ಬೆಂಗಳೂರು : ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡು ವಿಧಾನಸಭೆಯಲ್ಲಿ ಅಂಗೀಕಾರ ಮಾಡಿರುವ ನಿರ್ಣಯಕ್ಕೆ ಯಾವುದೇ ಕಿಮ್ಮತ್ತು ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದರು.
ವಿಧಾನಸಭೆಯಲ್ಲಿ ಇಂದು ಶೂನ್ಯವೇಳೆಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಮಾಡಬೇಕಿರುವ ಕೆಲಸವೆಂದರೆ, ಮೊದಲು ಪ್ರಧಾನಮಂತ್ರಿಗಳು ಹಾಗೂ ಕೇಂದ್ರ ಜಲಶಕ್ತಿ ಸಚಿವರ ಮನವೊಲಿಕೆ ಮಾಡಬೇಕು.
ತಾಂತ್ರಿಕವಾಗಿ ಮತ್ತು ಕಾನೂನಾತ್ಮಕವಾಗಿ ರಾಜ್ಯವು ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ತರುವ ನ್ಯಾಯಬದ್ಧ ಹಕ್ಕು ಹೊಂದಿದೆ ಎಂದು ಪ್ರತಿಪಾದಿಸಿದ ಅವರು, 2007ರಲ್ಲಿ ಟ್ರಿಬ್ಯುನಲ್ ತೀರ್ಪು ಬಂದ ಬಳಿಕ ಸುಪ್ರೀಂಕೋರ್ಟ್ ಮುಂದೆ ಹೋಗಿದ್ದೆವು.
ಬೆಂಗಳೂರು ನಗರಕ್ಕೆ ನೀರು ಹಂಚಿಕೆ ಬಗ್ಗೆ ಬೇಡಿಕೆ ಇಟ್ಟು ಮನವಿ ಮಾಡಿದ್ದೆವು. ಆಮೇಲೆ ಸುಪ್ರೀಂಕೋರ್ಟ್ ನೀರು ಹಂಚಿಕೆ ಮಾಡಿತು ಎಂದು ಹೇಳಿದರು. ತಮಿಳುನಾಡು ತಕರಾರಿಲ್ಲ ಎಂದು ಹೇಳಿದೆ. ಮೆಟ್ಟೂರು ಬಳಿ ಅಣೆಕಟ್ಟು ಪ್ರದೇಶದ ಹಿಂದಕ್ಕೆ, ಅಂದರೆ ಗಡಿ ಪ್ರದೇಶದಲ್ಲಿ ಅಣೆಕಟ್ಟು ಕಟ್ಟಲು ನಮ್ಮ ತಕರಾರಿಲ್ಲ ಎಂದು ತಮಿಳುನಾಡು ವಕೀಲರೇ ಸುಪ್ರೀಂಕೋರ್ಟ್ ಮುಂದೆ ಹೇಳಿಕೆ ನೀಡಿದ್ದಾರೆ ಎಂಬ ಅಂಶವನ್ನು ಹೆಚ್‌ಡಿಕೆ ಸದನದ ಗಮನಕ್ಕೆ ತಂದರು.
ಇದನ್ನೂ ಓದಿ: ಅಪ್ಪುಗೆ ವಿಶೇಷ ಗೌರವ ಸಲ್ಲಿಸಿದ ಹುಬ್ಬಳ್ಳಿ ಜನ : ಬಣ್ಣದ ಹಬ್ಬದಲ್ಲಿ ಪುನೀತ್ ಸ್ಮರಣೆ
ಮಾಜಿ ಪ್ರಧಾನಮಂತ್ರಿ ಹೆಚ್ ಡಿ ದೇವೇಗೌಡರು, ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಮೇಕೆದಾಟು ಯೋಜನೆ ಕಾರ್ಯಗತ ಮಾಡುವ ಬಗ್ಗೆ ಮಹತ್ವದ ಸಲಹೆ ನೀಡಿದ್ದಾರೆ. 67 ಟಿಎಂಸಿ ಸಾಮರ್ಥ್ಯದ ಜಲಾಶಯವನ್ನು ಒಂದೇ ಹಂತದಲ್ಲಿ ಮಾಡುವ ಬದಲು ಎರಡು ಹಂತಗಳಲ್ಲಿ ಮಾಡಿ ಎಂದು ಹೇಳಿದ್ದಾರೆ.
ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ನಗರಕ್ಕೆ 4.5 ಟಿಎಂಸಿ ನೀರು ಬಳಕೆ ಮಾಡುವುದು ಸೇರಿ, ರಾಜ್ಯಕ್ಕೆ ಹಂಚಿಕೆ ಆಗಿರುವ ಪಾಲಿನ ನೀರನ್ನು ಬಳಕೆ ಮಾಡಿಕೊಳ್ಳಲು ಎರಡು ಹಂತಗಳು ಉತ್ತಮ ಎಂದು ಮಾಜಿ ಪ್ರಧಾನಿಗಳು ಹೇಳಿದ್ದಾರೆ ಎಂದು ವಿವರಿಸಿದರು.
ರಾಜ್ಯಕ್ಕೆ ಬೇಕಿರುವುದು ಕೇಂದ್ರ ಪರಿಸರಾತ್ಮಕ ಅನುಮೋದನೆಯೇ ಹೊರತು ತಮಿಳುನಾಡಿನ ಒಪ್ಪಿಗೆ ಅಲ್ಲ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ತಮಿಳುನಾಡು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು. ಇದಕ್ಕೆ ಉತ್ತರ ಬರೆದಿರುವ ನೆರೆ ರಾಜ್ಯದ ಮುಖ್ಯಮಂತ್ರಿಗಳು, ಬೆಂಗಳೂರಿಗೆ ಸುಪ್ರೀಂಕೋರ್ಟ್ ಹಂಚಿಕೆ ಮಾಡಿರುವ 4.5 ಟಿಎಂಸಿ ಸಾಮರ್ಥ್ಯದ ಅಣೆಕಟ್ಟು ಬಗ್ಗೆ ತಕರಾರು ತೆಗೆದಿಲ್ಲ.
ಆದರೆ, ಕುಡಿಯುವ ನೀರು ಶೇಖರಣೆಗೆ 67 ಟಿಎಂಸಿ ಸಾಮರ್ಥ್ಯದ ಅಣೆಕಟ್ಟು ಯಾಕೆ ಎಂಬುದು ಪ್ರಶ್ನೆ. ಹೀಗಾಗಿ, ಬೆಂಗಳೂರು ನೀರಿನ ಬಳಕೆಗೆ ಬೇಕಿರುವ ಅಣೆಕಟ್ಟು ಕಟ್ಟಲು ತಮಿಳುನಾಡು ವಿರೋಧ ಇಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು. ಸರ್ವಪಕ್ಷ ಸಭೆ ಬಳಿಕ ಮೊದಲ ಹಂತದಲ್ಲಿ ಜಲಸಂಪನ್ಮೂಲ ಸಚಿವರನ್ನು ದೆಹಲಿಗೆ ಕಳಿಸಿ ಒಪ್ಪಿಗೆ ಪಡೆಯುತ್ತೇವೆ.
ಅದೂ ಆಗದಿದ್ದರೆ, ಲೋಕಸಭಾ ಸದಸ್ಯರ ನಿಯೋಗ ಕರೆದುಕೊಂಡು ಹೋಗುವುದಾಗಿ ಸರ್ಕಾರ ಹೇಳಿದೆ. ಸುಖಾಸುಮ್ಮನೆ ಕಾಲಹರಣ ಮಾಡದೆ ಪರಿಸರಾತ್ಮಕ ಒಪ್ಪಿಗೆ ಪಡೆಯಬೇಕು ಎಂದು ಒತ್ತಾಯಿಸಿದರು. ಕೇಂದ್ರೀಯ ಜಲ ಆಯೋಗದ ಸಭೆಯಲ್ಲಿ ಎರಡು ಮೂರು ಬಾರಿ ಚರ್ಚೆ ನಡೆಸಿದರೂ ತಮಿಳುನಾಡು ಸರ್ಕಾರ ಸಹಕಾರ ನೀಡಿಲ್ಲ. ಆ ಸಭೆಯಲ್ಲಿ ಯಾವುದೇ ಫಲಿತಾಂಶ ಬರುತ್ತಿಲ್ಲ. ಒಂಬತ್ತು ಜನರ ಸದಸ್ಯರಲ್ಲಿ ಎಲ್ಲಾ ರಾಜ್ಯದ ಒಬ್ಬರಿದ್ದಾರೆ. ಆದರೂ ನಮಗೆ ಅನುಮತಿ ತಡವಾಗುತ್ತಿದೆ ಎಂದು ಹೆಚ್‌ಡಿಕೆ ಹೇಳಿದರು.