ಅವರು ಹಲಾಲ್ ಮಾಡ್ತಾರೆ. ಕೋಳಿ, ಕುರಿನಾ ಕತ್ತು ಕಟ್ಟು ಮಾಡಿ, ಆ ಬ್ಲಡ್ನ ತೆಗೆಯುತ್ತಾರೆ. ಅದರಲ್ಲಿ ವಿಷಕಾರಿ ಬ್ಲೆಡ್ ಇದ್ದರೆ ಅದು ಸೇವನೆಗೆ ಅರ್ಹವಲ್ಲ ಎಂದು ತೀರ್ಮಾನ ಮಾಡುತ್ತಾರೆ.
ಇದೊಂದು ವೈಜ್ಞಾನಿಕವಾದ ಒಂದು ಮೆಥೆಡ್. ಧಾರ್ಮಿಕವಾಗಿ ಅದನ್ನು ಇಂಪೋಸ್ ಮಾಡಿರುತ್ತಾರೆ. ಆದರೆ, ಬೇರೆಯವರ ಮೇಲೆ ಅದನ್ನು ಇಂಪೋಸ್ ಮಾಡಿಲ್ಲ. ಹಲಾಲ್ ಆಗದೇ ಇದ್ದರೆ, ಅದನ್ನು ಇಸ್ಲಾಂ ಧರ್ಮದವನು ಉಪಯೋಗಿಸಬಾರದು ಎಂದಷ್ಟೆ ಇರುವುದು. ಹಿಂದೂಗಳು ಅಥವಾ ಮುಸ್ಲಿಂಯೇತರರು ಕೆಲವು ಸಲ ಎಲ್ಲರನ್ನೂ ಊಟಕ್ಕೆ ಆಹ್ವಾನಿಸುತ್ತಾರೆ. ಆಗ ಹಲಾಲ್ ಮಾಡಿಸುತ್ತಾರೆ ಎಂದು ವಿವರಣೆ ನೀಡಿದರು.
ಬಿಜೆಪಿ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ ರಮೇಶ್‌ಕುಮಾರ್ : ಹಲಾಲ್ ಎಂಬುದು ಮುಸ್ಲಿಂ ಅಂಗಡಿಗಳಲ್ಲಿ ಮಾಂಸ ತೆಗೆಯುವಾಗ ಮುಸ್ಲಿಮರು ಅನುಸರಿಸುವ ಒಂದು ಪದ್ದತಿಯ ಭಾಗ. ಯಾರು ಇಸ್ಲಾಂ ಧರ್ಮದ ಬಗ್ಗೆ ನಂಬಿಕೆ ಇಟ್ಟಿರುತ್ತಾರೋ ಅಂಥವರು ಹಲಾಲ್ ಮುಟ್ಟುವುದಿಲ್ಲ. ಈಗ ಚುನಾವಣೆ ಹತ್ತಿರ ಬಂದಿದೆ. ಹೈವೇ ರಸ್ತೆಯಲ್ಲಿ ಹೋದರೆ ಟ್ರಾಫಿಕ್ ಸಮಸ್ಯೆಯಾಗಬಹುದು ಎಂದು ಬೈಪಾಸ್‍ನಲ್ಲಿ ಹೋಗುತ್ತಾರೆ. ಇನ್ನು ಚುನಾವಣೆ ಹತ್ತಿರ ಇರುವಾಗ ಏನೇನು ಬರುತ್ತವೆಯೋ ದೇವರೇ ಬಲ್ಲ ಎಂದು ಬಿಜೆಪಿ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದರು.
ಇದನ್ನೂ ಓದಿ: RSS ವ್ಯಕ್ತಿ ದೇಶಕ್ಕಾಗಿ ಪ್ರತಿ ದಿನ ಚಿಂತನೆ ಮಾಡ್ತಾನೆ, ಮದುವೆಯಾಗದೆ ಚಾಪೆಯಲ್ಲಿ ಮಲಗ್ತಾನೆ.. ಅಡ್ಡಂಡ ಕಾರ್ಯಪ್ಪ
ನಂತರ ಚರ್ಚೆ ಮುಂದುವರೆಸಿದ ಕುಮಾರಸ್ವಾಮಿ ಅವರು, ಯುಗಾದಿ ಹಬ್ಬದ ನಂತರ ನಮ್ಮಲ್ಲಿ ವರ್ಷದ ತೊಡಕು ಮಾಡುತ್ತಾರೆ. ಕುರಿ, ಕೋಳಿ ಮಾಂಸವನ್ನು ಜನ ಖರೀದಿಸುತ್ತಾರೆ. ಕೆಲವು ಕಡೆ ಗುಡ್ಡೆ ಮಾಂಸವನ್ನು ಸಹ ಖರೀದಿಸುತ್ತಾರೆ. ಮಾಂಸ ಕಡಿಯುವವರು ಯಾರೋ ಖರೀದಿಸುವವರು ಯಾರೋ? ಬೇಕಾದವರು ತಿನ್ನುತ್ತಾರೆ. ಇದರ ಮಧ್ಯೆ ಕೆಲವರು ಅನಗತ್ಯವಾಗಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಆಗ ಸಚಿವ ಗೋವಿಂದ ಕಾರಜೋಳ ಮಾತನಾಡಿ, ಜಿಲ್ಲಾ ಪಂಚಾಯತ್ ಚುನಾವಣೆ ವೇಳೆ ಅಭ್ಯರ್ಥಿಯೊಬ್ಬ ಮತದಾರರಿಗೆ ಎರಡು ಕೋಳಿಗಳನ್ನು ನೀಡಿದ. ಇದನ್ನು ಗಮನಿಸಿದ ಮತ್ತೊಬ್ಬ ಅಭ್ಯರ್ಥಿ ಮಟನ್ ಜೊತೆಗೆ ಮಾಂಸ ತಿನ್ನದೆ ಇರುವವರಿಗೆ ಸ್ವೀಟ್ ಬಾಕ್ಸ್ ಕೊಡುತ್ತಿದ್ದ. ಸ್ವೀಟ್ ತಿನ್ನುವವರು ಯಾರು ಎಂದು ಎಲ್ಲರಿಗೂ ಗೊತ್ತು. ಹೀಗೆ ನಾನಾ ರೀತಿ ಗಿಮ್ಮಿಕ್‍ಗಳು ಚುನಾವಣೆಯಲ್ಲಿ ನಡೆಯುತ್ತವೆ ಎಂದರು.