ಬೆಂಗಳೂರು: ಮುಸ್ಲಿಂ ಸಮುದಾಯದ ಜತೆ ನಾನು ನಿಂತಿದ್ದೆ. ಆದರೆ ಆ ಸಮುದಾಯ ಜೆಡಿಎಸ್ ಜತೆ ನಿಲ್ಲಲಿಲ್ಲ ಎಂದು ಹೇಳುವ ಎಚ್ ಡಿ ಕುಮಾರಸ್ವಾಮಿ ಅವರು ಚನ್ನಪಟ್ಟಣದಲ್ಲಿ ಯಾರ ಮತಗಳಿಂದ ಗೆದ್ದರು ಎಂಬುದನ್ನು ಹೇಳಲಿ ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಆಗ್ರಹಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚನ್ನಪಟ್ಟಣದಲ್ಲಿ ಮುಸ್ಲಿಂ ಸಮುದಾಯ ಮತ ನೀಡಿರದಿದ್ದರೆ ಅವರು ಗೆಲ್ಲುತ್ತಿದ್ದರೆ ಎಂಬುದನ್ನು ಎದೆ ಮುಟ್ಟಿಕೊಂಡು ಹೇಳಲಿ. ಹೊಳೆ ನರಸೀಪುರದಲ್ಲಿ ಎಚ್ ಡಿ ರೇವಣ್ಣ, ತುರುವೇಕೆರೆ ಕೃಷ್ಣಪ್ಪ, ಚಿಕ್ಕ ನಾಯಕನಹಳ್ಳಿ ಸುರೇಶ್ ಬಾಬು, ಗುರುಮಿಠಕಲ್ ನಾಗನಗೌಡ ಕಂದಕೂರು, ದೇವದುರ್ಗ ಕರೆಮ್ಮ, ಚನ್ನರಾಯಪಟ್ಟಣ ಬಾಲಕೃಷ್ಣ ಇವರೆಲ್ಲ ಮುಸ್ಲಿಂ ಸಮುದಾಯ ನಮಗೆ ಮತ ಹಾಕಿಲ್ಲ ಎಂದು ಹೇಳಲಿ ನೋಡೋಣ ಎಂದು ಸವಾಲು ಹಾಕಿದರು.
ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಅವರು ದೊಡ್ಡ ಅಂತರದಲ್ಲಿ ಗೆಲ್ಲಲಿಲ್ಲ. ಅಲ್ಲಿ ಮುಸ್ಲಿಂ ಸಮುದಾಯ ಒಟ್ಟಾಗಿ ಮತ ಕೊಟ್ಟಿದ್ದಕ್ಕೆ ಗೆದ್ದಿದ್ದು, ಇಲ್ಲದಿದ್ದರೆ ಸೋಲುತ್ತಿದ್ದರು. ಮುಸ್ಲಿಂ ಸಮುದಾಯ ಜೆಡಿಎಸ್ ಗೆ ಮತ ಕೊಟ್ಟಿದ್ದಕ್ಕೆ 19 ಸ್ಥಾನ ಬಂದಿದೆ. ಇಲ್ಲದಿದ್ದರೆ 5 ರಿಂದ ಆರು ಸ್ಥಾನ ಬರುತ್ತಿತ್ತು ಎಂದು ಹೇಳಿದರು.
ಹೆಚ್.ಡಿ. ಕುಮಾರಸ್ವಾಮಿ ಅವರು ಬಿಜೆಪಿ ಜತೆ ಹೋಗುವ ಸಲುವಾಗಿ ಮುಸ್ಲಿಂ ಮತ ಕೊಡಲಿಲ್ಲ ಎಂದು ಹೇಳುವುದು ಎಷ್ಟರ ಮಟ್ಟಿಗೆ ಸರಿ. ಇದು ಮುಸ್ಲಿಂ ಸಮುದಾಯಕ್ಕೆ ಮಾಡಿದ ಅವಮಾನ ಎಂದು ಸಚಿವ ಜಮೀರ್ ಅಹಮದ್ ಖಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾನು ಅಪಾರವಾಗಿ ಗೌರವಿಸುವ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಕೋಮುವಾದಿ ಬಿಜೆಪಿ ವಿರುದ್ಧ ಇದ್ದವರು. ಆದರೆ ಕುಮಾರಸ್ವಾಮಿ ತಮ್ಮ ರಾಜಕಾರಣಕ್ಕೆ ಗೌಡರ ತತ್ವ ಸಿದ್ಧಾಂತ ಬಲಿ ಕೊಟ್ಟಿದ್ದಾರೆ ಎಂದು ದೂರಿದರು.
