ಬೆಂಗಳೂರು : ಪರಿಷತ್ ಗದ್ದಲ ಪ್ರಕರಣದ ತನಿಖೆ ಹಿನ್ನೆಲೆ ರಚಿಸಲಾಗಿದ್ದ ಸದನ ಸಮಿತಿಗೆ ಬಿಜೆಪಿ ಸದಸ್ಯರು ರಾಜೀನಾಮೆ ನೀಡಿದ್ದಾರೆ. ಬಿಜೆಪಿ ಸದಸ್ಯರಾದ ಹೆಚ್ ವಿಶ್ವನಾಥ್ ಹಾಗೂ ಎಸ್ ವಿ ಸಂಕನೂರು ಅವರು ಸದನ ಸಮಿತಿ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಸಂಬಂಧ ಸದನ ಸಮಿತಿ ಅಧ್ಯಕ್ಷ ಮರಿತಿಬ್ಬೇಗೌಡರಿಗೆ ರಾಜೀನಾಮೆ ಪತ್ರ ಸಲ್ಲಿಕೆ ಮಾಡಿದ್ದಾರೆ.
2020ರ ಡಿಸೆಂಬರ್ 15ರಂದು ಪರಿಷತ್ನಲ್ಲಿ ನಡೆದ ಗದ್ದಲ ಸಂಬಂಧ ತನಿಖೆ ನಡೆಸಲು ಸದನ ಸಮಿತಿ ರಚಿಸಿ ಸಭಾಪತಿಗಳು ಆದೇಶ ಹೊರಡಿಸಿದ್ದರು. ಮಾಜಿ ಉಪಸಭಾಪತಿ ಮರಿತಿಬ್ಬೇಗೌಡ ಅಧ್ಯಕ್ಷತೆಯ ಈ ಸದನ ಸಮಿತಿಯಲ್ಲಿ ಪರಿಷತ್ ಸದಸ್ಯರಾದ ಬಿ ಕೆ ಹರಿಪ್ರಸಾದ್, ಹೆಚ್ ವಿಶ್ವನಾಥ್, ಆರ್ ಬಿ ತಿಮ್ಮಾಪೂರ ಹಾಗೂ ಸಂಕನೂರ ಅವರನ್ನು ಸದಸ್ಯರಾಗಿ ನೇಮಕ ಮಾಡಲಾಗಿತ್ತು.
ಸದನ ಸಮಿತಿ ಡಿ.15ರಂದು ವಿಧಾನ ಪರಿಷತ್ ಸಭಾಂಗಣದಲ್ಲಿ ನಡೆದ ಅಹಿತಕರ ಘಟನೆ ಸಂಬಂಧ ನಿಯಮ ಹಾಗೂ ಕಾನೂನುಬಾಹಿರ ವರ್ತನೆಯ ಅಂಶಗಳ ಬಗ್ಗೆ ಪರಿಶೀಲಿಸುವುದರ ಜೊತೆಗೆ ಘಟನೆಗೆ ಕಾರಣಕರ್ತರಾದ ಪರಿಷತ್ ಸಚಿವಾಲಯದ ಅಧಿಕಾರಿ/ಸಿಬ್ಬಂದಿ ವರ್ಗ, ಭದ್ರತಾ ಸಿಬ್ಬಂದಿ, ಸದನದ ಸದಸ್ಯರು, ಸಚಿವರು ಹಾಗೂ ಇತರರು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸಬೇಕಿತ್ತು. ಈ ವರದಿ ನೀಡಲು 20 ದಿನಗಳ ಕಾಲಾವಕಾಶ ನೀಡಲಾಗಿತ್ತು.
ಇದೀಗ ಈ ಸದನ ಸಮಿತಿಗೆ ಬಿಜೆಪಿ ಸದಸ್ಯರಾದ ಹೆಚ್ ವಿಶ್ವನಾಥ್ ಹಾಗೂ ಸಂಕನೂರು ಅವರು ರಾಜೀನಾಮೆ ನೀಡಿದ್ದಾರೆ. ಸಮಿತಿಯನ್ನು ಬಹಿಷ್ಕರಿಸಿ ಹೊರಬರುತ್ತಿದ್ದೇವೆ ಎಂದು ಸದನ ಸಮಿತಿ ಅಧ್ಯಕ್ಷ ಮರಿತಿಬ್ಬೇಗೌಡರಿಗೆ ಪತ್ರ ಬರೆದಿದ್ದಾರೆ.
ಇದನ್ನೂ ಓದಿ:ಕೊಡವರು ಗೋಮಾಂಸ ತಿನ್ನುತ್ತಾರೆಂದಿದ್ದ ಸಿದ್ದರಾಮಯ್ಯ ವಿರುದ್ಧ ಎಫ್ಐಆರ್