ಬೆಂಗಳೂರು: ಕೊರೊನಾ ಸೋಂಕು ಜನರ ಜೀವ-ಜೀವನದ ಜೊತೆ ಮಾತ್ರ ಚೆಲ್ಲಾಟ ಆಡುತ್ತಿಲ್ಲ. ಇಡೀ ಮನುಕುಲದ ರೀತಿ-ರಿವಾಜುಗಳನ್ನು ಬುಡಮೇಲು ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಗದಗ ಜಿಲ್ಲೆಯ ನರಗುಂದ ತಾಲೂಕಿನ ತಾಯಿ ಒಬ್ಬರು ಮಕ್ಕಳ ಆನ್ಲೈನ್ ಶಿಕ್ಷಣಕ್ಕಾಗಿ ತಾಳಿ ಮಾರಿಕೊಂಡ ಘಟನೆ ನನ್ನ ಹೃದಯ ಹಿಂಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಾಲ್ಕು ಮಕ್ಕಳ ಪೈಕಿ 7 ಮತ್ತು 8 ನೇ ತರಗತಿ ಓದುತ್ತಿರುವ ಇಬ್ಬರು ಮಕ್ಕಳ ಆನ್ಲೈನ್ ಶಿಕ್ಷಣಕ್ಕಾಗಿ ಮನೆಯಲ್ಲಿ ಟಿವಿ ಇಲ್ಲದ ಕಾರಣ ತಾಳಿಯನ್ನು ಅಡವಿಟ್ಟು ನರಗುಂದ ತಾಲೂಕಿನ ರಡ್ಡೇರ ನಾಗನೂರು ಗ್ರಾಮದ ಕಸ್ತೂರಿ ಎಂಬ ಮಹಾತಾಯಿ ದುಸ್ಥಿತಿ ಕಂಡು ಕಣ್ಣಾಲೆಗಳು ತುಂಬಿ ಬಂದಿವೆ. ಇಂತಹ ನೂರಾರು ನಿದರ್ಶನಗಳು ಸದ್ದಿಲ್ಲದೆ, ಸುದ್ದಿಯಾಗದೆ ಬಡ ಪೋಷಕರು ಕೊರೋನಾ ಕಾಲದಲ್ಲಿ ಯಮಯಾತನೆ ಅನುಭವಿಸುತ್ತಿದ್ದಾರೆ. ಇಂತಹ ಘಟನೆಗಳು ಮರುಕಳಿಸದಂತೆ ನಮ್ಮ ಸಮಾಜ ಮತ್ತು ಸರ್ಕಾರ ಎಚ್ಚರ ವಹಿಸಬೇಕಿದೆ ಎಂದು ಒತ್ತಾಯಿಸಿದ್ದಾರೆ. ಆನ್ಲೈನ್ ಶಿಕ್ಷಣದ ಅಪಾಯ ಮತ್ತು ಬಡ ಪೋಷಕರು ಎದುರಿಸುತ್ತಿರುವ ಸಮಸ್ಯೆ ಪರಿಹಾರಕ್ಕೆ ಸರ್ಕಾರ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ತಕ್ಷಣವೇ ಸಮಗ್ರ ಯೋಜನೆಯೊಂದನ್ನು ಕಾರ್ಯಗತಗೊಳಿಸಬೇಕು ಎಂದು ಕುಮಾರಸ್ವಾಮಿ ಟ್ವೀಟ್ ಮೂಲಕ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ತಾಳಿ ಅಡವಿಟ್ಟು ಮಕ್ಕಳ ಆನ್ಲೈನ್ ಶಿಕ್ಷಣಕ್ಕೆ ಟಿವಿ ಕೊಡಿಸಿದ ಮಹಾತಾಯಿ
ಎನಗೆ ಮನೆ ಇಲ್ಲ, ಎನಗೆ ಧನವಿಲ್ಲ ,
ಮಾಡುವದೇನು? ನೀಡುವದೇನು?
ಮನೆ ಧನ ಸಕಲ ಸಂಪದ ಸೌಖ್ಯವುಳ್ಳ,
ನಿಮ್ಮ ಶರಣರ ತಪ್ಪಲಕ್ಕಿಯ ತಂದು,
ಎನ್ನೊಡಲ ಹೊರೆವೇನಾಗಿ,
ಅಮರೇಶ್ವರ ಲಿಂಗಕ್ಕೆ ನೀಡುವ ಬಯಕೆ ಎನಗಿಲ್ಲ ಸಂಗನ ಬಸವಣ್ಣಾ ಎಂದು ವಚನದ ಮೂಲಕ ಹೆಚ್ಡಿಕೆ ಅವರು ಬಡ ಕುಟುಂಬದ ಸಂಕಷ್ಟವನ್ನು ವಿವರಿಸಿದ್ದಾರೆ.
ನರಗುಂದ ತಾಲೂಕಿನ ರಡ್ಡೇರ್ ನಾಗನೂರ ಗ್ರಾಮದ ಕಸ್ತೂರಿ ಅವರು ತನ್ನಿಬ್ಬರ ಮಕ್ಕಳ ಶಿಕ್ಷಣಕ್ಕಾಗಿ ಈ ತ್ಯಾಗ ಮಾಡಿರುವ ಕುರಿತು 'ಈಟಿವಿ ಭಾರತ', 'ತಾಳಿ ಅಡವಿಟ್ಟು ಮಕ್ಕಳ ಆನ್ಲೈನ್ ಶಿಕ್ಷಣಕ್ಕೆ ಟಿವಿ ಕೊಡಿಸಿದ ಮಹಾತಾಯಿ' ಎಂಬ ಶೀರ್ಷಿಕೆಯಡಿ ಎಕ್ಸ್ಕ್ಲೂಸಿವ್ ವರದಿ ಬಿತ್ತರಿಸಿತ್ತು. ಈ ವರದಿ ನೋಡಿದ ಮಾಜಿ ಸಿಎಂ ಕುಮಾರಸ್ವಾಮಿ, ಬಹಳ ಬೇಸರ ವ್ಯಕ್ತಪಡಿದ್ದಾರೆ. ರಾಜ್ಯ ಸರ್ಕಾರ ಇಂತಹ ಸಮಸ್ಯೆಗಳ ಬಗ್ಗೆ ತಕ್ಷಣ ಗಮನ ಹರಿಸಬೇಕು. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸಮಗ್ರ ಯೋಜನೆ ರೂಪಿಸಬೇಕು ಎಂದು ಒತ್ತಾಯಿಸಿದ್ದಾರೆ.