ಕರ್ನಾಟಕವನ್ನು ಕುಡುಕರ ತೋಟ ಮಾಡಲಿರುವ ಕಾಂಗ್ರೆಸ್: ಎಚ್ಡಿಕೆ ಕಿಡಿ
ಕರ್ನಾಟಕ ರಾಜ್ಯ ವಿಜ್ಞಾನ, ತಂತ್ರಜ್ಞಾನ, ಆವಿಷ್ಕಾರ, ಐಟಿ-ಬಿಟಿಗೆ ಪ್ರಸಿದ್ಧಿ ಪಡೆದಿದೆ. ಇನ್ನು ಮುಂದೆ ಇದು ಬದಲಾಗಬಹುದು. ಕಾಂಗ್ರೆಸ್ ಸರ್ಕಾರ 'ಕರ್ನಾಟಕವನ್ನು ಕುಡುಕರ ತೋಟ'ವನ್ನಾಗಿ ಮಾಡಲಿದೆ. ಚುನಾವಣೆಗೂ ಮುನ್ನ 'ಸರ್ವಜನಾಂಗದ ಶಾಂತಿಯ ತೋಟ' ಎನ್ನುತ್ತಿದ್ದರು. ಗೆದ್ದ ನಂತರ 'ಕರ್ನಾಟಕ ಕುಡುಕರ ತೋಟ' ಎನ್ನುತ್ತಿದ್ದಾರೆ. ಇದು ರಾಜ್ಯ ಕಾಂಗ್ರೆಸ್ ಸರ್ಕಾರದ ಸಂಕಲ್ಪ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಟೀಕಿಸಿದ್ದಾರೆ.
ಎಚ್ಡಿಕೆ ಟ್ವೀಟ್: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಾಮಾಜಿಕ ಜಾಲತಾಣ ವೇದಿಕೆ Xನಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಹೆಚ್ ಡಿ ಕುಮಾರಸ್ವಾಮಿ, ಯೋಜನೆಗಳ ಹೆಸರಲ್ಲಿ ಕೊಳ್ಳೆ ಹೊಡೆಯುವ ಹುನ್ನಾರ ಕಾಂಗ್ರೆಸ್ ಸರ್ಕಾರದ್ದು. ಒಂದೆಡೆ ಮನೆಮನೆಗೂ ಗೃಹಜ್ಯೋತಿ ಎಂದು ಹೇಳಿ, ಈಗ ಮನೆ ಮನೆಗೂ 'ಮದ್ಯಭಾಗ್ಯ' ನೀಡಲು ಹೊರಟಿದೆ. ಸರ್ಕಾರ ಧನಪಿಶಾಚಿ ಅವತಾರವೆತ್ತಿ ಅಬಕಾರಿ ಆದಾಯ ಹೆಚ್ಚಿಸಿಕೊಳ್ಳಲು ಈಗ ಮದ್ಯ ಸಮಾರಾಧನೆಗೆ ಶ್ರೀಕಾರ ಹಾಡಿದೆ. ಇದು 6ನೇ ಗ್ಯಾರಂಟಿ ಎಂದು ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ:ಸದ್ಯದಲ್ಲೇ ಕುಮಾರಸ್ವಾಮಿ ಜೊತೆ ಮಾತುಕತೆ ನಡೆಸುತ್ತೇನೆ : ಬಿ ಎಸ್ ಯಡಿಯೂರಪ್ಪ