ಬೆಂಗಳೂರು : ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ ಮಾಜಿ ಮಂತ್ರಿ ಹೆಚ್ ವಿಶ್ವನಾಥ್ ಸಂಪುಟದಲ್ಲಿ ಸ್ಥಾನ ಗಿಟ್ಟಿಸಲು ತಮ್ಮ ಸಮುದಾಯದಿಂದ ಒತ್ತಡ ಹೇರುವ ಕಸರತ್ತು ನಡೆಸುತ್ತಿದ್ದಾರೆ ಎನ್ನಲಾಗಿದೆ. ಕುರುಬ ಸಮುದಾಯದ ಪ್ರಮುಖ ನಾಯಕರು, ಮುಖಂಡರ ಜೊತೆ ಸಭೆ ನಡೆಸಿ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ. ಕುರುಬ ಸಮುದಾಯದ ಶಕ್ತಿ ಪ್ರದರ್ಶನ ಮಾಡುವ ಮೂಲಕ ಸಚಿವ ಸ್ಥಾನ ಪಡೆಯುವ ಯತ್ನಕ್ಕೆ ಕೈ ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಕ್ಟೋಬರ್ 2ರಂದು ಕುರುಬ ಸಮಾಜದ ಸಮಾರಾಂಭ ನಡೆಯಲಿದೆ. ಆ ಮೂಲಕ ತಮ್ಮ ಶಕ್ತಿ ಪ್ರದರ್ಶನಕ್ಕೆ ವಿಶ್ವನಾಥ್ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ಶೆಫರ್ಡ್ ಇಂಡಿಯಾ ಇಂಟರ್ನ್ಯಾಷನಲ್ನ ವಾರ್ಷಿಕೋತ್ಸವ ಸಮಾರಂಭ ನಡೆಯಲಿದೆ. ಇದರಲ್ಲಿ ರಾಜ್ಯದ, ದೇಶದ, ವಿದೇಶದಲ್ಲಿ ನೆಲೆಸಿರುವ ಕುರುಬ ಸಮುದಾಯದ ಮುಖಂಡರು, ನಾಯಕರು ಪಾಲ್ಗೊಳ್ಳಲಿದ್ದಾರೆ.
ವರ್ಚುವಲ್ ವೇದಿಕೆ ಮೂಲಕ ಈ ಸಮಾರಂಭ ನಡೆಯಲಿದ್ದು, ಈ ಸಮಾರಂಭದ ಸೂತ್ರದಾರರು ಬಿಜೆಪಿ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಹಾಗೂ ಮಾಜಿ ಸಚಿವ ಹೆಚ್ ಎಂ ರೇವಣ್ಣ. ಈ ಸಮಾವೇಶದ ರೂಪುರೇಷೆ ಹೇಗಿರಬೇಕು ಎಂದು ಚರ್ಚಿಸಲು ಇಂದು ಸಂಜೆ ಶಾಸಕರ ಭವನದ ಸಮ್ಮೇಳನ ಸಭಾಂಗಣದಲ್ಲಿ ಕುರುಬ ಸಮಾಜದ ಮುಖಂಡರ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಹೆಚ್ ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದು ಹೇಳಲಾಗಿದೆ.
ಕುರುಬ ಸಮುದಾಯದ ಪ್ರಮುಖ ಮುಖಂಡರು ಈ ಸಭೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದ್ದು, ಹೆಚ್ ವಿಶ್ವನಾಥ್ಗೆ ಸಚಿವ ಸ್ಥಾನ ನೀಡುವ ನಿಟ್ಟಿನಲ್ಲಿ ಸಿಎಂ ಮೇಲೆ ಒತ್ತಡ ಹಾಕುವ ಸಂಬಂಧ ಚರ್ಚೆ ನಡೆಯಲಿದೆ ಎಂದು ಹೇಳಲಾಗಿದೆ. ಬಿಜೆಪಿ ಸರ್ಕಾರ ರಚನೆಗೆ ಕಾರಣಕರ್ತರಾಗಿರುವ ಹೆಚ್ ವಿಶ್ವನಾಥ್ ಅವರಿಗೆ ಸಂಪುಟದಲ್ಲಿ ಸ್ಥಾನ ನೀಡದಿರುವ ಬಗ್ಗೆ ಅವರ ಅಭಿಮಾನಿಗಳಲ್ಲಿ ಅಸಮಾಧಾನವೂ ಇದೆ.